No Politics Please | ತಿರುಪತಿ ದೇವಸ್ಥಾನದಲ್ಲಿ ರಾಜಕೀಯ ಮಾತನಾಡುವಂತಿಲ್ಲ!
ವಿಶ್ವಪ್ರಸಿದ್ಧ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜಕಾರಣಿಗಳು ಯಾವುದೇ ರಾಜಕೀಯ ಭಾಷಣ ಅಥವಾ ಹೇಳಿಕೆಗಳನ್ನು ನೀಡುವಂತಿಲ್ಲ ಎಂಬುದಾಗಿ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ಹೊರಡಿಸಿದೆ. ದೇವಸ್ಥಾನದ ವ್ಯಾಪ್ತಿಯಲ್ಲಿ ರಾಜಕೀಯ ಭಾಷಣ ಮಾಡುವುದು ಪಾವಿತ್ರ್ಯ ಹಾಗೂ ಆಧ್ಯಾತ್ಮಿಕ ನೆಮ್ಮದಿಗೆ ಧಕ್ಕೆ ಎಂದು ಹೇಳಿರುವ ಅಧಿಕಾರಿಗಳು ರಾಜಕೀಯ ದ್ವೇಷದ ಭಾಷಣಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಎಲ್ಲೆಡೆಯೂ ಗೋವಿಂದನ ನಾಮಗಳಿಂದ ಪ್ರತಿಧ್ವನಿಸುವ "ಪವಿತ್ರ ತಿರುಮಲ ದೇವಾಲಯ"ದ ಆಧ್ಯಾತ್ಮಿಕ ವಾತಾವರಣವು "ರಾಜಕೀಯ ಮತ್ತು ದ್ವೇಷವನ್ನುಂಟುಮಾಡುವ ಕೆಲವು ವ್ಯಕ್ತಿಗಳು ಮತ್ತು ರಾಜಕೀಯ ನಾಯಕರಿಂದ" ಅಪವಿತ್ರಗೊಂಡಿದೆ. ಹೀಗಾಗಿ ಇನ್ನು ಮುಂದೆ ಅಂಥ ಹೇಳಿಕೆಗಳನ್ನು ನೀಡದಂತೆ ಸೂಚನೆ ನೀಡಲಾಗಿದೆ.
ದೇವಸ್ಥಾನದಲ್ಲಿ ದೇವರ ದರ್ಶನ ಪಡೆದುಕೊಂಡು ಹೊರಗಡೆ ಬಂದು ಮಾಧ್ಯಮಗಳನ್ನುಉದ್ದೇಶಿಸಿ ಮಾತನಾಡಬೇಕು ಎಂದಿರುವ ಟಿಟಿಡಿ, ಈ ನಿಯಮವನ್ನು ಮುರಿಯುವವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
ಲಡ್ಡು ವಿವಾದ
ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತದಲ್ಲಿ ತಿರುಪತಿ ಲಡ್ಡುಗಳನ್ನು ತಯಾರಿಸುವಾಗ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು. ಆ ಬಳಿಕ ತಿರುಮಲ ದೇವಸ್ಥಾನವು ರಾಜಕೀಯ ವಿವಾದದಲ್ಲಿ ಸಿಲುಕಿದೆ. ಇದು ಕೋಲಾಹಲ ಸೃಷ್ಟಿಸಿ ಅಂತಿಮವಾಗಿ ಎಸ್‌ಐಟಿ ತನಿಖೆಗೆ ಆರಂಭಗೊಂಡಿದೆ. ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕ ಸಿಬಿಐ ನಿರ್ದೇಶಕರ ಮೇಲ್ವಿಚಾರಣೆಯಡಿ ತನಿಖೆ ನಡೆಸಲು ಆದೇಶಿಸಿದೆ.
ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ) ತನ್ನ ಸಮರ್ಥನೆ ಸಾಬೀತುಪಡಿಸಲು ಪ್ರಯೋಗಾಲಯದ ವರದಿ ಬಿಡುಗಡೆ ಮಾಡಿದೆ. ಆದರೆ ರಾಜಕೀಯ ಲಾಭಕ್ಕಾಗಿ ನಾಯ್ಡು ಅವರು "ಕಳಪೆ ಆರೋಪಗಳನ್ನು" ಮಾಡಿದ್ದಾರೆ ಎಂದು ವೈಎಸ್ಆರ್ ಕಾಂಗ್ರೆಸ್ ಹೊಡೆದಿದೆ.
ಟಿಟಿಡಿ ಮಂಡಳಿ ತಿರುಪತಿ ದೇವಾಲಯ ಮತ್ತು ಅವುಗಳ ಉಪ-ದೇಗುಲಗಳನ್ನು ನಿರ್ವಹಿಸುತ್ತದೆ. ಇದರ ನಿರ್ವಹಣೆಗಾಗಿ ಸುಮಾರು 14,000 ಜನರನ್ನು ನೇಮಿಸಿಕೊಂಡಿದೆ. ಇದು 1987ರ ಅಧಿನಿಯಮ 30 ರ ಮೊದಲ ಶೆಡ್ಯೂಲ್ 2 ರ ಅಡಿಯಲ್ಲಿ ಬರುವ ದೇವಾಲಯಗಳ ಸಮೂಹ. ಟ್ರಸ್ಟಿಗಳ ಮಂಡಳಿಯನ್ನು ಸರ್ಕಾರವು ನೇಮಿಸಿದ ಸದಸ್ಯರು ರಚಿಸುತ್ತಾರೆ. .