
ಜಾತಿ, ಭ್ರಷ್ಟಾಚಾರ, ಪಾತಕಿಗಳ ನಂಟು: ಹರ್ಯಾಣ ಪೊಲೀಸ್ ಆತ್ಮಹತ್ಯೆ ಪ್ರಕರಣ ಇನ್ನಷ್ಟು ಕಗ್ಗಂಟು
ಜಾತಿ ರಾಜಕಾರಣ, ಭ್ರಷ್ಟಾಚಾರ, ಪಾತಕಿಗಳ ಜೊತೆ ನಂಟು... ಹರ್ಯಾಣ ಪೊಲೀಸ್ ಪಡೆ ಯಾವೆಲ್ಲ ಜಾಲಗಳಲ್ಲಿ ಸಿಕ್ಕಿಹಾಕಿಕೊಂಡಿದೆ? ಇವೆಲ್ಲದರಲ್ಲಿ ನಿಜಕ್ಕೂ ಬಲಿಪಶು ಆದವರು ಯಾರು? ನಿಜವಾದ ದುಷ್ಕರ್ಮಿಗಳು ಯಾರು? ಇಡೀ ಪ್ರಕರಣ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತ ಸಾಗಿದೆ...
ಹರ್ಯಾಣದಲ್ಲಿ ಕೇವಲ ಒಂದೇ ವಾರದ ಅಂತರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟಿದ್ದಾರೆ. ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಒಬ್ಬ ಪೊಲೀಸ್ ಅಧಿಕಾರಿ ಸಹೋದ್ಯೋಗಿ ವಿರುದ್ಧ ಜಾತಿವಾದದ ಆರೋಪ ಮಾಡಿದ್ದರೆ, ಇನ್ನೊಬ್ಬರು ಅದೇ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.
ಇಬ್ಬರೂ ಅಧಿಕಾರಿಗಳು ಇಂದು ಇಲ್ಲ. ಆದರೆ ಈ ಪ್ರಕರಣದ ಜೊತೆ ಜಾತಿ ರಾಜಕಾರಣ, ಭ್ರಷ್ಟಾಚಾರ ಮತ್ತು ರೌಡಿಗಳ ಸಂಬಂಧ ಹೊಂದಿದ ಆರೋಪವೂ ಕೇಳಿ ಬಂದಿದ್ದು, ಹರ್ಯಾಣ ಪೊಲೀಸರ ವಿಶ್ವಾಸಾರ್ಹತೆಯನ್ನು ಪಣಕ್ಕೊಡ್ಡಿದೆ. ಈ ಜಟಿಲ ಪ್ರಕರಣವನ್ನು ಭೇದಿಸಲು ತನಿಖಾಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟಾರೆ ಏನಾಗಿದೆ ಎಂಬುದರ ವಿವರ ಇಲ್ಲಿದೆ.
ಇದು ಆರಂಭವಾಗಿದ್ದು ಹಿರಿಯ ಐಪಿಎಸ್ ಅಧಿಕಾರಿ ವೈ.ಪೂರನ್ ಕುಮಾರ್ ಅವರ ಸಾವಿನೊಂದಿಗೆ. ಅಕ್ಟೋಬರ್ ಏಳರಂದು ಚಂಡಿಗಢದಲ್ಲಿರುವ ಸೆಕ್ಟರ್-11ರಲ್ಲಿನ ತಮ್ಮ ನಿವಾಸದಲ್ಲಿ ತಮಗೆ ಗುಂಡಿಟ್ಟುಕೊಂಡು ಪೂರನ್ ಅವರು ಸಾವಿಗೆ ಶರಣಾಗಿದ್ದರು. ಅದಕ್ಕೂ ಮೊದಲು ಅವರು ಎಂಟು ಪುಟಗಳ ‘ಅಂತಿಮ ಟಿಪ್ಪಣಿ’ಯನ್ನು ಅವರು ಬರೆದಿಟ್ಟಿದ್ದು ಅದರಲ್ಲಿ ಅವರು ತಮ್ಮ ಜಾತಿಯ ಕಾರಣದಿಂದ ಎದುರಿಸುತ್ತಿದ್ದೆ ಎನ್ನಲಾದ ತೇಜೋವಧೆಯನ್ನು ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಹಿರಿಯ ಐಎಎಸ್ ಅಧಿಕಾರಿ ಅಮನೀತ್ ಪಿ.ಕುಮಾರ್ ಅವರು ಹರ್ಯಾಣದ ಡಿಜಿಪಿ ಶತ್ರುಜೀತ್ ಕಪೂರ್ ಸೇರಿದಂತೆ ಉನ್ನತ ಅಧಿಕಾರಿಗಳು ವಿರುದ್ಧ ದೂರು ದಾಖಲಿಸಿದ್ದಾರೆ.
ತೇಜೋವಧೆಯ ಆರೋಪ
ಪೂರನ್ ಅವರು ಬರೆದಿರುವ ಟಿಪ್ಪಣಿಯಲ್ಲಿ, ಅವರ ವಿರುದ್ಧ ಕೆಲವು ಅಧಿಕಾರಿಗಳು ಅನೇಕ ತಿಂಗಳುಗಳಿಂದ ನಿರಂತರ ದುರುದ್ದೇಶಪೂರಿತ, ದುಷ್ಕೃತ್ಯದ, ಅನಾಮಧೇಯ ಮತ್ತು ಹುಸಿ-ಅನಾಮಧೇಯ ದೂರುಗಳನ್ನು ಸೃಷ್ಟಿಸಿ, ಪ್ರಚಾರ ಮಾಡಿ, ಸಂಸ್ಕರಿಸಿ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿ, ಮುಜುಗರಕ್ಕೆ ಒಳಪಡಿಸಿ, ಗೌರವಕ್ಕೆ ಕುಂದು ತರುವ ಪ್ರಯತ್ನಗಳು ನಡೆದಿತ್ತು ಎಂದು ಆರೋಪಿಸಲಾಗಿದೆ.
ಡಿಜಿಪಿ ಕಪೂರ್ ಮತ್ತು ಇನ್ನೊಬ್ಬ ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅಮನೀತ್ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಒತ್ತಡ ಜಾಸ್ತಿಯಾಗುತ್ತಿದ್ದಂತೆ ಹರ್ಯಾಣದ ಬಿಜೆಪಿ ಸರ್ಕಾರ ಡಿಜಿಪಿ ಕಪೂರ್ ಅವರನ್ನು ರಜೆಯ ಮೇಲೆ ಕಳಿಸಿದೆ ಮತ್ತು ಅವರ ಸ್ಥಾನದಲ್ಲಿ ರೋಹ್ಟಕ್ ಎಸ್.ಪಿ ನರೇಂದ್ರ ಬಿಜ್ರಾನಿಯಾ ಅವರನ್ನು ನೇಮಕ ಮಾಡಿದೆ.
ಪೂರನ್ ಕುಮಾರ್ ಅವರು ತಮ್ಮ ಕೊನೆಯ ಟಿಪ್ಪಣಿಯಲ್ಲಿ ಹೆಸರಿಸಲಾಗಿರುವ ಎಂಟು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳಲ್ಲಿ ಇವರೂ ಸೇರಿದ್ದರು.
ಇನ್ನೊಬ್ಬ ಅಧಿಕಾರಿ ಆತ್ಮಹತ್ಯೆ
ಇಂತಹ ಜಾತಿ ತಾರತಮ್ಯದ ಬಗ್ಗೆ ದೊಡ್ಡ ವಿವಾದ ಭುಗಿಲೆದ್ದಿರುವಾಗಲೇ ಅಕ್ಟೋಬರ್ 14ರಂದು ಈ ಪ್ರಕರಣಕ್ಕೆ ಇನ್ನೊಂದು ನಾಟಕೀಯ ತಿರುವು ದೊರೆಯಿತು. ಇದೇ ಪೂರನ್ ಕುಮಾರ್ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿದ್ದ ಎನ್ನಲಾದ ಎಎಸ್ಐ ಸಂದೀಪ್ ಕುಮಾರ್ ಲಾಥರ್ ಅವರೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದರು ಎಂದು ಆರೋಪಿಸಲಾಗಿದೆ. ಅವರ ದೇಹವು ರೋಹ್ಟಕ್-ಪಾಣಿಪತ್ ರಸ್ತೆಯ ಪಕ್ಕದ ಜಮೀನಿನ ಬಳಿ ಪತ್ತೆಯಾಗಿತ್ತು.
ತಮ್ಮ ಸಾವಿಗೂ ಮುನ್ನ ಅವರೂ ಒಂದು ವಿಡಿಯೋ ಮಾಡಿದ್ದರು ಮತ್ತು ಮೂರು ಪುಟಗಳ ಟಿಪ್ಪಣಿಯನ್ನು ಬರೆದಿಟ್ಟಿದ್ದಾರೆ. ‘ಪೂರನ್ ಕುಮಾರ್ ಅವರೊಬ್ಬ ‘ಭ್ರಷ್ಟ ಅಧಿಕಾರಿ’ಯಾಗಿದ್ದು ಅವರು ಲಂಚ, ಸುಲಿಗೆ ಮತ್ತು ಮಹಿಳಾ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು’ ಎಂದು ಅವರು ಅದರಲ್ಲಿ ಆರೋಪ ಮಾಡಿದ್ದಾರೆ.
“ಹರ್ಯಾಣ ಡಿಜಿಪಿ ಪ್ರಾಮಾಣಿಕ ವ್ಯಕ್ತಿ. ಡಿಜಿಪಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸುತ್ತಿರುವ ಈ ಜನರು ಮತ್ತು ಸಂಘಟನೆಗಳು ಅವರಿಗೆ ಭ್ರಷ್ಟಾಚಾರ ಮಾಡಲು ಸ್ವಾತಂತ್ರ್ಯ ಸಿಗಲಿ ಎಂಬ ಕಾರಣಕ್ಕೆ. ನೀವು ಯಾಕೆ ಈ ದೇಶವನ್ನು ನಾಶ ಮಾಡುತ್ತಿದ್ದೀರಿ? ಜಾತಿವಾದದ ವಿಷ ಎಲ್ಲೆಡೆ ವ್ಯಾಪಿಸುತ್ತಿದೆ. ನಾವು ಭ್ರಷ್ಟರ ಮುಂದೆ ತಲೆಬಾಗಬಾರದು. ರಾಜಕೀಯದ ಮೂಲಕ ದೊಡ್ಡ ಸತ್ಯಗಳನ್ನು ಮುಚ್ಚಿಹಾಕಲಾಗುತ್ತಿದೆ,” ಎಂದು ಲಾಥರ್ ಅವರು ತಾವು ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ತನಿಖೆ ಮಾಡಿದರೆ ಎಲ್ಲವೂ ಬಯಲಾಗುತ್ತದೆ ಎಂದು ಹೆದರಿದ ಪೂರನ್ ಕುಮಾರ್ ಆತ್ಯಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಲಾಥರ್ ಆರೋಪಿಸಿದ್ದಾರೆ. ವಿಡಿಯೋದಲ್ಲಿ ಲಾತರ್ ಅವರು ಪೂರನ್ ಪತ್ನಿ ಅಮ್ನೀತ್ ವಿರುದ್ಧವೂ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
“ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು ಎಂದು ಒತ್ತಾಯಿಸಲು ನನ್ನ ಜೀವನವನ್ನೇ ತ್ಯಾಗ ಮಾಡುತ್ತಿದ್ದೇನೆ. ಈ ಭ್ರಷ್ಟ ಕುಟುಂಬಕ್ಕೆ ಎಂದಿಗೂ ವಿನಾಯ್ತಿ ನೀಡಬಾರದು” ಎಂದು ಲಾಥರ್ ಅವರ ಟಿಪ್ಪಣಿಯಲ್ಲಿ ಬರೆಯಲಾಗಿತ್ತು.
ಪೂರನ್ ಕುಮಾರ್ ಅವರು ‘ಜಾತಿ ರಾಜಕೀಯ’ದ ಮೂಲಕ ಹೇಗೆ ಇಡೀ ವ್ಯವಸ್ಥೆಯನ್ನು ಹಾಳುಗೆಡಹಿದರು ಮತ್ತು ತಮ್ಮದೇ ಆದ ಭ್ರಷ್ಟ ತಂಡವನ್ನು ಸ್ಥಾಪಿಸಲು ಹೇಗೆ ಕೆಲವು ಅಧಿಕಾರಿಗಳನ್ನು ಕಿತ್ತುಹಾಕಿದರು ಎಂಬುದನ್ನೂ ಲಾಥರ್ ವಿವರಿಸಿದ್ದಾರೆ.
ಪಾತಕಿ ಜೊತೆಗೆ 50 ಕೋಟಿ ಡೀಲ್
ರಾವ್ ಇಂದ್ರಜಿತ್ ಎಂಬ ಪಾತಕಿಯ ಹೆಸರನ್ನು ಕೊಲೆ ಪ್ರಕರಣದಿಂದ ಕಿತ್ತುಹಾಕಲು ಆತನೊಂದಿಗೆ 50 ಕೋಟಿ ರೂ. ಡೀಲ್ ಕುದುರಿಸಿದರು ಎಂದೂ ಆರೋಪಿಸಲಾಗಿದೆ. ಒಂದು ಸಂಗೀತ ಕಂಪನಿಯನ್ನು ನಡೆಸುವ ಇಂದ್ರಜಿತ್ ಹರ್ಯಾಣದಲ್ಲಿ ಅನೇಕ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದು ಸದ್ಯ ಅಮೆರಿಕದಲ್ಲಿ ತಲೆಮರೆಸಿಕೊಂಡಿದ್ದಾನೆ.
ಹಿಮಾಂಶು ಭಾವು ಎಂಬಾತನ ಗ್ಯಾಂಗ್ ಜೊತೆ ನಂಟು ಹೊಂದಿರುವ ಇಂದ್ರಜಿತ್ ಹೆಸರು ಹಲವಾರು ಉನ್ನತ ಮಟ್ಟದ ಪ್ರಕರಣಗಳಲ್ಲಿ ತಳಕು ಹಾಕಿಕೊಂಡಿದೆ. ಅವುಗಳಲ್ಲಿ, ರೋಹ್ಟಕ್ ಹಣಕಾಸು ಲೇವಾದೇವಿದಾರ ಮಂಜೀತ್, ಯುಟ್ಯೂಬರ್ ಎಲ್ವಿಶ್ ಯಾದವ್ ಅವರ ನಿವಾಸದಲ್ಲಿ ನಡೆದ ಗುಂಡಿನ ದಾಳಿ, ಹರ್ಯಾಣದ ರಾಪರ್ ರಾಹುಲ್ ಯಾದವ್ ಮೇಲಿನ ದಾಳಿ ಸೇರಿದೆ.
ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ತಂಡ ಪೂರನ್ ಕುಮಾರ್ ಆತ್ಮಹತ್ಯೆಗೂ ಮುನ್ನ ಬರೆದ ಟಿಪ್ಪಣಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಅವರ ಅಧಿಕೃತ ಲ್ಯಾಪ್-ಟಾಪ್ ಅನ್ನು ಫೊರೆನ್ಸಿಕ್ ವಿಶ್ಲೇಷಣೆಗಾಗಿ ಕೇಳಿದೆ.
ಪ್ರಕರಣದ ತಪ್ಪು ನಿರೂಪಣೆ
ಆದರೆ ಅಮ್ನೀತ್ ಅವರು ಎಸ್.ಐ.ಟಿಗೆ ಬರೆದಿರುವ ಮೂರು ಪುಟಗಳ ಪತ್ರದಲ್ಲಿ, ತಾವು ಅಕ್ಟೋಬರ್ ಹತ್ತರಂದೇ ಲ್ಯಾಪ್-ಟಾಪ್ ಅನ್ನು ಪೊಲೀಸರ ವಶಕ್ಕೆ ಒಪ್ಪಿಸಿರುವುದಾಗಿ ತಿಳಿಸಿದ್ದಾರೆ. ಅದನ್ನು ಒಪ್ಪಿಸಿ ಗಂಟೆಗಳು ಕಳೆದರೂ ಪೊಲೀಸ್ ಐಟಿ ಟೀಮ್ ದತ್ತಾಂಶ ಡಿಜಿಟಲ್ ಬೆರಳಚ್ಚು ಸೃಷ್ಟಿಸಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ತಾವು ಈ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದರೂ ಪ್ರಕರಣವನ್ನು ತಪ್ಪಾಗಿ ನಿರೂಪಿಸಲಾಗುತ್ತಿದೆ ಎಂದೂ ಅಮ್ನೀತ್ ದೂರಿದ್ದಾರೆ.
ಆರಂಭದಲ್ಲಿ ಪೊಲೀಸ್ ದೂರನ್ನು ದಾಖಲಿಸಿದ್ದ ಅವರು, ತಮ್ಮ ಪತಿ ಆತ್ಮಹತ್ಯಾ ಪತ್ರದಲ್ಲಿ ಹೆಸರಿಸಿರುವ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.
ಆದರೆ ಪೂರನ್ ಕುಮಾರ್ ಮರಣೋತ್ತರ ಪರೀಕ್ಷೆಯನ್ನು ನಡೆಸಲು ಅವರ ಕುಟುಂಬದಿಂದ ಅನುಮತಿಯನ್ನು ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರ ಹೆಸರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿತ್ತು. ಮರಣೋತ್ತರ ಪರೀಕ್ಷೆಯನ್ನು ನಡೆಸಲು ಅವರ ಮೃತದೇಹವನ್ನು ಗುರುತಿಸುವಂತೆ ನಿರ್ದೇಶನ ನೀಡಬೇಕು ಎಂದು ಚಂಡೀಗಢ ಪೊಲೀಸರು ಕೋರ್ಟ್ ಮೆಟ್ಟಿಲು ಹತ್ತಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಜಾತಿ ತಾರತಮ್ಯದ ಆರೋಪ
ಊಹೆಯಂತೆ ಪ್ರಕರಣಕ್ಕೆ ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ. ವ್ಯವಸ್ಥಿತವಾದ ಜಾತಿ ತಾರತಮ್ಯದ ಹಿನ್ನೆಲೆಯಲ್ಲಿ ದಲಿತ ಅಧಿಕಾರಿಯಾಗಿರುವ ಪೂರನ್ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಿರ್ಮಿಸಲಾಯಿತು ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಕುಮಾರ್ ಅವರ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಈ ಪ್ರಕರಣದ ಮೂಲಕ ದಲಿತರಿಗೆ ಒಂದು ಕೆಟ್ಟ ಸಂದೇಶವನ್ನು ಕಳುಹಿಸಿದಂತಾಗಿದೆ, ನೀವೆಷ್ಟೇ ಯಶಸ್ವಿಯಾಗಿದ್ದರೂ ನೀವು ದಲಿತರಾಗಿದ್ದರೆ ನಿಮ್ಮನ್ನು ತೇಜೋವಧೆಗೆ ಗುರಿಪಡಿಸಲಾಗುತ್ತದೆ, ತುಳಿದುಹಾಕಲಾಗುತ್ತದೆ ಎಂದು ಟೀಕಿಸಿದರು. ಹರ್ಯಾಣದ ಮುಖ್ಯಮಂತ್ರಿ ಈ ಪ್ರಕರಣದ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಸುತ್ತಿಲ್ಲ ಎಂದೂ ಅವರು ಆರೋಪಿಸಿದರು.