ಹರ್ಯಾಣದಲ್ಲಿ ಅನಿರೀಕ್ಷಿತ ಫಲಿತಾಂಶ; ಚುನಾವಣಾ ಆಯೋಗಕ್ಕೆ ದೂರು: ರಾಹುಲ್‌ ಗಾಂಧಿ
x

ಹರ್ಯಾಣದಲ್ಲಿ ಅನಿರೀಕ್ಷಿತ ಫಲಿತಾಂಶ; ಚುನಾವಣಾ ಆಯೋಗಕ್ಕೆ ದೂರು: ರಾಹುಲ್‌ ಗಾಂಧಿ

ಜಮ್ಮುಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟದ ಗೆಲುವು ಸಂವಿಧಾನ ಹಾಗೂ ಪ್ರಜಾಪ್ರಭುತ್ವದಲ್ಲಿನ ಸ್ವಾಭಿಮಾನದ ವಿಜಯವಾಗಿದೆ. ಹರ್ಯಾಣದ ಅನಿರೀಕ್ಷಿತ ಫಲಿತಾಂಶ ಅಚ್ಚರಿ ತಂದಿದೆ. ಹಲವು ವಿಧಾನಸಭಾ ಕ್ಷೇತ್ರಗಳಿಂದ ಬಂದಿರುವ ದೂರುಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುತ್ತೇವೆ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.


ಹರ್ಯಾಣ ವಿಧಾನಸಭೆ ಚುನಾವಣೆಯ ಆಘಾತಕಾರಿ ಸೋಲಿನ ಕುರಿತು ಕೊನೆಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮೌನ ಮುರಿದಿದ್ದಾರೆ. ಹರ್ಯಾಣ ಚುನಾವಣೆಯ ಅನಿರೀಕ್ಷಿತ ಫಲಿತಾಂಶದ ಕುರಿತು ಪಕ್ಷದ ಆಂತರಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಫಲಿತಾಂಶ ಕುರಿತು ರಾಜ್ಯದ ವಿವಿಧ ಕ್ಷೇತ್ರಗಳಿಂದ ಬಂದಿರುವ ದೂರುಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲು ಕಾರಣರಾದ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಜಮ್ಮುಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟದ ಗೆಲುವು ಸಂವಿಧಾನ ಹಾಗೂ ಪ್ರಜಾಪ್ರಭುತ್ವದಲ್ಲಿನ ಸ್ವಾಭಿಮಾನದ ವಿಜಯವಾಗಿದೆ. ಹರ್ಯಾಣದ ಅನಿರೀಕ್ಷಿತ ಫಲಿತಾಂಶ ಅಚ್ಚರಿ ತಂದಿದೆ. ಹಲವು ವಿಧಾನಸಭಾ ಕ್ಷೇತ್ರಗಳಿಂದ ಬಂದಿರುವ ದೂರುಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡುತ್ತೇವೆ. ಆದರೂ ಅಲ್ಲಿನ ಮತದಾರರು ಹಾಗೂ ದಣಿವರಿಯದೇ ದುಡಿದ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಮ್ಮ ಹಕ್ಕು, ಸತ್ಯ ಹಾಗೂ ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ. ನಿಮ್ಮ ಪರವಾಗಿ ಧ್ವನಿ ಎತ್ತುತ್ತಲೇ ಇರುತ್ತೇವೆ ಎಂದು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಹರ್ಯಾಣದಲ್ಲಿ ಕಾಂಗ್ರೆಸ್‌ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದರೂ ಕೇವಲ 37 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆಡಳಿತ ರೂಢ ಬಿಜೆಪಿ 48 ಸ್ಥಾನಗಳಲ್ಲಿ ಸರಳ ಬಹುಮತದ ಮೂಲಕ ಮೂರನೇ ಬಾರಿಗೆ ಅಧಿಕಾರಕ್ಕೇರಿದೆ.

ಹರ್ಯಾಣದ ಸೋಲು, ಜಮ್ಮುಕಾಶ್ಮೀರದ ಗೆಲುವಿನ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮತದಾರರು ಹಾಗೂ ಕಾರ್ಯಕರ್ತರಿಗೆ ಕನಿಷ್ಠ ಧನ್ಯವಾದ ಹೇಳಲಿಲ್ಲ ಎಂದು ಬಿಜೆಪಿ ವಕ್ತಾರರಾದ ಅಮಿತ್ ಮಾಳವಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

Read More
Next Story