ಬಿಜೆಪಿ ಸೇರದಿದ್ದರೆ ಬಂಧನದ ಬೆದರಿಕೆ: ಅತಿಶಿ
x

ಬಿಜೆಪಿ ಸೇರದಿದ್ದರೆ ಬಂಧನದ ಬೆದರಿಕೆ: ಅತಿಶಿ

ಸೌರಭ್ ಭಾರದ್ವಾಜ್, ದುರ್ಗೇಶ್ ಪಾಠಕ್ ಮತ್ತು ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ ಕೂಡ ಬಂಧಿತರಾಗುವ ಸಾಧ್ಯತೆ


ನಿಕಟ ವ್ಯಕ್ತಿಯೊಬ್ಬರ ಮೂಲಕ ತಮ್ಮನ್ನು ಸಂಪರ್ಕಿಸಿದ ಬಿಜೆಪಿ, ಪಕ್ಷವನ್ನು ಸೇರಿ ಇಲ್ಲವೇ ತಿಂಗಳೊಳಗೆ ಇಡಿಯಿಂದ ಬಂಧಿಸಲ್ಪಟ್ಟು, ಸೆರೆಮನೆಗೆ ಹೋಗಲು ಸಿದ್ದವಾಗಿ ಎಂದು ಬೆದರಿಸಿದೆ ಎಂದು ಆಪ್‌ ಸಚಿವೆ ಅತಿಶಿ , ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಬಹಿರಂಗಪಡಿಸಿದರು.

ತಮ್ಮ ಜೊತೆಗೆ ಇತರ ಮೂವರು ಎಎಪಿ ನಾಯಕರಾದ ಸಚಿವ ಸೌರಭ್ ಭಾರದ್ವಾಜ್, ಶಾಸಕ ದುರ್ಗೇಶ್ ಪಾಠಕ್ ಮತ್ತು ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ ಅವರನ್ನು ಕೂಡ ಬಂಧಿಸಲಾಗುವುದು ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಇಡಿ ತನ್ನ ನಿವಾಸ ಮತ್ತು ತನ್ನ ಸಂಬಂಧಿಕರ ಮೇಲೆ ದಾಳಿ ನಡೆಸಲಿದೆ ಎಂದು ಅತಿಶಿ ಹೇಳಿದ್ದಾರೆ.

ಸಮಾವೇಶದಿಂದ ಬಿಜೆಪಿ ದಿಕ್ಕೆಟ್ಟಿದೆ: ಭಾನುವಾರ ನಡೆದ ಇಂಡಿಯಾ ಒಕ್ಕೂಟದ ರಾಮಲೀಲಾ ಮೈದಾನದ ಸಮಾವೇಶದ ಯಶಸ್ಸಿನಿಂದ ಬಿಜೆಪಿ ದಿಕ್ಕುಗೆಟ್ಟಿದೆ. ಅರವಿಂದ್ ಕೇಜ್ರಿವಾಲ್ ಅವರ ಬಂಧನದಿಂದ ಎಎಪಿ ವಿಭಜನೆ ಆಗುವುದಿಲ್ಲ ಎಂದು ಅವರಿಗೆ ಗೊತ್ತಾಗಿದೆ ಎಂದು ಹೇಳಿದರು.

ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿದ್ದು, ನ್ಯಾಯಾಲಯ ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ನ್ಯಾಯಾಲಯದಲ್ಲಿಇಡಿ ಹೇಳಿಕೆ: ಪ್ರಕರಣದ ಆರೋಪಿ, ಮಾಜಿ ಎಎಪಿ ಸಂವಹನ ಉಸ್ತುವಾರಿ ವಿಜಯ್ ನಾಯರ್ ಅವರು ಅತಿಶಿ ಮತ್ತು ಭಾರದ್ವಾಜ್ ಅವರಿಗೆ ವರದಿ ಮಾಡುತ್ತಿದ್ದರು ಮತ್ತು ನಾಯರ್ ಅವರೊಂದಿಗಿನ ನನ್ನ ಸಂವಹನ ಸೀಮಿತ ಎಂದು ಕೇಜ್ರಿವಾಲ್‌ ಹೇಳಿದ್ದಾರೆ ಎಂದು ಇಡಿ ಹೇಳಿದೆ.

ಬಿಜೆಪಿ ತನ್ನ ಶಾಸಕರನ್ನು ಬೇಟೆಯಾಡಿ, ಪಕ್ಷವನ್ನು ಒಡೆದು, ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಬಯಸುತ್ತಿದೆ ಎಂದು ಎಎಪಿ ಆರೋಪಿಸಿದೆ. ಎಎಪಿಯ ಕಿರಾರಿ ಶಾಸಕ ರಿತುರಾಜ್ ಝಾ ಅವರು ತಮಗೆ ಕೇಸರಿ ಪಕ್ಷಕ್ಕೆ ಸೇರಲು 25 ಕೋಟಿ ರೂ. ಆಮಿಷ ಒಡ್ಡಿದೆ ಎಂದು ಹೇಳಿದ್ದರು.

Read More
Next Story