
ಜಮ್ಮು ಕಾಶ್ಮೀರದ ಬುಡ್ಗಾಮ್ ಚೆಕ್‌ಪಾಯಿಂಟ್‌ನಲ್ಲಿ ಇಬ್ಬರು ಉಗ್ರರ ಸಹಚರರ ಬಂಧನ
ಚೆಕ್‌ಪಾಯಿಂಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಭಯೋತ್ಪಾದಕ ಸಹಚರರು ಅನುಮಾನಸ್ಪದವಾಗಿ ವರ್ತಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ತೀವ್ರ ತಪಾಸಣೆಗೆ ಒಳಪಡಿಸಿದಾಗ ಒಂದು ಪಿಸ್ತೂಲು, ಒಂದು ಗ್ರೆನೆಡ್ ಪತ್ತೆಯಾಗಿದೆ.
ಪಹಲ್ಗಾಮ್ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಸತತವಾಗಿ ಕಾರ್ಯಾಚರಣೆ ನಡೆಸುತ್ತಿರುವ ಜಮ್ಮುಕಾಶ್ಮೀರ ಪೊಲೀಸರು ಹಾಗೂ ಸೇನಾಪಡೆಗಳು ಉಗ್ರರಿಗೆ ಸಹಾಯ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದೆ. ಬುಡ್ಗಾಮ್‌ನ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸುವಾಗ ಅವರನ್ನು ಸೆರೆ ಹಿಡಿಯಲಾಗಿದೆ. ಬಂಧಿತರ ಬಳಿಯಿಂದ ಮದ್ದುಗುಂಡುಗಳು, ಗ್ರೆನೇಡ್ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೇನಾಪಡೆಗಳು ಹಾಗೂ ಪೊಲೀಸರು ಚೆಕ್‌ಪಾಯಿಂಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಭಯೋತ್ಪಾದಕ ಸಹಚರರು ಅನುಮಾನಸ್ಪದವಾಗಿ ಸಂಚರಿಸಿದ್ದರು. ಪೊಲೀಸರು ತೀವ್ರ ತಪಾಸಣೆಗೆ ಒಳಪಡಿಸಿದಾಗ ಒಂದು ಪಿಸ್ತೂಲು, ಒಂದು ಗ್ರೆನೇಡ್ ಹಾಗೂ 15 ಸಜೀವ ಗುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಮಂದಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದರು. ಈ ಘಟನೆ ನಡೆದ ನಂತರ ಕೇಂದ್ರ ಸರ್ಕಾರ ಸೇನಾಪಡೆಗಳಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಹಾಗೂ ತಪಾಸಣೆಗೆ ಸೂಚಿಸಿತ್ತು. ಇತ್ತೀಚೆಗಷ್ಟೇ ಜಮ್ಮುಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ಬಿ.ಕೆ. ಬರ್ದಿ ನೇತೃತ್ವದಲ್ಲಿ ಸೇನಾಪಡೆಗಳು ಹಾಗೂ ಪೊಲೀಸರು ಉಗ್ರರ ಅಡಗುತಾಣಗಳನ್ನು ಪತ್ತೆಹಚ್ಚಿ ಸ್ಪೋಟಕಗಳನ್ನು ನಾಶಮಾಡಿದ್ದರು.
ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ?
ಬಂಧಿತರಿಂದ ಒಂದು ಪಿಸ್ತೂಲು, ಒಂದು ಗ್ರೆನೇಡ್ ಹಾಗೂ 15 ಸಜೀವ ಗುಂಡುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಭಾರೀ ವಿಧ್ವಂಸಕ ಕೃತ್ಯವನ್ನು ವಿಫಲಗೊಳಿಸಿದ್ದಾರೆ. ಸಹಚರರ ಮೂಲಕ ಉಗ್ರರು ಶಸ್ತ್ರಾಸ್ತ್ರಗಳನ್ನು ಪಡೆದು ನಂತರ ದಾಳಿ ಮಾಡುವ ಸಾಧ್ಯತೆ ಇತ್ತು. ಆದರೆ ಅದನ್ನು ಸೇನಾಪಡೆಗಳು ಹಾಗೂ ಪೊಲೀಸರು ವಿಫಲಗೊಳಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಉಗ್ರರಿಗೆ ಆಶ್ರಯ ನೀಡಿದ್ದ ಎಂಬ ಆರೋಪದ ಮೇಲೆ ಬಂಧಿಸಿದ್ದ ಇಮ್ತಿಯಾಜ್ ಅಹ್ಮದ್ ಆಗ್ರೆಯನ್ನು ಸೇನಾಪಡೆಗಳು ಸೋಮವಾರ (ಮೇ5) ಉಗ್ರರ ಅಡಗುತಾಣಗಳನ್ನು ಪತ್ತೆಹಚ್ಚಲು ಕರೆದೊಯ್ಯತ್ತಿದ್ದ ವೇಳೆ ವಿಶ್ಯ ನದಿಗೆ ಹಾರಿ ಆತ್ಮಹತ್ಯೆಮಾಡಿಕೊಂಡಿದ್ದ. ಈ ಘಟನೆ ಕುರಿತು ನ್ಯಾಯಂಗ ತನಿಖೆ ನಡೆಸಬೇಕೆಂದು ಜಮ್ಮುಕಾಶ್ಮೀರದ ಪ್ರತಿಪಕ್ಷಗಳು ಆಗ್ರಹಿಸಿದ್ದವು.