
ಚುನಾವಣಾ ಹೊಸ್ತಿಲಲ್ಲಿ ಲಾಲೂ ಕುಟುಂಬದಲ್ಲಿ ಬಿಗ್ ಡ್ರಾಮಾ; ವಿಕ್ಷಿಪ್ತತೆಯೇ ತೇಜ್ ಪ್ರತಾಪ್‌ಗೆ ಮುಳುವಾಯಿತೇ?
ಬಿಹಾರದಲ್ಲಿ ಲಾಲೂ ಪ್ರಸಾದ್ ಅವರ ಕಿರಿಯ ಪುತ್ರ ತೇಜಸ್ವಿ ಪ್ರಸಾದ್ ಅವರು ನಿತೀಶ್ ಕುಮಾರ್ ಅವರ ನೇತೃತ್ವದ ಸರ್ಕಾರದ ವಿರುದ್ಧ ಜಯ ಸಾಧಿಸುವ ದೊಡ್ಡ ಕನಸು ಹೊತ್ತಿರುವ ಹೊತ್ತಿನಲ್ಲೇ ಕಾಣಿಸಿಕೊಂಡಿರುವ ಅಣ್ಣ ತೇಜ್ ಪ್ರತಾಪ್ ಪ್ರಕರಣ ಆರ್.ಜೆ.ಡಿ.ಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಉಳಿದಿರುವುದು ಕೇವಲ ನಾಲ್ಕು ತಿಂಗಳುಗಳು ಮಾತ್ರ. ಹೀಗಿರುವಾಗಲೇ ಅಲ್ಲಿನ ಪ್ರಮುಖ ವಿರೋಧ ಪಕ್ಷವಾದ ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದಲ್ಲಿ ಬಿರುಗಾಳಿ ಎದ್ದಿದೆ. ಭಾನುವಾರ(ಮೇ 25) ಲಾಲೂ ಅವರು ಕೈಗೊಂಡ ನಿರ್ಧಾರ ಇದಕ್ಕೆ ಕಾರಣ. ಲಾಲೂ ತಮ್ಮ ಮಗ ಹಾಗೂ ಮಾಜಿ ಮಂತ್ರಿ ತೇಜ್ ಪ್ರತಾಪ್ ಯಾದವ್ ಅವರನ್ನು ಆರು ವರ್ಷಗಳ ಕಾಲ ವಜಾಗೊಳಿಸಿದ್ದಾರೆ. ಜೊತೆಗೆ ಮಗನೊಂದಿಗಿನ ಕುಟುಂಬದ ಸಂಬಂಧವನ್ನೂ ಕಡಿದುಕೊಂಡಿದ್ದಾರೆ.
‘ತೇಜ್ ಪ್ರತಾಪ್ ಅವರ ಚಟುವಟಿಕೆಗಳು, ಸಾರ್ವಜನಿಕ ನಡವಳಿಕೆಗಳು ಮತ್ತು ಬೇಜವಾಬ್ದಾರಿಯುತ ನಡವಳಿಕೆ ನಮ್ಮ ಕುಟುಂಬ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿವೆ” ಎಂದು ಆರ್.ಜೆ.ಡಿ. ಮುಖ್ಯಸ್ಥ ಲಾಲೂ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ವಜಾಕ್ಕೆ ಕಾರಣವನ್ನು ನೀಡಿದ್ದಾರೆ. ತೇಜ್ ಪ್ರತಾಪ್ ಅವರು ಸಮಷ್ಠಿಪುರ ಜಿಲ್ಲೆಯ ಹಸನ್ಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
“ನಾನು ಆತನನ್ನು ಪಕ್ಷ ಮತ್ತು ಕುಟುಂಬದಿಂದ ಕಿತ್ತುಹಾಕಿದ್ದೇನೆ. ಈ ಕ್ಷಣದಿಂದಲೇ ಆತ ಪಕ್ಷದಲ್ಲಾಗಲಿ, ಕುಟುಂಬದಲ್ಲಾಗಲಿ ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ. ಆತನನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ. ಆತ ತನ್ನ ವೈಯಕ್ತಿಕ ಬದುಕಿನಲ್ಲಿ ಒಳಿತು ಮತ್ತು ಕೆಡುಕನ್ನು ನಿರ್ಧರಿಸುವ ಸಾಮರ್ಥ್ಯ ಹೊಂದಿರುತ್ತಾನೆ. ತೇಜ್ ಜೊತೆ ಸಂಬಂಧವನ್ನು ಕಾಯ್ದುಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರವಾಗಿದೆ” ಎಂದು ಲಾಲೂ ಖಡಕ್ಕಾಗಿ ಹೇಳಿದ್ದಾರೆ.
ತಮ್ಮ ಹಿರಿಯ ಮಗನ ವಿರುದ್ಧ ಲಾಲೂ ಇಷ್ಟೊಂದು ಕಠಿಣ ನಿಲುವು ಕೈಗೊಳ್ಳಲು ಕಾರಣವಾದರೂ ಏನು? ಒಂದು ದಿನದ ಹಿಂದಷ್ಟೇ ತೇಜ್ ಪ್ರತಾಪ್ ಎಕ್ಸ್ ಪೇಜ್ ನಲ್ಲಿ ಕಾಣಿಸಿಕೊಂಡ ಪೋಸ್ಟ್ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲಿ ಹಾಕಲಾದ ಪೋಸ್ಟ್ ನ್ನು ಆ ಬಳಿಕ ಡಿಲೀಟ್ ಮಾಡಲಾಗಿತ್ತು. ತಮ್ಮ ಸಾಮಾಜಿಕ ಜಾಲತಾಣವನ್ನು ಹ್ಯಾಕ್ ಮಾಡಲಾಗಿತ್ತು ಎಂದು ತೇಜ್ ಪ್ರತಾಪ್ ಹೇಳಿಕೊಂಡಿದ್ದರು.
ಏನಿತ್ತು ಆ ಪೋಸ್ಟ್ ನಲ್ಲಿ?
ಎಕ್ಸ್ ನಲ್ಲಿ ಹಾಕಿದ್ದಾರೆನ್ನಲಾದ ಪೋಸ್ಟ್ ನಲ್ಲಿ ತೇಜ್ ಪ್ರತಾಪ್ ಮಹಿಳೆಯೊಬ್ಬರ ಜೊತೆಗಿರುವ ಫೋಟೊ ಲಗತ್ತಿಸಲಾಗಿತ್ತು. ಕಳೆದ ಹನ್ನೆರಡು ವರ್ಷಗಳಿಂದ ಇಬ್ಬರೂ ಪರಸ್ಪರ ‘ಸಂಬಂಧಗಳನ್ನು ಹೊಂದಿದ್ದಾರೆ’ ಎಂಬ ಅಡಿಬರಹವನ್ನು ಹಾಕಲಾಗಿತ್ತು.
ಈ ಪೋಸ್ಟ್ ನ್ನು ಡಿಲೀಟ್ ಮಾಡಿದ ಬಳಿಕ ತೇಜ್ ಪ್ರತಾಪ್ ಅವರು ಇನ್ನೊಂದು ಪೋಸ್ಟ್ ಹಾಕಿ ತಮ್ಮ ಸಾಮಾಜಿಕ ಜಾಲತಾಣವನ್ನು ಹ್ಯಾಕ್ ಮಾಡಲಾಗಿದೆ ಮತ್ತು ತಮ್ಮ ಚಿತ್ರಗಳನ್ನು ಕೆಟ್ಟದಾಗಿ ಎಡಿಟ್ ಮಾಡಲಾಗಿದೆ, ತಮ್ಮನ್ನು ಹಾಗೂ ತಮ್ಮ ಕುಟುಂಬದ ಸದಸ್ಯರಿಗೆ ಕಳಂಕ ತರುವುದೇ ಇದರ ಹಿಂದಿನ ಉದ್ದೇಶ ಎಂದು ಸ್ಪಷ್ಟೀಕರಣ ಕೊಟ್ಟಿದ್ದರು.
ಆದರೆ ಅವರು ಚಿತ್ರದಲ್ಲಿದ್ದ ಮಹಿಳೆ ಯಾರು ಅಥವಾ ಆಕೆಯ ಜೊತೆಗಿರುವ ಸಂಬಂಧವಾದರೂ ಏನು ಎನ್ನುವ ಬಗ್ಗೆ ಯಾವುದೇ ಮಾತೂ ಹೇಳಿರಲಿಲ್ಲ.
ಎಕ್ಸ್ ನಲ್ಲಿ ಛಾಪಿಸಲಾದ ಚಿತ್ರ ವಿವಾದ ಸೃಷ್ಟಿಸಿ ವೈರಲ್ ಆಗುತ್ತಲೇ ಆರ್.ಜೆ.ಡಿ ನಾಯಕ, ತೇಜ್ ಪ್ರತಾಪ್ ಮೇಲೆ ಕೆರಳಿ ಕೆಂಡವಾಗಿದ್ದಾರೆ ಎಂದು ಲಾಲೂ ಕುಟುಂಬಕ್ಕೆ ನಿಕಟವಾಗಿರುವ ಮೂಲಗಳು ದಿ ಫೆಡರಲ್ಗೆ ತಿಳಿಸಿದೆ.
“ನಮ್ಮ ಕುಟುಂಬವನ್ನು ತೇಜ್ ಪ್ರತಾಪ್ ಮುಜುಗರಕ್ಕೆ ಗುರಿಪಡಿಸುತ್ತಿರುವುದು ಇದೇನೂ ಮೊದಲ ಬಾರಿಯಲ್ಲ. ತೇಜ್ ಪ್ರತಾಪ್ ನ್ನು ಸರಿದಾರಿಗೆ ತರಲು ಲಾಲೂಜಿ ಮಾಡಿದ ಶ್ರಮ ಅಷ್ಟಿಷ್ಟಲ್ಲ. ಅನೇಕ ಬಾರಿ ಆತ ಮಾಡಿದ ಕೃತ್ಯಗಳಿಗೆ ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಮಹಿಳೆಯೊಂದಿಗೆ ಕಾಣಿಸಿಕೊಂಡ ಆ ಪೋಸ್ಟ್ ಕೊನೆಯ ಪ್ರಹಾರವಾಗಿತ್ತು. ತಾವು ವರ್ಷಾನುವರ್ಷಗಳಿಂದ ಶ್ರಮಪಟ್ಟು ಕಟ್ಟಿದ ಸೌಧವನ್ನು ಹಾಳುಗೆಡಹಲು ತೇಜ್ ಪ್ರತಾಪ್ ಗೆ ಅವಕಾಶ ನೀಡುವುದಿಲ್ಲ ಎಂದು ಲಾಲೂ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ತೇಜಸ್ವಿ (ಲಾಲೂ ಕಿರಿಯ ಪುತ್ರ) ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಗೆ ಇನ್ನು ಕೆಲವೇ ತಿಂಗಳಿರುವಾಗ ಇಂತಹುದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಕಟುವಾಗಿ ತಿಳಿಸಿದ್ದಾರೆ” ಎಂದು ಪಕ್ಷದ ಮುಖ್ಯಸ್ಥರಿಗೆ ಆಪ್ತರೆಂದು ಪರಿಗಣಿತರಾದ ಹಿರಿಯ ಆರ್.ಜೆ.ಡಿ ನಾಯಕರು ದಿ ಫೆಡರಲ್ಗೆ ತಿಳಿಸಿದ್ದಾರೆ.
ಕುಟುಂಬಕ್ಕೆ ಗಂಟಲ ಮುಳ್ಳು
ಆರ್.ಜೆ.ಡಿ.ಯಿಂದ ತೇಜ್ ಪ್ರತಾಪ್ ಅವರನ್ನು ಹೊರಗಟ್ಟಿರುವುದು ಬಹಳ ಉತ್ತಮ ನಿರ್ಗಮನ ಎಂದು ಪಕ್ಷದಲ್ಲಿನ ಅನೇಕರು ಭಾವಿಸುತ್ತಾರೆ. ಇದು ಬಹಳ ಹಿಂದೆಯೇ ಆಗಬೇಕಿತ್ತು ಎಂದೂ ಅವರು ಹೇಳಿದ್ದಾರೆ. “ತೇಜ್ ಪ್ರತಾಪ್ ಯಾವತ್ತು ಪಕ್ಷವನ್ನು ಸೇರಿಕೊಂಡರೋ ಆವತ್ತಿನಿಂದಲೇ ಅವರು ತಮ್ಮ ಕುಟುಂಬಕ್ಕೆ ಗಂಟಲ ಮುಳ್ಳಾಗಿದ್ದರು” ಎಂದು 1997ರಲ್ಲಿ ಪಕ್ಷ ಸ್ಥಾಪನೆಯಾದ ಕಾಲದಿಂದಲೂ ಲಾಲೂ ಜೊತೆಗಿರುವ ಹಿರಿಯ ನಾಯಕರು ಅಭಿಪ್ರಾಯಪಡುತ್ತಾರೆ.
“ತೇಜ್ ಪ್ರತಾಪ್ ಅವರ ಸಾರ್ವಜನಿಕ ವರ್ತನೆಗಳು ಆರ್.ಜೆ.ಡಿ. ಬೆಂಬಲಿಗರಿಗೆ ಮಾತ್ರವಲ್ಲ ಹೊರಗಿನವರಿಗೂ ಇರಿಸುಮುರುಸು ಉಂಟುಮಾಡಿವೆ. ರಾಜಕೀಯವಾಗಿ ಅವರೆಂದರೂ ಪಕ್ಷದ ಹಿತಾಸಕ್ತಿಯ ಬಗ್ಗೆ ಚಿಂತಿಸಲಿಲ್ಲ. ತೇಜಸ್ವಿ ಅವರನ್ನು ಅವರ ತಂದೆ ಉತ್ತರಾಧಿಕಾರಿಯಾಗಿ ಮಾಡಿದ್ದು ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ. 2019ರ ಚುನಾವಣೆಯಲ್ಲೂ ಕೂಡ ಅವರು ಮೂವರು ಪಕ್ಷೇತರ ಅಭ್ಯರ್ಥಿಗಳ ಬೆಂಬಲಕ್ಕೆ ನಿಂತು ಮುಜುಗರ ತಂದರು. 2020ರ ವಿಧಾನಸಭಾ ಚುನಾವಣೆಯಲ್ಲಿ ಅವರು ಮಹುವಾ ಕ್ಷೇತ್ರದಿಂದ ಗೆಲ್ಲಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂಬುದು ಖಾತ್ರಿಯಾದಾಗ ಅತ್ಯಂತ ಸುರಕ್ಷಿತ ಕ್ಷೇತ್ರವಾದ ಹಸನ್-ಪುರಕ್ಕೆ ಅವರನ್ನು ಸ್ಥಳಾಂತರಿಸಿ ಗೆಲ್ಲಿಸಿಕೊಂಡು ಬರಲಾಯಿತು. ನಂತರ ಅವರು ಸಂತೋಷವಾಗಿರಲಿ ಎಂಬ ಕಾರಣಕ್ಕೆ ಮಂತ್ರಿ ಪದವಿಯನ್ನು ಕೊಟ್ಟರು. ಆದರೂ ತೇಜ್ ಲಾಲೂ ಕುಟುಂಬಕ್ಕೆ ತೇಜೋವಧೆ ಮಾಡುವುದನ್ನು ನಿಲ್ಲಿಸಲಿಲ್ಲ” ಎಂದು ಪಕ್ಷದ ಹಿರಿಯ ನಾಯಕರು ವಿವರಿಸುತ್ತಾರೆ.
ಕಳೆದ ಅನೇಕ ವರ್ಷಗಳಿಂದ ತೇಜ್ ಪ್ರತಾಪ್ ಅವರ ವರ್ತನೆ ಆರ್.ಜೆ.ಡಿ ಬೆಂಬಲಿಗರಿಗೆ ತಲೆನೋವಾಗಿ ಪರಿಣಮಿಸಿತ್ತು. ಅವರ ಸಾರ್ವಜನಿಕ ವರ್ತನೆಗಳು ಅತ್ಯಂತ ವಿಕ್ಷಿಪ್ತವಾಗಿದ್ದವು. ಅದರಲ್ಲೂ ವಿಶೇಷವಾಗಿ ಅವರು ಭಗವಾನ್ ಕೃಷ್ಣ ಅಥವಾ ಶಿವನಂತೆ ವೇಷ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಎಲ್ಲರನ್ನೂ ಮುಜುಗರಕ್ಕೆ ಗುರಿಪಡಿಸಿತ್ತು.
ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ತೇಜ್ ಅವರ ತಾಯಿ ರಾಬ್ರಿ ದೇವಿ ಅವರು ತಮ್ಮ ಮಗನ ಪರವಾಗಿ ನಿಂತಿದ್ದರೂ ಕೂಡ ಲಾಲೂ ಪ್ರಸಾದ್ ಮಾತ್ರ ‘ಸಾರ್ವಜನಿಕವಾಗಿ ನಿನ್ನ ಈ ನೌಟಂಕಿ ಬಿಟ್ಟುಬಿಡು’ ಎಂದು ಹಲವು ಬಾರಿ ಎಚ್ಚರಿಕೆ ನೀಡಿದ್ದರು ಎಂದು ಕುಟುಂಬದ ನಿಕಟವರ್ತಿಗಳು ಹೇಳುತ್ತಾರೆ.
ರಾಧೆ ವೇಷದಲ್ಲಿ ಪ್ರತಾಪ!
2018ರಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್ ರಾಯ್ ಅವರ ಮೊಮ್ಮಗಳಾದ ಐಶ್ವರ್ಯ ರಾಯ್ ಜೊತೆ ತೇಜ್ ಪ್ರತಾಪ್ ಮದುವೆ ಮಾಡಿದ್ದರಿಂದ ಅದಾಗಲೇ ಶಾಸಕರಾಗಿದ್ದ ತಮ್ಮ ಪುತ್ರನನ್ನು ‘ನೆಲೆಗೊಳಿಸಲು’ ಸಹಾಯವಾಗುತ್ತದೆ ಎಂದು ಲಾಲೂ ಭಾವಿಸಿದ್ದರು. ಆದರೆ ಮದುವೆ ನಡೆದು ಕೆಲವೇ ತಿಂಗಳುಗಳಲ್ಲಿ ಮುರಿದು ಬಿದ್ದಿತ್ತು. ಅದೇ ವರ್ಷ ಆಗಸ್ಟ್ ನಲ್ಲಿ ಐಶ್ವರ್ಯ ಒಂದು ಹೇಳಿಕೆ ನೀಡಿದ್ದರು; “ರಾಬ್ರಿ ದೇವಿ ಮತ್ತು ತೇಜ್ ಪ್ರತಾಪ್ ನನ್ನನ್ನು ಥಳಿಸಿ ಹೊರದಬ್ಬಿದರು” ಎಂದು.
ಅಲ್ಲಿಂದ ಮುಂದೆ ಇಬ್ಬರೂ ವಿಚ್ಛೇದನ ಪಡೆಯುವುದಕ್ಕಾಗಿ ನಿರಂತರ ಕಾನೂನು ಹೋರಾಟ ನಡೆಸುತ್ತ ಬಂದಿದ್ದಾರೆ. ‘ತೇಜ್ ಪ್ರತಾಪ್ ಒಬ್ಬ ಡ್ರಗ್ ವ್ಯಸನಿ. ಮನೆಯಲ್ಲಿ ರಾಧೆಯ ವೇಷ ಧರಿಸಿ ಅಡ್ಡಾಡುವ ಅಭ್ಯಾಸ ಹೊಂದಿದ್ದಾರೆ’ ಎಂದು ಐಶ್ವರ್ಯ ಅವರು ನ್ಯಾಯಾಲಯದಲ್ಲಿ ಹಾಗೂ ಮಾಧ್ಯಮದ ಮುಂದೆ ಹಲವು ಬಾರಿ ಹೇಳಿದ್ದರು.
ತೇಜ್ ಪ್ರತಾಪ್ ಮಾತ್ರ ಇವೆಲ್ಲವನ್ನೂ ನಿರಾಕರಿಸುತ್ತ, “ತಮ್ಮಿಂದ ಹೆಚ್ಚಿನ ಜೀವನಾಂಶವನ್ನು ಗಿಟ್ಟಿಸಲು ಈಕೆ ನನ್ನನ್ನು ಮತ್ತು ನನ್ನ ಕುಟುಂಬವನ್ನು ದೂಷಿಸುತ್ತಿದ್ದಾರೆ” ಎಂದು ಪತ್ನಿಯ ವಿರುದ್ಧ ಆರೋಪ ಮಾಡಿದ್ದರು.
ಇದು ತೇಜ್ ಪ್ರತಾಪ್ ಕೌಟುಂಬಿಕ ಜೀವನದ ಕಥೆಯಾದರೆ ರಾಜಕೀಯವಾಗಿಯೂ ಅವರು ಅಪ್ಪ ಲಾಲೂ ಪ್ರಸಾದ್ ಅವರಿಗೆ ಎಂದೂ ನೆಮ್ಮದಿಯನ್ನು ತರಲಿಲ್ಲ. ಪಕ್ಷ ಮತ್ತು ಅದರ ನಾಯಕರನ್ನು ಪದೇ ಪದೇ ಇಕ್ಕಟ್ಟಿಗೆ ಸಿಲುಕಿಸುವುದು ಅವರ ಚಾಳಿಯಾಗಿತ್ತು. ತಮ್ಮ ತಂದೆ ಕಿರಿಯ ಪುತ್ರ ತೇಜಸ್ವಿಯನ್ನು ಉತ್ತರಾಧಿಕಾರಿ ಎಂದು ಬಿಂಬಿಸುವುದು ಖಾತರಿಯಾಗಿದ್ದರೂ ಕೂಡ ತೇಜ್ ಪ್ರತಾಪ್ ಮಾತ್ರ ತಮ್ಮನ ವಿರುದ್ಧ ಕತ್ತಿ ಮಸೆಯುವುದನ್ನು ಬಿಟ್ಟಿರಲಿಲ್ಲ.
“2020ರಿಂದೀಚೆಗೆ ಕನಿಷ್ಠ ಸಾರ್ವಜನಿಕವಾಗಿ ತೇಜಸ್ವಿ ಜೊತೆಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳುವ ಪ್ರಯತ್ನವನ್ನು ತೇಜ್ ಪ್ರತಾಪ್ ಮಾಡಿದ್ದರು. ಆದರೂ ಇವೆಲ್ಲವೂ ಮೇಲ್ನೋಟಕ್ಕೆ ಎಂಬುದು ಪಕ್ಷದಲ್ಲಿರುವ ಎಲ್ಲರಿಗೂ ತಿಳಿದಿತ್ತು. 2019ರಲ್ಲಿ ಅವರು ಲಾಲೂ-ರಾಬ್ರಿ ಮೋರ್ಚಾವನ್ನು ಹುಟ್ಟುಹಾಕಿದ್ದರು. ಅದೇನು ಆರ್.ಜೆ.ಡಿಯನ್ನು ಬಲಪಡಿಸುವ ಉದ್ದೇಶದಿಂದ ಅಲ್ಲ, ಬದಲಾಗಿ ತೇಜಸ್ವಿ ವಿರುದ್ಧ ತಂತ್ರ ಹೂಡುವುದಾಗಿತ್ತು. ಆದರೆ ಆ ಪ್ರಯೋಗ ಸಂಪೂರ್ಣ ವಿಫಲವಾಗಿದ್ದರಿಂದ 2020ರ ಬಿಹಾರ ಚುನಾವಣೆಯ ಬಳಿಕ ತೇಜಸ್ವಿಯನ್ನು ನಾಯಕ ಎಂದು ಒಪ್ಪಿಕೊಳ್ಳುವುದು ಅವರಿಗೆ ಅನಿವಾರ್ಯವಾಗಿ ಹೋಯಿತು” ಎಂದು ಆರ್.ಜೆ.ಡಿ.ಯ ಎಂ.ಎಲ್.ಸಿ ಒಬ್ಬರು ವಿವರಿಸುತ್ತಾರೆ.
ಗುಟ್ಟಾಗೇನೂ ಉಳಿದಿಲ್ಲ
“ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಹೊರದಬ್ಬಿದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಯಾಕೆಂದರೆ ಆತ ಎಷ್ಟು ಅಪಸವ್ಯದ ಮನುಷ್ಯ ಎಂಬುದು ಎಲ್ಲರಿಗೂ ತಿಳಿದ ವಿಚಾರ” ಎಂದು ಅವರು ವಿವರಿಸುತ್ತಾರೆ.
ಆದರೂ ಲಾಲೂ ತಮ್ಮ ಪುತ್ರನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರಿಂದ ಪಕ್ಷಕ್ಕೆ ತಕ್ಕ ಮಟ್ಟಿಗೆ ಸಹಾಯವಾಗಬಹುದಾದರೂ ಟೀಕೆಗಳಿಂದ ಬಚಾವಾಗಲು ಸಾಧ್ಯವಿಲ್ಲ ಎಂದು ಹೇಳುವವರೂ ಇದ್ದಾರೆ. ಲಾಲೂ ಅವರ ಈ ನಿರ್ಧಾರವು ಮರ್ಯಾದೆ ಉಳಿಸಿಕೊಳ್ಳಲು ಮಾಡಿದ ಆಟವಷ್ಟೇ ಎಂದು ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ ಪಾಳಯ ಬೊಟ್ಟುಮಾಡುವುದನ್ನು ಬಿಡುವುದಿಲ್ಲ.
ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಬಳಿಕ ಪಾಟ್ನಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಮಂತ್ರಿ ಹಾಗೂ ಜೆಡಿಯು ಎಂಎಲ್ಸಿ ನೀರಜ್ ಕುಮಾರ್, ಇದು ಕೇವಲ ಲಾಲೂ ಯಾದವ್ ಅವರ ಕುಟುಂಬದ ವಿಷಯವಲ್ಲ. ಬದಲಿಗೆ ಚುನಾವಣೆಗೆ ಮುನ್ನ ಪಕ್ಷದ ಪ್ರತಿಷ್ಠೆಯನ್ನು ಉಳಿಸಲು ಲಾಲೂ ಮಾಡಿದ ಕಸರತ್ತು. ಸಾರ್ವಜನಿಕ ಜೀವನದಲ್ಲಿ ತಾವು ಯಾವತ್ತೂ ಸಂಸ್ಕಾರಯುತ ನಡವಳಿಕೆ ಮತ್ತು ಶಿಷ್ಟಾಚಾರಕ್ಕೆ ಬೆಲೆ ಕೊಡುತ್ತೇನೆ ಎಂದು ಲಾಲು ಹೇಳುತ್ತಿರುತ್ತಾರೆ. ಆದರೆ ಅವರ ಕುಟುಂಬವು ತೇಜ್ ಪ್ರತಾಪ್ ಪತ್ನಿ ಐಶ್ವರ್ಯ ಅವರನ್ನು ಹೊರಗಟ್ಟಿದಾಗ ಈ ಎಲ್ಲ ಶಿಷ್ಟಾಚಾರ ಎಲ್ಲಿತ್ತು? ತೇಜ್ ಪ್ರತಾಪ್ ಮಹಿಳೆಯೊಂದಿಗೆ ಇರುವ ಚಿತ್ರದಲ್ಲಿ 12 ವರ್ಷಗಳಿಂದಲೂ ಸಂಬಂಧ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದರು. ಅಂದರೆ ಅವರು ವಿವಾಹಿತರಾಗಿದ್ದಾಗಲೂ ಆಕೆಯ ಜೊತೆ ಸಂಬಂಧ ಹೊಂದಿದ್ದರು ಎಂದು ಅರ್ಥವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.