
ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್
ಉನ್ನಾವೊ ಅತ್ಯಾಚಾರ ಪ್ರಕರಣ: ಕುಲದೀಪ್ ಸೆಂಗಾರ್ ಶಿಕ್ಷೆ ಅಮಾನತು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸಿಬಿಐ
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ಇತ್ತೀಚೆಗೆ ನೀಡಿದ್ದ ತೀರ್ಪನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದ ಬಳಿಕ, ಸಿಬಿಐ ಈ ಕ್ರಮ ಕೈಗೊಂಡಿದೆ.
ಬಹುಚರ್ಚಿತ 2017ರ ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ಇತ್ತೀಚೆಗೆ ನೀಡಿದ್ದ ತೀರ್ಪನ್ನು ಕೂಲಂಕಷವಾಗಿ ಅಧ್ಯಯನ ನಡೆಸಿದ ಬಳಿಕ, ಸಿಬಿಐ ಈ ಕ್ರಮ ಕೈಗೊಂಡಿದೆ. ಹೈಕೋರ್ಟ್ ಆದೇಶದ ವಿರುದ್ಧ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸಲಾಗಿದೆ ಎಂದು ಸಿಬಿಐ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಷರತ್ತುಬದ್ಧ ಜಾಮೀನು ಮತ್ತು ಮೇಲ್ಮನವಿ
ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ 2019ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯ ಕುಲದೀಪ್ ಸೆಂಗರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸೆಂಗರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇತ್ಯರ್ಥವಾಗುವವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿರಿಸಲು ಕೋರಲಾಗಿತ್ತು. ಇದಕ್ಕೆ ಸ್ಪಂದಿಸಿದ ದೆಹಲಿ ಹೈಕೋರ್ಟ್, ಮಂಗಳವಾರ ತೀರ್ಪು ನೀಡಿ ಸೆಂಗರ್‌ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ನಡೆಯನ್ನು ಪ್ರಶ್ನಿಸಿ ಸಿಬಿಐ ಇದೀಗ ಸರ್ವೋಚ್ಚ ನ್ಯಾಯಾಲಯದ ಕದ ತಟ್ಟಿದೆ.
ಸಂತ್ರಸ್ತೆ ಕುಟುಂಬದ ಆಕ್ರೋಶ
ಮತ್ತೊಂದೆಡೆ, ಸೆಂಗರ್‌ಗೆ ವಿಧಿಸಲಾಗಿದ್ದ ಕಠಿಣ ಶಿಕ್ಷೆಯನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಸಂತ್ರಸ್ತೆ, ಅವರ ತಾಯಿ ಹಾಗೂ ಮಹಿಳಾ ಪರ ಹೋರಾಟಗಾರರು ಶುಕ್ರವಾರ ದೆಹಲಿ ಹೈಕೋರ್ಟ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತೆಯ ತಾಯಿ, "ನನ್ನ ಮಗಳು ಪಟ್ಟಿರುವ ಕಷ್ಟ, ಯಾತನೆ ಅಷ್ಟಿಷ್ಟಲ್ಲ. ಅದಕ್ಕಾಗಿಯೇ ಪ್ರತಿಭಟಿಸಲು ನಾವು ಇಲ್ಲಿಗೆ ಬಂದಿದ್ದೇವೆ. ನಾನು ಒಟ್ಟಾರೆ ನ್ಯಾಯಾಲಯವನ್ನೇ ದೂಷಿಸುತ್ತಿಲ್ಲ. ಆದರೆ, ನಮ್ಮ ನಂಬಿಕೆಯನ್ನು ಹುಸಿಗೊಳಿಸುವಂತಹ ಆದೇಶ ನೀಡಿದ ಇಬ್ಬರು ನ್ಯಾಯಾಧೀಶರ ನಡೆ ಬೇಸರ ತರಿಸಿದೆ," ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ಜೈಲುವಾಸ ಮುಂದುವರಿಕೆ
ಅತ್ಯಾಚಾರ ಪ್ರಕರಣದ ಶಿಕ್ಷೆ ಅಮಾನತುಗೊಂಡಿದ್ದರೂ, ಕುಲದೀಪ್ ಸಿಂಗ್ ಸೆಂಗಾರ್ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಿಲ್ಲ. ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ ಸೆಂಗರ್‌ಗೆ ಪ್ರತ್ಯೇಕವಾಗಿ 10 ವರ್ಷಗಳ ಜೈಲು ಶಿಕ್ಷೆಯಾಗಿದೆ. ಹೀಗಾಗಿ, ಅವರು ಜೈಲಿನಲ್ಲಿಯೇ ಉಳಿಯಲಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
2017ರ ಜೂನ್ 4ರಂದು ಉದ್ಯೋಗ ಅರಸಿ ಬಂದಿದ್ದ 17 ವರ್ಷದ ಬಾಲಕಿಯ ಮೇಲೆ ಕುಲದೀಪ್ ಸೆಂಗರ್ ಅತ್ಯಾಚಾರ ಎಸಗಿದ್ದನು. ಇದಾದ ಒಂದು ವಾರದ ನಂತರ ಆತನ ಸಹಚರರು ಸಂತ್ರಸ್ತೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.
ನಂತರದ ದಿನಗಳಲ್ಲಿ ಸಂತ್ರಸ್ತೆಯ ಕುಟುಂಬದ ಮೇಲೆ ದೌರ್ಜನ್ಯ ಮುಂದುವರಿದಿತ್ತು. 2 ಸುಳ್ಳು ಪ್ರಕರಣ ದಾಖಲಿಸಿ ಸಂತ್ರಸ್ತೆಯ ತಂದೆಯನ್ನು ಪೊಲೀಸರು ಬಂಧಿಸಿದ್ದರು. 2018ರ ಏಪ್ರಿಲ್ 3ರಂದು ಸೆಂಗರ್ ಬೆಂಬಲಿಗರು ನಡೆಸಿದ ಹಲ್ಲೆ ಮತ್ತು ಪೊಲೀಸ್ ಕಸ್ಟಡಿಯಲ್ಲಿನ ಚಿತ್ರಹಿಂಸೆಯಿಂದ ಸಂತ್ರಸ್ತೆಯ ತಂದೆ ಮೃತಪಟ್ಟಿದ್ದರು. ಸುದೀರ್ಘ ವಿಚಾರಣೆಯ ಬಳಿಕ 2019ರ ಡಿಸೆಂಬರ್ 16ರಂದು ಸೆಂಗರ್ ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿ, ಡಿಸೆಂಬರ್ 20ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು

