
ಅಪಘಾತವಾಗಿರುವ ಕೇಂದ್ರ ಸಚಿವೆ ಬೇಬಿ ರಾಣಿ ಮೌರ್ಯ ಕಾರು
ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: ಸಚಿವೆ ಬೇಬಿ ರಾಣಿ ಮೌರ್ಯ ಪವಾಡಸದೃಶ ಪಾರು
ಸಚಿವರ ಚಾಲಕ ತಕ್ಷಣವೇ ಎಚ್ಚೆತ್ತುಕೊಂಡು ಕಾರನ್ನು ನಿಯಂತ್ರಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆಯ ನಂತರ, ಸಚಿವೆ ಬೇಬಿ ರಾಣಿ ಮೌರ್ಯ ಅವರನ್ನು ಬೇರೆ ವಾಹನದಲ್ಲಿ ಸುರಕ್ಷಿತವಾಗಿ ಲಕ್ನೋಗೆ ಕಳುಹಿಸಿಕೊಡಲಾಯಿತು.
ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಉತ್ತರ ಪ್ರದೇಶದ ಮಹಿಳಾ ಕಲ್ಯಾಣ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಬೇಬಿ ರಾಣಿ ಮೌರ್ಯ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ, ವಾಹನವು ಜಖಂಗೊಂಡಿದ್ದರೂ, ಚಾಲಕನ ಸಮಯಪ್ರಜ್ಞೆಯಿಂದಾಗಿ ಸಚಿವರು ಮತ್ತು ಇತರರು ಸುರಕ್ಷಿತವಾಗಿದ್ದಾರೆ.
ಘಟನೆಯು ಫಿರೋಜಾಬಾದ್ ಜಿಲ್ಲೆಯ ನಸೀರ್‌ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ 56ನೇ ಕಿಲೋಮೀಟರ್ ಬಳಿ ರಾತ್ರಿ ಸುಮಾರು 8. 40ಕ್ಕೆ ಸಂಭವಿಸಿದೆ. ಸಚಿವೆ ಮೌರ್ಯ ಅವರು ಹತ್ರಾಸ್‌ನಲ್ಲಿ ನಡೆದ ಕಾರ್ಯಕ್ರಮಗಳನ್ನು ಮುಗಿಸಿ ಲಕ್ನೋಗೆ ಹಿಂದಿರುಗುತ್ತಿದ್ದಾಗ, ಅವರ ಕಾರಿನ ಮುಂದೆ ಸಾಗುತ್ತಿದ್ದ ಟ್ರಕ್‌ನ ಟೈರ್ ಹಠಾತ್ತನೆ ಸ್ಫೋಟಗೊಂಡಿದೆ. ಇದರಿಂದಾಗಿ ನಿಯಂತ್ರಣ ಕಳೆದುಕೊಂಡ ಟ್ರಕ್, ಸಚಿವರ 'ಫಾರ್ಚೂನರ್' ಕಾರಿಗೆ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ.
ಆದರೆ, ಸಚಿವರ ಚಾಲಕ ತಕ್ಷಣವೇ ಎಚ್ಚೆತ್ತುಕೊಂಡು ಕಾರನ್ನು ನಿಯಂತ್ರಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆಯ ನಂತರ, ಸಚಿವೆ ಬೇಬಿ ರಾಣಿ ಮೌರ್ಯ ಅವರನ್ನು ಬೇರೆ ವಾಹನದಲ್ಲಿ ಸುರಕ್ಷಿತವಾಗಿ ಲಕ್ನೋಗೆ ಕಳುಹಿಸಿಕೊಡಲಾಯಿತು. ಪೊಲೀಸರು ಸ್ಥಳಕ್ಕೆ ಧಾವಿಸಿ, ಅಪಘಾತಕ್ಕೆ ಕಾರಣವಾದ ಟ್ರಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು 'X' ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಸಚಿವರು, "ದೇವರ ಕೃಪೆ ಮತ್ತು ನಿಮ್ಮೆಲ್ಲರ ಹಾರೈಕೆಯಿಂದ ನಾನು ಸುರಕ್ಷಿತವಾಗಿದ್ದೇನೆ" ಎಂದು ತಿಳಿಸಿದ್ದಾರೆ. ಅಲ್ಲದೆ, ಎಕ್ಸ್‌ಪ್ರೆಸ್‌ವೇಯಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

