UAPA ಪ್ರಕರಣ: ನಾಳೆ ದೆಹಲಿ ಹೈಕೋರ್ಟ್‌ನಲ್ಲಿ ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ
2020ರ ಫೆಬ್ರುವರಿಯಲ್ಲಿ ನಡೆದ ದೆಹಲಿ ಗಲಭೆಗಳ ಹಿಂದೆ ದೊಡ್ಡ ಪಿತೂರಿ ನಡೆದಿದೆ ಎನ್ನಲಾದ ಯುಎಪಿಎ ಪ್ರಕರಣದಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ದೆಹಲಿ ಹೈಕೋರ್ಟ್ ಈ ಅರ್ಜಿಯ ವಿಚಾರಣೆ ನಡೆಸಲಿದೆ.
ವಿಚಾರಣಾ ನ್ಯಾಯಾಲಯವು ಖಾಲಿದ್‌ಗೆ ಜಾಮೀನು ನೀಡಲು ನಿರಾಕರಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧದ ಅರ್ಜಿ ಸಲ್ಲಿಸಲಾಗಿದ್ದು, ಜುಲೈ 22 ರಂದು (ಸೋಮವಾರ) ನ್ಯಾಯಮೂರ್ತಿಗಳಾದ ಪ್ರತಿಭಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರಿದ್ದ ವಿಭಾಗೀಯ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.
ಖಾಲಿದ್, ಶರ್ಜೀಲ್ ಇಮಾಮ್ ಮತ್ತು ಇತರ ಹಲವರ ವಿರುದ್ಧ ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಿ, ಫೆಬ್ರವರಿ 2020 ರ ಗಲಭೆಗಳ "ಮಾಸ್ಟರ್‌ಮೈಂಡ್‌ಗಳು" ಎಂದು ಪ್ರಕರಣ ದಾಖಲಿಸಲಾಗಿದೆ. ಈ ಗಲಭೆಯಲ್ಲಿ ಅನೇಕ ಜನರು ಸಾವಿಗೀಡಾಗಿದ್ದಾರೆ ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ಈ ಹಿಂಸಾಚಾರ ಭುಗಿಲೆದ್ದಿತ್ತು. ಖಲೀದ್ ಅವರನ್ನು ದೆಹಲಿ ಪೊಲೀಸರು ಸೆಪ್ಟೆಂಬರ್ 2020 ರಲ್ಲಿ ಬಂಧಿಸಿದ್ದರು. ಅಂದಿನಿಂದ ಜೈಲಿನಲ್ಲಿರುವ ಅವರು ಸಲ್ಲಿಸಿರುವ ಎರಡನೇ ಸುತ್ತಿನ ಜಾಮೀನು ಅರ್ಜಿ ಇದಾಗಿದೆ. ಖಾಲಿದ್‌ಗೆ ಎರಡು ಬಾರಿ ವಿಚಾರಣಾ ನ್ಯಾಯಾಲಯ ಮತ್ತು ಒಂದು ಬಾರಿ ಹೈಕೋರ್ಟ್ ಜಾಮೀನು ನಿರಾಕರಿಸಿವೆ. ವಿಚಾರಣಾ ನ್ಯಾಯಾಲಯವು ಮೊದಲು ಮಾರ್ಚ್ 2022ರಲ್ಲಿ ಅವರಿಗೆ ಜಾಮೀನು ನಿರಾಕರಿಸಿತು. ನಂತರ ಅವರು ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಆದರೆ ಅದು ಅಕ್ಟೋಬರ್ 2022ರಲ್ಲಿ ಪರಿಹಾರವನ್ನು ನಿರಾಕರಿಸಿದ ಪರಿಣಾಮ ಅವರು ಸುಪ್ರೀಂ ಕೋರ್ಟ್ ಮೊರೆ ಹೋದರು.
ಮೇ 2023 ರಲ್ಲಿ, ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರ ಪ್ರತಿಕ್ರಿಯೆ ಕೇಳಿತು. ನಂತರ ಖಾಲಿದ್ ಅವರ ಮನವಿಯನ್ನು 14 ಬಾರಿ ಮುಂದೂಡಲಾಯಿತು. ಫೆಬ್ರವರಿ 14, 2024 ರಂದು ಸಂದರ್ಭ ಬದಲಾಗಿರುವುದನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ನಿಂದ ತಮ್ಮ ಜಾಮೀನು ಅರ್ಜಿಯನ್ನು ಅವರು ಹಿಂತೆಗೆದುಕೊಂಡರು.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಫೆಬ್ರವರಿ 14 ರಂದು ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಖಾಲಿದ್ ಪರ ವಕೀಲರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಳ್ಳುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.
"ಸನ್ನಿವೇಶಗಳ ಬದಲಾವಣೆಯಿಂದಾಗಿ ನಾವು (ಜಾಮೀನು ಅರ್ಜಿ) ಹಿಂಪಡೆಯಲು ಬಯಸುತ್ತೇವೆ ಸೂಕ್ತ ಪರಿಹಾರಕ್ಕಾಗಿ ವಿಚಾರಣಾ ನ್ಯಾಯಾಲಯಕ್ಕೆ ಹೋಗುತ್ತೇವೆ" ಎಂದು ಸಿಬಲ್ ಹೇಳಿದ್ದರು.
ಸಿಎಎ-ವಿರೋಧಿ ಪ್ರತಿಭಟನೆಗಳು ಹಿಂಸಾತ್ಮಕ ಗಲಭೆಗಳಾಗಿ ರೂಪಾಂತರಗೊಂಡಿವೆ. ಇದು ಪಿತೂರಿ ನಡೆಸಲು ಸಂಘಟಿತವಾದಂತೆ ತೋರುತ್ತದೆ ಮತ್ತು ಸಾಕ್ಷಿಗಳ ಹೇಳಿಕೆಗಳು ಪ್ರತಿಭಟನೆಯಲ್ಲಿ ಖಾಲಿದ್ ಅವರ "ಸಕ್ರಿಯ ಪಾಲ್ಗೊಳ್ಳುವಿಕೆ"ಯನ್ನು ಸೂಚಿಸುತ್ತವೆ ಎಂದು ಉಚ್ಚ ನ್ಯಾಯಾಲಯವು ಹೇಳಿತ್ತು.