ನಾನು ಭಾರತೀಯ ಎಂದರೂ ಬಿಡದ ಹಂತಕರು; ಜನಾಂಗೀಯ ದ್ವೇಷಕ್ಕೆ ವಿದ್ಯಾರ್ಥಿ ಬಲಿ
x
ತ್ರಿಪುರಾ ಮೂಲದ ಎಂಬಿಎ ವಿದ್ಯಾರ್ಥಿ ಏಂಜೆಲ್‌ ಚಕ್ಮಾ

'ನಾನು ಭಾರತೀಯ' ಎಂದರೂ ಬಿಡದ ಹಂತಕರು; ಜನಾಂಗೀಯ ದ್ವೇಷಕ್ಕೆ ವಿದ್ಯಾರ್ಥಿ ಬಲಿ

ಡೆಹ್ರಾಡೂನ್‌ನಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿ ತ್ರಿಪುರಾದ ಎಂಬಿಎ ವಿದ್ಯಾರ್ಥಿ ಏಂಜೆಲ್‌ ಚಕ್ಮಾ ಸಾವನ್ನಪ್ಪಿದ್ದಾರೆ. ಆರೋಪಿಗಳ ಪತ್ತೆಗೆ ನೇಪಾಳಕ್ಕೆ ಪೊಲೀಸ್ ತಂಡ ರವಾನೆಯಾಗಿದ್ದು, ಸಿಎಂ ಪುಷ್ಕರ್ ಸಿಂಗ್ ಧಾಮಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯ ಭರವಸೆ ನೀಡಿದ್ದಾರೆ.


Click the Play button to hear this message in audio format

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ತ್ರಿಪುರಾ ಮೂಲದ ಎಂಬಿಎ ವಿದ್ಯಾರ್ಥಿ ಏಂಜೆಲ್‌ ಚಕ್ಮಾ (24) ಎಂಬುವವರನ್ನು ಜನಾಂಗೀಯವಾಗಿ ನಿಂದಿಸಿ, ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಏನಿದು ಘಟನೆ?

ತ್ರಿಪುರಾದ ಉನಕೋಟಿ ಜಿಲ್ಲೆಯ ನಿವಾಸಿಯಾದ ಏಂಜೆಲ್‌ ಚಕ್ಮಾ ಮತ್ತು ಅವರ ಸಹೋದರ ಮೈಕೆಲ್ ಮೇಲೆ ಡಿಸೆಂಬರ್ 9ರಂದು ಸೆಲಾಕುಯಿ ಮಾರುಕಟ್ಟೆಯಲ್ಲಿ ಆರು ಜನರ ತಂಡ ದಾಳಿ ಮಾಡಿತ್ತು. ಆರೋಪಿಗಳು ಅಂಜಲಿ ಅವರ ಮೇಲೆ ಚಾಕು ಮತ್ತು ಬ್ರಾಸ್ ನಕಲ್ಸ್‌ಗಳಿಂದ (Brass Knuckles) ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಏಂಜೆಲ್‌, ಡಿಸೆಂಬರ್ 26ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರು.

ತಂದೆಯ ಗೋಳಾಟ

ಬಿಎಸ್‌ಎಫ್ ಜವಾನರಾಗಿರುವ ಅಂಜಲಿ ಅವರ ತಂದೆ ತರುಣ್ ಚಕ್ಮಾ ಅವರು ತಮ್ಮ ಮಗನ ಸಾವಿನ ಬಗ್ಗೆ ಕಣ್ಣೀರಿಟ್ಟಿದ್ದಾರೆ. "ನನ್ನ ಇಬ್ಬರು ಮಕ್ಕಳು ಮಾರುಕಟ್ಟೆಗೆ ಹೋದಾಗ ಆರೋಪಿಗಳು ಅವರನ್ನು 'ಚೈನೀಸ್' ಮತ್ತು 'ಮೊಮೊ' ಎಂದು ಜನಾಂಗೀಯವಾಗಿ ನಿಂದಿಸಿದ್ದಾರೆ. ನನ್ನ ಮಗ ತಾನು ಭಾರತೀಯ ಎಂದು ಹೇಳಿಕೊಂಡರೂ ಕೇಳದ ಕಿರಾತಕರು ಆತನ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಮುರಿದಿದ್ದಾರೆ. ಅಂಜಲಿ ಓದಿನಲ್ಲಿ ಮುಂದಿದ್ದ, ಆತನಿಗೆ ಒಳ್ಳೆಯ ಕೆಲಸವೂ ಸಿಕ್ಕಿತ್ತು. ಈಗ ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ, ನಮಗೆ ನ್ಯಾಯ ಬೇಕು" ಎಂದು ಅವರು ಒತ್ತಾಯಿಸಿದ್ದಾರೆ.

ಆರು ಜನರ ಬಂಧನ

ಪೊಲೀಸರು ಈಗಾಗಲೇ ಆರು ಆರೋಪಿಗಳ ಪೈಕಿ ಐವರನ್ನು (ಇಬ್ಬರು ಅಪ್ರಾಪ್ತರು ಸೇರಿದಂತೆ) ಬಂಧಿಸಿದ್ದಾರೆ. ನೇಪಾಳ ಮೂಲದ ಯಜ್ಞರಾಜ್ ಅವಸ್ತಿ ಎಂಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ₹25,000 ಬಹುಮಾನ ಘೋಷಿಸಲಾಗಿದೆ. ಈತನ ಪತ್ತೆಗಾಗಿ ಪೊಲೀಸ್ ತಂಡ ನೇಪಾಳಕ್ಕೆ ತೆರಳಿದೆ. ಆರಂಭದಲ್ಲಿ ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ರಾಜಕೀಯ ನಾಯಕರ ಖಂಡನೆ

ತ್ರಿಪುರಾ ಸಿಎಂ ಮಾಣಿಕ್ ಸಹಾ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈಶಾನ್ಯ ಭಾರತದ ಜನರು ಕೂಡ ಈ ದೇಶದ ಪ್ರಜೆಗಳೇ, ಅವರ ಮೇಲಿನ ಇಂತಹ ಜನಾಂಗೀಯ ದಾಳಿಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More
Next Story