
ಪಹಲ್ಗಾಮ್‌ನಲ್ಲಿ ಮೃತಪಟ್ಟವರ ಪತ್ನಿಯರು ವೀರವನಿತೆಯರಲ್ಲ; ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ
ಮಹಿಳೆಯರು ತಮ್ಮ ಪತಿ ಹಾಗೂ ಸಿಂದೂರವನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡಲಿಲ್ಲ. ಕೈಮುಗಿದು ಬೇಡಿಕೊಂಡರೆ ಉಗ್ರರು ಬಿಡುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ರಾಮ್ ಚಂದರ್ ಜಂಗ್ರಾ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.
ಹರಿಯಾಣದ ಬಿಜೆಪಿ ರಾಜ್ಯಸಭಾ ಸದಸ್ಯ ರಾಮ್ ಚಂದರ್ ಜಂಗ್ರಾ ಅವರು ಪಹಲ್ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದಂತೆ ಶನಿವಾರ (ಮೇ 24) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಪ್ರವಾಸಿಗರು ಭಯೋತ್ಪಾದಕರ ವಿರುದ್ಧ ಹೋರಾಡಬೇಕಿತ್ತು ಮತ್ತು ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರು 'ವೀರ ವನಿತೆ' (ಯೋಧ ಮಹಿಳೆಯರಂತೆ) ಯುದ್ಧ ಮಾಡಬೇಕಿತ್ತು ಎಂದು ಅವರು ಹೇಳಿಕೆ ನೀಡಿದ್ದಾರೆ.
ಭಿವಾನಿಯಲ್ಲಿ ಅಹಲ್ಯಾಬಾಯಿ ಹೋಳ್ಕರ್‌ರ 300ನೇ ಜನ್ಮದಿನದ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಜಂಗ್ರಾ, ಪ್ರವಾಸಿಗರು ಅಗ್ನಿವೀರ್ ತರಬೇತಿ ಪಡೆದಿದ್ದರೆ ಸಾವು ನೋವಿನ ಸಂಖ್ಯೆ ಕಡಿಮೆಯಾಗುತ್ತಿತ್ತು ಎಂದೂ ಹೇಳಿದ್ದಾರೆ. ಏಪ್ರಿಲ್ 22 ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು.
ವೀರ ವನಿತೆಯರು ಹೋರಾಡಬೇಕಿತ್ತು
ಸಭೆಯಲ್ಲಿ ಮಾತನಾಡಿದ ಜಂಗ್ರಾ, "ಅಲ್ಲಿ ಇದ್ದ ನಮ್ಮ ಸಹೋದರಿಯರು, ತಮ್ಮ ಗಂಡಂದಿರು ಹಾಗೂ ಸಿಂದೂರವನ್ನು ಕಳೆದುಕೊಂಡರು. ಅದಕ್ಕೆಅವರೆಲ್ಲರೂ ವೀರ ವನಿತೆಯ ಭಾವ, ಉತ್ಸಾಹ, ಕೆಚ್ಚು ಹೊಂದಿರದಿರುವುದೇ ಕಾರಣ, ಅವರು ಕೈ ಮುಗಿದು ಶರಣಾದರು. ಹೀಗಾಗಿ ಅವರ ಗಂಡಂದಿರನ್ನು ಉಗ್ರರು ಕೊಂದರು ಎಂದು ಹೇಳಿಕೆ ನೀಡಿದ್ದಾರೆ.
"ಕೈ ಮುಗಿದರೆ ಯಾರೂ ಬಿಡುವುದಿಲ್ಲ. ಹೀಗಾಗಿ ನಮ್ಮ ಜನರು ಕೈ ಮುಗಿದು ಮೃತಪಟ್ಟರು" ಎಂದು ಅವರು ಹೇಳಿದರು. ಗಂಡಂದಿರನ್ನು ಕಳೆದುಕೊಂಡ ಮಹಿಳೆಯರು ಅಹಲ್ಯಾಬಾಯಿ ಹೋಳ್ಕರ್‌ರ ಇತಿಹಾಸ ಓದಿದ್ದರೆ, ಯಾರೂ ತಮ್ಮ ಗಂಡಂದಿರನ್ನು ತಮ್ಮ ಕಣ್ಣ ಮುಂದೆಯೇ ಸಾಯಲು ಬಿಡುತ್ತಿರಲಿಲ್ಲ ಎಂದು ಜಂಗ್ರಾ ಅಭಿಪ್ರಾಯಪಟ್ಟಿದ್ದಾರೆ. "ಪ್ರವಾಸಿಗರು ಅಗ್ನಿವೀರ್ ತರಬೇತಿ ಪಡೆದಿದ್ದರೆ, ಮೂರು ಭಯೋತ್ಪಾದಕರಿಗೆ 26 ಜನರನ್ನು ಕೊಲ್ಲಲು ಸಾಧ್ಯವಾಗುತ್ತಿರಲಿಲ್ಲ" ಎಂದು ಅವರು ತಿಳಿಸಿದರು.
ಅಗ್ನಿವೀರ್ ತರಬೇತಿ ಬೇಕು
ಅಗ್ನಿವೀರ್ ಯೋಜನೆಯನ್ನು ಉಲ್ಲೇಖಿಸಿದ ಜಂಗ್ರಾ, ಪ್ರತಿಯೊಬ್ಬ ಪ್ರವಾಸಿಗನೂ ಅಗ್ನಿವೀರ್ ತರಬೇತಿ ಪಡೆದಿದ್ದರೆ, ಭಯೋತ್ಪಾದಕರನ್ನು ಸುತ್ತುವರಿದು ಹೆಡೆಮುರಿ ಕಟ್ಟುತ್ತಿದ್ದರು. ಆಗ ಸಾವುನೋವಿನ ಸಂಖ್ಯೆಯನ್ನು ಕಡಿಮೆಯಾಗುತ್ತಿತ್ತು. ಪೂರ್ಣವಾಗಿ ಹೋರಾಡಬೇಕಿತ್ತು. ಹೋರಾಡಿದ್ದರೆ, ಕಡಿಮೆ ಹತ್ಯೆ ಆಗುತ್ತಿತ್ತು. ಕೈ ಮುಗಿದರೆ ಯಾರು ಬಿಡುತ್ತಾರೆ? ಕೊಲ್ಲಲು ಬಂದಿದ್ದವರು ಭಯೋತ್ಪಾದಕರು. ಅವರ ಹೃದಯದಲ್ಲಿ ಕರುಣೆ ಇರಲಿಲ್ಲ" ಎಂದು ನಂತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಂಗ್ರಾ ಅವರ ಈ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಮತ್ತು ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ.