ಕನ್ವರ್ ಯಾತ್ರೆಯಲ್ಲಿ ಹಿಂಸಾಚಾರ; ಶಿವಭಕ್ತರಿಗೆ ತ್ರಿಶೂಲ, ಹಾಕಿ ಸ್ಟಿಕ್‌ಗಳಿಗೆ ಯುಪಿ ಸರ್ಕಾರ ನಿಷೇಧ
x

ಕನ್ವರ್ ಯಾತ್ರೆಯಲ್ಲಿ ಹಿಂಸಾಚಾರ; ಶಿವಭಕ್ತರಿಗೆ ತ್ರಿಶೂಲ, ಹಾಕಿ ಸ್ಟಿಕ್‌ಗಳಿಗೆ ಯುಪಿ ಸರ್ಕಾರ ನಿಷೇಧ

ಈ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಿರುವ ಪೊಲೀಸರು, ಸಾಂಕೇತಿಕವಾಗಿದ್ದರೂ ಸಹ ಯಾವುದೇ ರೀತಿಯ ಆಯುಧ ಪ್ರದರ್ಶನವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.


ಉತ್ತರ ಪ್ರದೇಶದಲ್ಲಿ ನಡೆಯುವ ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಯಾತ್ರಾರ್ಥಿಗಳಿಂದಲೇ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಕಠಿಣ ಕ್ರಮಕ್ಕೆ ಮುಂದಾಗಿದೆ. ಯಾತ್ರೆಯ ಮಾರ್ಗದುದ್ದಕ್ಕೂ ಯಾತ್ರಾರ್ಥಿಗಳು ತ್ರಿಶೂಲಗಳು, ಹಾಕಿ ಸ್ಟಿಕ್‌ಗಳು ಮತ್ತು ಇತರ ಮಾರಕ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಇತ್ತೀಚಿನ ದಿನಗಳಲ್ಲಿ, ಕೇಸರಿ ಬಟ್ಟೆ ಧರಿಸಿದ ಕನ್ವರ್ ಯಾತ್ರಾರ್ಥಿಗಳು ರಸ್ತೆಗಳಲ್ಲಿ ಗಲಾಟೆ ಮಾಡುವುದು, ಹೋಟೆಲ್‌ಗಳನ್ನು ಧ್ವಂಸಗೊಳಿಸುವುದು ಮತ್ತು ಸಾಮಾನ್ಯ ನಾಗರಿಕರ ಮೇಲೆ ಹಲ್ಲೆ ನಡೆಸುವಂತಹ ಹಲವಾರು ಘಟನೆಗಳು ವರದಿಯಾಗಿವೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೆ, ಶಬ್ದ ಮಾಲಿನ್ಯವನ್ನು ತಡೆಗಟ್ಟಲು ಸೈಲೆನ್ಸರ್ ಇಲ್ಲದ ಬೈಕ್‌ಗಳ ಬಳಕೆಯನ್ನು ಕೂಡ ಯಾತ್ರಾ ಮಾರ್ಗದಲ್ಲಿ ನಿಷೇಧಿಸಲಾಗಿದೆ.

ಈ ಬಗ್ಗೆ ಸ್ಪಷ್ಟ ಎಚ್ಚರಿಕೆ ನೀಡಿರುವ ಪೊಲೀಸರು, ಸಾಂಕೇತಿಕವಾಗಿದ್ದರೂ ಸಹ ಯಾವುದೇ ರೀತಿಯ ಆಯುಧ ಪ್ರದರ್ಶನವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಮೀರತ್ ವಲಯದ ಎಡಿಜಿಪಿ ಭಾನು ಭಾಸ್ಕರ್ ಅವರು, "ಯಾತ್ರೆಯಲ್ಲಿ ಆಯುಧಗಳನ್ನು ತರುವುದನ್ನು ನಿಷೇಧಿಸಿ ಸರ್ಕಾರವು ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದು, ನಾವು ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದ್ದೇವೆ. ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು," ಎಂದು ತಿಳಿಸಿದ್ದಾರೆ. ಈ ಹೊಸ ಆದೇಶವು ಮೀರುತ್, ಬಾಗ್‌ಪತ್, ಮುಜಫರ್‌ನಗರ, ಶಾಮ್ಲಿ, ಸಹರಾನ್‌ಪುರ, ಬುಲಂದ್‌ಶಹರ್ ಮತ್ತು ಹಾಪುರ್ ಜಿಲ್ಲೆಗಳ ಯಾತ್ರಾ ಮಾರ್ಗಗಳಲ್ಲಿ ಜಾರಿಯಲ್ಲಿರುತ್ತದೆ.

ಇತ್ತೀಚೆಗೆ, ಮಿರ್ಜಾಪುರ ರೈಲ್ವೆ ನಿಲ್ದಾಣದಲ್ಲಿ ಸಿಆರ್‌ಪಿಎಫ್ ಯೋಧರೊಬ್ಬರ ಮೇಲೆ ಹಲ್ಲೆ ನಡೆದಿದ್ದರೆ, ಕಾನ್ಪುರದಲ್ಲಿ ಹೋಮ್ ಗಾರ್ಡ್ ಮೇಲೆ ದಾಳಿ ನಡೆದಿತ್ತು. ಮೀರತ್‌ನಲ್ಲಿ ಬಸ್‌ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆಗಳೂ ವರದಿಯಾಗಿವೆ.

ಈ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್, "ಕೆಲವು ದುಷ್ಕರ್ಮಿಗಳು ಯಾತ್ರಾರ್ಥಿಗಳ ಗುಂಪಿನಲ್ಲಿ ಸೇರಿಕೊಂಡು ಯಾತ್ರೆಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಅಂತಹವರನ್ನು ಗುರುತಿಸಿ, ಅವರ ಬಗ್ಗೆ ತಕ್ಷಣ ಆಡಳಿತಕ್ಕೆ ಮಾಹಿತಿ ನೀಡಿ," ಎಂದು ಯಾತ್ರಾರ್ಥಿಗಳಿಗೆ ಕರೆ ನೀಡಿದ್ದಾರೆ.

ಇತ್ತೀಚಿನ ಹಿಂಸಾಚಾರದ ಘಟನೆಗಳು

* ಮಿರ್ಜಾಪುರ: ಇತ್ತೀಚೆಗೆ, ಮಿರ್ಜಾಪುರ ರೈಲ್ವೆ ನಿಲ್ದಾಣದಲ್ಲಿ ಸಿಆರ್‌ಪಿಎಫ್ ಯೋಧರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಏಳು ಕನ್ವರ್ ಯಾತ್ರಾರ್ಥಿಗಳನ್ನು ಬಂಧಿಸಲಾಗಿದೆ.

* ಕಾನ್ಪುರ: ಕನ್ವರ್ ಯಾತ್ರೆಯ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ಹೋಮ್ ಗಾರ್ಡ್, ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿ ಸ್ವಯಂಸೇವಕರ ಮೇಲೆ ಹಲ್ಲೆ ನಡೆಸಲಾಗಿತ್ತು.

* ಮೀರತ್: ತಮ್ಮ ವಾಹನಕ್ಕೆ ಡಿಕ್ಕಿ ಹೊಡೆದ ಬಸ್ಸಿನ ಗಾಜುಗಳನ್ನು ಪುಡಿಗೈದ ಕನ್ವರ್ ಯಾತ್ರಾರ್ಥಿಗಳ ಗುಂಪೊಂದು, ಚಾಲಕನ ಮೇಲೆಯೂ ಹಲ್ಲೆ ನಡೆಸಿತ್ತು.

Read More
Next Story