ಯುಪಿಎಸ್‌ಸಿ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ
ʻಅವರ ರಾಜೀನಾಮೆಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ಸಂಬಂಧಿಸಿದಂತೆ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ದ ಸುತ್ತಲಿನ ವಿವಾದಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ,ʼ ಎಂದು ಮೂಲಗಳು ತಿಳಿಸಿವೆ.
ಯುಪಿಎಸ್‌ಸಿ ಅಧ್ಯಕ್ಷ ಮನೋಜ್ ಸೋನಿ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ, ರಾಜೀನಾಮೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ (ಜುಲೈ 20) ತಿಳಿಸಿವೆ.
ಅವರ ಅಧಿಕಾರಾವಧಿಯು ಮೇ 2029 ರಲ್ಲಿ ಮುಕ್ತಾಯಗೊಳ್ಳುತ್ತಿತ್ತು. ʻಅವರ ರಾಜೀನಾಮೆಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ಸಂಬಂಧಿಸಿದಂತೆ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ದ ಸುತ್ತಲಿನ ವಿವಾದಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ,ʼ ಎಂದು ಮೂಲಗಳು ತಿಳಿಸಿವೆ.
ʻಯುಪಿಎಸ್‌ಸಿ ಅಧ್ಯಕ್ಷರು ಹದಿನೈದು ದಿನಗಳ ಹಿಂದೆ ವೈಯಕ್ತಿಕ ಕಾರಣ ಉಲ್ಲೇಖಿಸಿ, ರಾಜೀನಾಮೆ ನೀಡಿದ್ದಾರೆ. ಅದನ್ನು ಇನ್ನೂ ಅಂಗೀಕರಿಸಿಲ್ಲ,ʼ ಎಂದು ಮೂಲವೊಂದು ತಿಳಿಸಿದೆ.
ಶಿಕ್ಷಣ ತಜ್ಞರಾದ ಸೋನಿ(59), ಜೂನ್ 28, 2017 ರಂದು ಆಯೋಗದ ಸದಸ್ಯರಾಗಿ ಅಧಿಕಾರ ವಹಿಸಿಕೊಂಡರು. ಆನಂತರ ಮೇ 16, 2023 ರಂದು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.
ʻಅವರು ಅಧ್ಯಕ್ಷರಾಗಿ ಮುಂದುವರಿಯಲು ಉತ್ಸುಕರಾಗಿಲ್ಲ. ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ. ಸಾಮಾಜಿಕ-ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚು ಸಮಯ ವಿನಿಯೋಗಿಸಲು ಬಯಸಿದ್ದಾರೆ ,ʼ ಎಂದು ಮೂಲಗಳು ತಿಳಿಸಿವೆ.
ಯುಪಿಎಸ್‌ಸಿ ಪೂಜಾ ಖೇಡ್ಕರ್ ವಿರುದ್ಧ ಶುಕ್ರವಾರ (ಜುಲೈ 19) ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ ಮತ್ತು ಭವಿಷ್ಯದಲ್ಲಿ ಅವರನ್ನು ಪರಿಗಣಿಸದೆ ಇರಲು ಕ್ರಮ ತೆಗೆದುಕೊಂಡಿದೆ.
ನಕಲಿ ಪ್ರಮಾಣಪತ್ರಗಳ ಸುರಿಮಳೆ: ಪೂಜಾ ಖೇಡ್ಕರ್ ಅವರಿಂದ ಅಧಿಕಾರ ಮತ್ತು ಸವಲತ್ತುಗಳ ದುರುಪಯೋಗ ಪ್ರಕರಣ ಮುನ್ನೆಲೆಗೆ ಬಂದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳಿಂದ ನಕಲಿ ಪ್ರಮಾಣಪತ್ರಗಳ ಬಳಕೆ ಬಗ್ಗೆ ವಾದ-ಪ್ರತಿವಾದ ನಡೆಯುತ್ತಿದೆ.
ಕೆಲವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹೆಸರು, ಫೋಟೋ ಮತ್ತು ಇತರ ವಿವರಗಳನ್ನು ಹಂಚಿಕೊಂಡಿದ್ದು, ಇತರ ಹಿಂದುಳಿದ ವರ್ಗ (ಕೆನೆಪದರಕ್ಕೆ ಸೇರದವರು) ಮತ್ತು ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್)ಗಳಿಗೆ ಸಿಗುವ ಸೌಲಭ್ಯಗಳನ್ನು ಪಡೆಯಲು ನಕಲಿ ಪ್ರಮಾಣಪತ್ರಗಳನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ.
ಮೂರು ಅವಧಿಗೆ ಉಪಕುಲಪತಿಯಾಗಿ ಸೇವೆ: ಯುಪಿಎಸ್‌ಸಿಗೆ ನೇಮಕಗೊಳ್ಳುವ ಮೊದಲು, ಸೋನಿ ಅವರು ಮೂರು ಅವಧಿಗೆ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಗುಜರಾತಿನ ಡಾ ಬಾಬಾಸಾಹೇಬ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯ(ಎರಡು ಅವಧಿ, ಆಗಸ್ಟ್ 1, 2009 ರಿಂದ ಜುಲೈ 31, 2015) ಮತ್ತು ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾನಿಲಯ(ಏಪ್ರಿಲ್ 2005 ರಿಂದ ಏಪ್ರಿಲ್ 2008)ದ ಉಪಕುಲಪತಿ ಆಗಿದ್ದರು.ಎಂಎಸ್ ಯುಗೆ ಸೇರಿದಾಗ ಅವರು ದೇಶದ ಅತ್ಯಂತ ಕಿರಿಯ ಉಪಕುಲಪತಿಯಾಗಿದ್ದರು.
ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಪರಿಣತಿ ಹೊಂದಿರುವ ರಾಜಕೀಯ ವಿಜ್ಞಾನಿ ಸೋನಿ, 1991-2016 ರ ನಡುವೆ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದ ವಲ್ಲಭ ವಿದ್ಯಾನಗರದಲ್ಲಿ ಅಂತಾರಾಷ್ಟ್ರೀಯ ಸಂಬಂಧ ವಿಷಯ ಕಲಿಸುತ್ತಿದರು. ಹಲವು ಪುರಸ್ಕಾರ ಮತ್ತು ಪ್ರಶಸ್ತಿಗಳಲ್ಲದೆ, ಗಮನಾರ್ಹ ಸಂಖ್ಯೆಯ ಲೇಖನ-ಹೊತ್ತಗೆ ಪ್ರಕಟಿಸಿದ್ದಾರೆ.
ಯುಪಿಎಸ್‌ಸಿಯಲ್ಲಿ ಅಧ್ಯಕ್ಷರಲ್ಲದೆ, ಗರಿಷ್ಠ ಹತ್ತು ಸದಸ್ಯರು ಇರುತ್ತಾರೆ. ಪ್ರಸ್ತುತ, ಏಳು ಸದಸ್ಯರು ಇದ್ದಾರೆ.