
ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣ ; ಶುಲ್ಕ ಮನ್ನಾ ಮಾಡಿದ ಯುಐಡಿಎಐ
ಯುಐಡಿಎಐ 5-17 ವರ್ಷದೊಳಗಿನ ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಗಾಗಿ ವಿಧಿಸಲಾಗುತ್ತಿದ್ದ ಶುಲ್ಕಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವ ನಿರ್ಧಾರ ಕೈಗೊಂಡಿದೆ.
ವಿಶಿಷ್ಟ ಗುರುತಿನ ಪ್ರಾಧಿಕಾರವು 5 ರಿಂದ 17 ವರ್ಷದೊಳಗಿನ ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ವಿಧಿಸುತ್ತಿದ್ದ ಶುಲ್ಕಗಳನ್ನು ಸಂಪೂರ್ಣ ಮನ್ನಾ ಮಾಡಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ವಿಷಯವನ್ನು ತಿಳಿಸಿದೆ. ಶುಲ್ಕ ಮನ್ನಾ ಕ್ರಮವು ಅ.1ರಿಂದಲೇ ಜಾರಿಗೆ ಬಂದಿದ್ದು, ಒಂದು ವರ್ಷದವರೆಗೆ ಮುಂದುವರಿಯಲಿದೆ. ಈ ಕ್ರಮದಿಂದ ದೇಶದಾದ್ಯಂತ ಸುಮಾರು ಆರು ಕೋಟಿ ಮಕ್ಕಳಿಗೆ ಪ್ರಯೋಜನ ದೊರೆಯಲಿದೆ ಎಂದು ಸಚಿವಾಲಯ ತಿಳಿಸಿದೆ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆಧಾರ್ ನೋಂದಣಿಯ ವೇಳೆ ಕೇವಲ ಮೂಲ ಜನಸಾಂಖ್ಯಿಕ ಮಾಹಿತಿ, ಹೆಸರು, ಭಾವಚಿತ್ರ, ಜನ್ಮ ದಿನಾಂಕ, ಲಿಂಗ ಮತ್ತು ವಿಳಾಸ ಮಾತ್ರ ದಾಖಲಿಸಲಾಗುತ್ತದೆ. ಈ ವಯಸ್ಸಿನ ಮಕ್ಕಳಲ್ಲಿ ಬೆರಳಚ್ಚು ಮತ್ತು ಐರಿಸ್ ಸ್ಥಿರವಾಗಿರದ ಕಾರಣ ಬಯೋಮೆಟ್ರಿಕ್ ಸೆರೆಹಿಡಿಯುವುದಿಲ್ಲ. ಮಗು ಐದು ವರ್ಷ ತುಂಬಿದಾಗ ಆಧಾರ್‌ನಲ್ಲಿ ಬೆರಳಚ್ಚು, ಐರಿಸ್ ಮತ್ತು ಭಾವಚಿತ್ರ ನವೀಕರಿಸುವುದು ಕಡ್ಡಾಯವಾಗಿದೆ. ಇದನ್ನು ಮೊದಲ ಬಯೋಮೆಟ್ರಿಕ್ ಅಪ್‌ಡೇಟ್ ಎಂದು ಕರೆಯಲಾಗುತ್ತದೆ. ಅದೇ ರೀತಿ, 15 ವರ್ಷ ವಯಸ್ಸಿನಲ್ಲಿ ಮತ್ತೆ ಬಯೋಮೆಟ್ರಿಕ್ ನವೀಕರಣ ಮಾಡಬೇಕಾಗುತ್ತದೆ. ಇದನ್ನು ಎರಡನೇ ಬಯೋಮೆಟ್ರಿಕ್ ಅಪ್‌ಡೇಟ್ ಎಂದು ಕರೆಯಲಾಗುತ್ತದೆ.
ಮೊದಲ ಹಾಗೂ ಎರಡನೇ ಬಯೋಮೆಟ್ರಿಕ್ ನವೀಕರಣಗಳು (5–7 ಮತ್ತು 15–17 ವರ್ಷದೊಳಗೆ) ಉಚಿತವಾಗಿರುತ್ತವೆ. ಈ ವಯೋಮಾನದ ನಂತರ ನವೀಕರಣ ಮಾಡಿದರೆ ಪ್ರತಿ ಬಾರಿ 125 ರೂ. ಶುಲ್ಕ ವಿಧಿಸಲಾಗುತ್ತದೆ. ಈ ನಿರ್ಧಾರವು ಮಕ್ಕಳ ಆಧಾರ್ ಮಾಹಿತಿ ನಿಖರಗೊಳಿಸುವ ಜೊತೆಗೆ ಶಾಲಾ ಪ್ರವೇಶ, ಪರೀಕ್ಷಾ ನೋಂದಣಿ, ವಿದ್ಯಾರ್ಥಿವೇತನ ಮತ್ತು ಡಿ.ಬಿ.ಟಿ ಯೋಜನೆಗಳಂತಹ ಸೇವೆಗಳಲ್ಲಿ ಅನುಕೂಲವಾಗಲಿದೆ ಎಂದು ವಿಶಿಷ್ಟ ಗುರುತಿನ ಪ್ರಾಧಿಕಾರ ಹೇಳಿದೆ.