ಫಿರೋಜಾಬಾದ್‌: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಮಗು ಸೇರಿ ನಾಲ್ವರ ಸಾವು
x

ಫಿರೋಜಾಬಾದ್‌: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಮಗು ಸೇರಿ ನಾಲ್ವರ ಸಾವು


ಫಿರೋಜಾಬಾದ್ (ಯುಪಿ): ಫಿರೋಜಾಬಾದ್ ಜಿಲ್ಲೆ ಶಿಕೋಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಶೇರಾ ಪ್ರದೇಶದಲ್ಲಿರುವ ಪಟಾಕಿ ಗೋದಾಮು-ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂರು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಘಟನೆ ಸೋಮವಾರ ರಾತ್ರಿ ನಡೆದಿದ್ದು, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಆರು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗ್ರಾ ವ್ಯಾಪ್ತಿಯ ಐಜಿ ದೀಪಕ್ ಕುಮಾರ್, ʻಈವರೆಗೆ 10 ಜನರನ್ನು ಕಟ್ಟಡದಿಂದ ರಕ್ಷಿಸಲಾಗಿದೆ. ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ,ʼ ಎಂದು ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಿಎಂಒ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಗಳ ತಂಡ ಪರಿ ಹಾರ ಕಾರ್ಯದಲ್ಲಿ ತೊಡಗಿದೆ ಎಂದು ಅವರು ಹೇಳಿದರು.

ಸ್ಥಳೀಯ ನಿವಾಸಿಗಳ ಪ್ರಕಾರ, ರಾತ್ರಿ 10.30 ರ ಸುಮಾರಿಗೆ ಪಟಾಕಿ ಗೋದಾಮಿನಲ್ಲಿ ಹಠಾತ್ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಕಟ್ಟಡದ ಗೋಡೆಗಳು ಕುಸಿದು, ಅದರಲ್ಲಿ ವಾಸಿಸುತ್ತಿದ್ದ ಒಂದೇ ಕುಟುಂಬದ ಏಳು ಮಂದಿ ಅವಶೇಷಗಳ ಅಡಿಯಲ್ಲಿ ಹೂತುಹೋದರು. ಮೀರಾದೇವಿ (45), ಅಮನ್ (20), ಗೌತಮ್ ಕುಶ್ವಾಹ (18) ಮತ್ತು ಇಚ್ಚಾ (3) ಮೃತರು.

ಜನನಿಬಿಡ ಪ್ರದೇಶದಲ್ಲಿ ಪಟಾಕಿ ಗೋದಾಮಿಗೆ ಅನುಮತಿ ನೀಡುವುದಿಲ್ಲ. ಆದರೆ, ಈ ಗೋದಾಮಿಗೆ ಹೇಗೆ ಅನುಮತಿ ನೀಡಲಾಯಿತು ಎಂಬ ಮಾಹಿತಿ ಸಂಗ್ರಹಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯ ವಿಪತ್ತು ನಿರ್ವಹಣೆ ಪಡೆ (ಎಸ್‌ಡಿಆರ್‌ಎಫ್) ಸ್ಥಳಕ್ಕೆ ತಲುಪಲಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯ ತ್ವರಿತಗೊಳ್ಳಲಿದೆ ಎಂದು ಅವರು ತಿಳಿಸಿದರು.

Read More
Next Story