ಉತ್ತರ ಪ್ರದೇಶ: ಗರ್ಭಿಣಿಯ ಹೊಟ್ಟೆ ಕತ್ತರಿಸಿದವನಿಗೆ ಜೀವಾವಧಿ ಶಿಕ್ಷೆ
x

ಉತ್ತರ ಪ್ರದೇಶ: ಗರ್ಭಿಣಿಯ ಹೊಟ್ಟೆ ಕತ್ತರಿಸಿದವನಿಗೆ ಜೀವಾವಧಿ ಶಿಕ್ಷೆ

ದಂಪತಿಗೆ ಐವರು ಮಕ್ಕಳಿದ್ದರು. ಮಗುವಿನ ಲಿಂಗ ಪರೀಕ್ಷಿಸುತ್ತೇನೆ ಎಂದು ಕುಡಗೋಲಿನಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದ.


ಮಗುವಿನ ಲಿಂಗವನ್ನು ಪರೀಕ್ಷಿಸಲು ಗರ್ಭಿಣಿ ಪತ್ನಿಯ ಹೊಟ್ಟೆಯನ್ನು ಕುಡಗೋಲಿನಿಂದ ಕತ್ತರಿಸಿದ ಉತ್ತರ ಪ್ರದೇಶದ ಬದೌನ್ ನಿವಾಸಿ ಪನ್ನಾಲಾಲ್ ಎಂಬುವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಸೆಪ್ಟೆಂಬರ್‌ 2020ರಲ್ಲಿ ಪತ್ನಿ ಅನಿತಾ ಜತೆ ಜಗಳವಾಡಿ, ಹಲ್ಲೆ ನಡೆಸಿದ್ದ. ದಂಪತಿ‌ ಮದುವೆಯಾಗಿ 22 ವರ್ಷವಾಗಿದ್ದು, ಐದು ಹೆಣ್ಣು ಮಕ್ಕಳಿದ್ದರು. ಅನಿತಾ ಪೋಷಕರು ಜಗಳ ನಿಲ್ಲಿಸುವಂತೆ ಪನ್ನಾಲಾಲ್‌ಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಅನಿತಾಗೆ ವಿಚ್ಛೇದನ ನೀಡಿ ಬೇರೆ ಮದುವೆಯಾಗುವುದಾಗಿ ಬೆದರಿಕೆ ಹಾಕಿದ್ದ.

ಪತ್ನಿ ಮೇಲೆ ದಾಳಿ: ಪನ್ನಾಲಾಲ್ ಗರ್ಭಿಣಿ ಪತ್ನಿಯೊಂದಿಗೆ ಮಗುವಿನ ಲಿಂಗದ ಬಗ್ಗೆ ಜಗಳವಾಡಿದ್ದ. ಗಂಡೋ ಹೆಣ್ಣೋ ಎಂದು ಪರೀಕ್ಷಿ ಸಲು ಹೊಟ್ಟೆಯನ್ನು ಕತ್ತರಿಸುತ್ತೇನೆ ಎಂದು ಎಚ್ಚರಿಸಿದ್ದ. ಅನಿತಾ ಜಗಳವಾಡಿದ್ದರಿಂದ ಆಕ್ರೋಶಗೊಂಡು, ಕುಡಗೋಲಿನಿಂದ ಹಲ್ಲೆ ನಡೆಸಿದ.

ಎಂಟು ತಿಂಗಳ ಗರ್ಭಿಣಿಯ ಹೊಟ್ಟೆಯನ್ನು ಕತ್ತರಿಸಿದ. ಕೋರ್ಟಿಗೆ ನೀಡಿದ ಹೇಳಿಕೆಯಲ್ಲಿ ಅನಿತಾ, ಕರುಳು ಹೊರಬಂದು ನೇತಾಡುತ್ತಿತ್ತು ಎಂದು ಹೇಳಿದ್ದರು. ಹೊಟ್ಟೆ ಹಿಡಿದುಕೊಂಡು ಬೀದಿಗೆ ಓಡಿಹೋದಾಗ, ಸನಿಹದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಸಹೋದರ ರಕ್ಷಣೆಗೆ ಧಾವಿಸಿದ. ಅವನನ್ನು ನೋಡಿದ ಪನ್ನಾಲಾಲ್ ಸ್ಥಳದಿಂದ ಓಡಿಹೋದ.

ಅನಿತಾರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವಿಪರ್ಯಾಸವೆಂದರೆ, ಗಂಡು ಮಗು ಉಳಿಯಲಿಲ್ಲ. ಆಸ್ತಿ ವಿವಾದದಿಂದ ಪತ್ನಿ ಆತ್ಮಹತ್ಯೆಗೆ ಪ್ರಯತ್ನಿಸಿದಳು ಎಂದು ನ್ಯಾಯಾಲಯದಲ್ಲಿ ಪನ್ನಾಲಾಲ್ ಹೇಳಿದ್ದ.

Read More
Next Story