Waqf Bill: ವಕ್ಫ್ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಅಸ್ತು: ಸಂಸತ್ತಿನಲ್ಲಿ ಯಾವಾಗ ಮಂಡನೆ?
x

ವಕ್ಫ್​ ಬಿಲ್ ಸಿದ್ಧಪಡಿಸಲು ಮಾಡಿದ ಜಂಟಿ ಸದನ ಸಮಿತಿ. 

Waqf Bill: ವಕ್ಫ್ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಅಸ್ತು: ಸಂಸತ್ತಿನಲ್ಲಿ ಯಾವಾಗ ಮಂಡನೆ?

ಪ್ರತಿಪಕ್ಷಗಳ ಕೋಲಾಹಲದ ನಡುವೆ ಸಂಸತ್ತಿನಲ್ಲಿ 2025ರ ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮಂಡಿಸಲಾಯಿತು.


ಫೆಬ್ರವರಿ 13ರಂದು ಸಂಸತ್ತಿನಲ್ಲಿ ಮಂಡಿಸಲಾದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯ ಆಧಾರದ ಮೇಲೆ ವಕ್ಫ್ (ತಿದ್ದುಪಡಿ) ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮೂಲಗಳ ಪ್ರಕಾರ, ಫೆಬ್ರವರಿ 19ರಂದು ನಡೆದ ಸಭೆಯಲ್ಲಿ ಮಸೂದೆಗೆ ತಿದ್ದುಪಡಿಗಳನ್ನು ಕ್ಯಾಬಿನೆಟ್ ಅನುಮೋದಿಸಿತು.

ಪ್ರತಿಪಕ್ಷಗಳ ಕೋಲಾಹಲದ ನಡುವೆ ಸಂಸತ್ತಿನಲ್ಲಿ 2025ರ ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮಂಡಿಸಲಾಯಿತು. ಇದು ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು.


ಭಿನ್ನಾಭಿಪ್ರಾಯದ ವಿಷಯಗಳನ್ನು ಜೆಪಿಸಿ ವರದಿಯಿಂದ ತೆಗೆಯಲಾಗಿದೆ ಎಂದು ವಿರೋಧ ಪಕ್ಷದ ಸಂಸದರು ಆರೋಪಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ.

ಮಾರ್ಚ್ 10ರಿಂದ ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ವಕ್ಫ್ ಆಸ್ತಿಗಳ ನೋಂದಣಿ ಸುಗಮಗೊಳಿಸುವ ಮಸೂದೆ ಮಂಡನೆಯಾಗಲಿದೆ. ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ನೇತೃತ್ವದ ಸಮಿತಿ, ಪ್ರತಿಪಕ್ಷಗಳ ಭಿನ್ನಾಭಿಪ್ರಾಯದ ನಡುವೆ ಶಾಸನಕ್ಕೆ ಹಲವಾರು ತಿದ್ದುಪಡಿಗಳನ್ನು ಸೂಚಿಸಿದೆ ಎಂದು ಹೇಳಲಾಗಿದೆ.

ಏನೆಲ್ಲ ಬದಲಾವಣೆ?

ವಕ್ಫ್ ಕಾಯ್ದೆಗೆ 14 ಪ್ರಮುಖ ಮಾರ್ಪಾಡುಗಳನ್ನು ಮಾಡಿ, ಸುಮಾರು 44 ತಿದ್ದುಪಡಿಗಳನ್ನು ಜಾರಿಗೆ ತರಲು ಜೆಪಿಸಿ ಸಮಿತಿಯು ಶಿಫಾರಸು ಮಾಡಿದೆ. ದೇಶದ ಯಾವುದೇ ಆಸ್ತಿ, ಜಾಗವನ್ನು ವಕ್ಫ್ ಆಸ್ತಿ ಎಂಬುದಾಗಿ ಘೋಷಿಸುವ ಪರಮಾಧಿಕಾರದ ಬದಲಾವಣೆ ಸೇರಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಕೇಂದ್ರ ಹಾಗೂ ರಾಜ್ಯ ವಕ್ಫ್ ಮಂಡಳಿಗಳು ಈಗಿರುವ ಪರಮಾಧಿಕಾರವನ್ನು ಕಳೆದುಕೊಳ್ಳಲಿವೆ. ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸಲು ಸಾಧ್ಯವಾಗುವುದಿಲ್ಲ ಹಾಗೂ ಹಾಗೆ ಘೋಷಣೆ ಮಾಡಲು ನಿಖರ ದಾಖಲೆ ಇರಬೇಕು ಎಂಬುದಾಗಿ ಹೊಸ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಕ್ಫ್ ಆಸ್ತಿಗಳ ನಿರ್ವಹಣೆಗೆ ಇದರಿಂದ ಹೆಚ್ಚಿನ ನಿಯಮಗಳು ಅನ್ವಯವಾಗಲಿವೆ. 1995ರಲ್ಲಿ ವಕ್ಫ್ ಕಾಯ್ದೆ ಜಾರಿಗೆ ತಂದಿದ್ದು, ಇದರಲ್ಲಿ ಕೆಲ ಬದಲಾವಣೆಗಳನ್ನು ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಹಾಗೆಯೇ, ವಕ್ಫ್ ಆಸ್ತಿಯ ನಿರ್ವಹಣೆಯಲ್ಲಿ ದಕ್ಷತೆ ತರುವುದು ಕೂಡ ಕೇಂದ್ರದ ಉದ್ದೇಶವಾಗಿದೆ. ಇದೇ ಕಾರಣಕ್ಕೆ, ಕೇಂದ್ರ ವಕ್ಫ್ ಸಮಿತಿ ಹಾಗೂ ರಾಜ್ಯಗಳ ವಕ್ಫ್ ಮಂಡಳಿಯಲ್ಲಿ ಇಬ್ಬರು ಮಹಿಳೆಯರು ಸದಸ್ಯರಾಗಿರಬೇಕು ಎಂಬುದನ್ನು ಕೂಡ ನೂತನ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಇಸ್ಲಾಂ ಧರ್ಮದಲ್ಲೇ ಅತಿ ಹಿಂದುಳಿದ ಸಮುದಾಯದವರು ಕೂಡ ಸಮಿತಿಯಲ್ಲಿ ಸದಸ್ಯರಾಗಬಹುದಾಗಿದೆ.

Read More
Next Story