
ಎಂ ಕೆ ಸ್ಟಾಲಿನ್. ಸಂಗ್ರಹ ಚಿತ್ರ.
ತಮಿಳುನಾಡು vs ಕೇಂದ್ರ ಸರ್ಕಾರ: ಸ್ವಾಯತ್ತತೆಗಾಗಿ ಸಮಿತಿ ರಚಿಸಿದ ಸ್ಟಾಲಿನ್; ಮತ್ತೊಂದು ಸಂಘರ್ಷದ ಸೂಚನೆ?
ಶಿಕ್ಷಣ ಕ್ಷೇತ್ರವನ್ನು ರಾಜ್ಯದ ಪಟ್ಟಿಯಲ್ಲಿಡಬೇಕು ಎಂಬ ಡಿಎಂಕೆಯ ಬೇಡಿಕೆ ಸಂವಿಧಾನಾತ್ಮಕ ಚರ್ಚೆಗೆ ಕಾರಣವಾಗಬಹುದು. ಸ್ಟಾಲಿನ್ ಈಗಾಗಲೇ ಈ ವಿಷಯದಲ್ಲಿ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುವುದಾಗಿ ಘೋಷಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು, ಕೇಂದ್ರ ಸರ್ಕಾರದೊಂದಿಗಿನ ಭಾಷೆ, ಶಿಕ್ಷಣ ನೀತಿ, ತೆರಿಗೆ ಹಂಚಿಕೆ ಮತ್ತು ರಾಜ್ಯದ ಹಕ್ಕುಗಳ ಸಂಬಂಧಿತ ಸಂಘರ್ಷ ಮುಂದುವರಿಸಿರುವ ಜತೆಗೆ. ರಾಜ್ಯದ ಸ್ವಾಯತ್ತತೆ ಬಲಪಡಿಸುವಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿರುವುದಾಗಿ ಸ್ಟಾಲಿನ್ ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಘೋಷಿಸಿದ್ದಾರೆ. ಈ ಸಮಿತಿಯ ವರದಿ ಪ್ರಕಾರ ಸ್ವಾಯತ್ತತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಈ ಕ್ರಮವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ತಮಿಳುನಾಡು ವಿಧಾನಸಭೆಯಲ್ಲಿ ನಿಯಮ 110ರ ಅಡಿಯಲ್ಲಿ ಈ ಘೋಷಣೆ ಮಾಡಿದ ಸ್ಟಾಲಿನ್, "ರಾಜ್ಯಗಳ ನ್ಯಾಯಯುತ ಹಕ್ಕುಗಳನ್ನು ರಕ್ಷಿಸಲು ಮತ್ತು ಕೇಂದ್ರ-ರಾಜ್ಯ ಸರ್ಕಾರಗಳ ನಡುವಿನ ಸಂಬಂಧವನ್ನು ಬಲಪಡಿಸಲು ಈ ಸಮಿತಿ ರಚಿಸಲಾಗಿದೆ. ಈ ಸಮಿತಿಯು ವಿವಿಧ ಕಾನೂನುಗಳನ್ನು ಅಧ್ಯಯನ ಮಾಡಿ, ರಾಜ್ಯದ ಸ್ವಾಯತ್ತತೆಯನ್ನು ಖಾತ್ರಿಪಡಿಸುವ ಶಿಫಾರಸುಗಳನ್ನು ನೀಡಲಿದೆ," ಎಂದು ಹೇಳಿದ್ದಾರೆ.
ನಿಯಮ 110, ಪ್ರತಿಪಕ್ಷಗಳ ಚರ್ಚೆ ಅಥವಾ ಆಕ್ಷೇಪಣೆಗೆ ಅವಕಾಶ ನೀಡದೆ ಪ್ರಕಟಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಡುತ್ತದೆ. ಅದರಿಂದ ಸರ್ಕಾರವು ತನ್ನ ಯೋಜನೆಯನ್ನು ತಕ್ಷಣವೇ ಜಾರಿಗೆ ತರಲಿದೆ. ಸಮಿತಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಜೊತೆಗೆ ಮಾಜಿ ಐಎಎಸ್ ಅಧಿಕಾರಿಗಳಾದ ಅಶೋಕ್ ವರ್ಧನ್ ಶೆಟ್ಟಿ ಮತ್ತು ಎಂ.ಯು. ನಾಗರಾಜನ್ ಇದ್ದಾರೆ. ಈ ಸಮಿತಿಯು 2026ರ ಜನವರಿಯಲ್ಲಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಲಿದ್ದು, ಅಂತಿಮ ವರದಿಯನ್ನು 2028ರ ವೇಳೆಗೆ ನೀಡುವ ಗುರಿ ಹೊಂದಿದೆ.
ಕೇಂದ್ರ-ತಮಿಳುನಾಡು ಸಂಘರ್ಷ
ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವಿನ ಘರ್ಷಣೆಯು ಹಲವು ವಿಷಯಗಳಿಗೆ ಸಂಬಂಧಿಸಿದೆ. ಶಿಕ್ಷಣ ನೀತಿ (NEET ಮತ್ತು NEP): ತಮಿಳುನಾಡು ತ್ರಿಭಾಷಾ ಸೂತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ನೀಟ್ನಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. ಅಲ್ಲದೆ, ಎನ್ಇಪಿ ಮೂಲಕ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಕೇಂದ್ರ ಸರ್ಕಾರವು, ತಮಿಳುನಾಡಿಗೆ ಬರಬೇಕಾಗಿದ್ದ ನಿಧಿಗಳನ್ನು ತಡೆಹಿಡಿದಿದೆ ಎಂದು ಡಿಎಂಕೆ ಆರೋಪಿಸಿದೆ. ಸ್ಟಾಲಿನ್ ಪ್ರಕಾರ, ಎನ್ಇಪಿಗೆ ಒಪ್ಪದಿದ್ದಕ್ಕಾಗಿ 2,500 ಕೋಟಿ ರೂಪಾಯಿ ರಾಜ್ಯದ ಶಿಕ್ಷಣ ನಿಧಿಯನ್ನು ಕೇಂದ್ರವು ನೀಡುತ್ತಿಲ್ಲ.
ರಾಜ್ಯಪಾಲ ಆರ್.ಎನ್. ರವಿ ಅವರು ತಮಿಳುನಾಡು ಸರ್ಕಾರದ 10ಕ್ಕೂ ಹೆಚ್ಚು ಮಸೂದೆಗಳನ್ನು ಅನಗತ್ಯವಾಗಿ ವಿಳಂಬಗೊಳಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿತ್ತು. ಇದನ್ನು ರಾಜ್ಯದ ಸ್ವಾಯತ್ತತೆಯ ಮೇಲಿನ ದಾಳಿ ಎಂದು ಡಿಎಂಕೆ ಪರಿಗಣಿಸಿದೆ.
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ (ಡಿಲಿಮಿಟೇಷನ್): 2026ರಲ್ಲಿ ನಡೆಯಲಿದ್ದು, ತಮಿಳುನಾಡಿನ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುವ ಭೀತಿಯಿದೆ. ಇದು ಉತ್ತರ ಭಾರತದ ಹಿಂದಿ-ಮಾತನಾಡುವ ರಾಜ್ಯಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಎಂದು ಡಿಎಂಕೆ ಹೇಳಿಕೊಂಡಿದೆ.
2026ರ ಚುನಾವಣೆ ತಂತ್ರವೇ?
ಸ್ಟಾಲಿನ್‌ರ ಈ ಕ್ರಮವನ್ನು 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಒಂದು ರಾಜಕೀಯ ತಂತ್ರವೆಂದೂ ವಿಶ್ಲೇಷಿಸಲಾಗುತ್ತಿದೆ. ಡಿಎಂಕೆ 200 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದ್ದು, "ತಮಿಳುನಾಡು vs ದೆಹಲಿ" ಎಂಬ ನಿರೂಪಣೆಯನ್ನು ಚುನಾವಣಾ ಅಖಾಡದಲ್ಲಿ ಬಳಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ರಾಜ್ಯಪಾಲರ ವಿರುದ್ಧದ ಘರ್ಷಣೆ, ನೀಟ್ಗೆ ವಿರೋಧ, ಮತ್ತು ಭಾಷಾ ವಿಷಯಗಳನ್ನು ಡಿಎಂಕೆ ತನ್ನ ಪ್ರಚಾರದ ಕೇಂದ್ರಬಿಂದುವಾಗಿಸಿದೆ ಎಂದು ಹೇಳಲಾಗಿದೆ.
ಸ್ಟಾಲಿನ್ ತಮಿಳುನಾಡಿನ ಜನರಲ್ಲಿ ರಾಜ್ಯ ಗೌರವ ಮತ್ತು ದ್ರಾವಿಡ ಅಸ್ಮಿತೆಯನ್ನು ಎತ್ತಿಹಿಡಿಯುವ ಮೂಲಕ ತಮ್ಮ ಜನಪ್ರಿಯತೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ರಾಜ್ಯದ ಸ್ವಾಯತ್ತತೆಗಾಗಿ ಸಮಿತಿ ರಚನೆಯು ಡಿಎಂಕೆಗೆ ರಾಜಕೀಯವಾಗಿ ಲಾಭದಾಯಕವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಸಾಂವಿಧಾನಿಕ ಬಿಕ್ಕಟ್ಟು
ಈ ಸಮಿತಿಯ ರಚನೆಯು ಕೇಂದ್ರದ ಬಿಜೆಪಿ ಸರ್ಕಾರದೊಂದಿಗಿನ ಘರ್ಷಣೆಯನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ. ಶಿಕ್ಷಣ ಕ್ಷೇತ್ರವನ್ನು ರಾಜ್ಯದ ಪಟ್ಟಿಯಲ್ಲಿಡಬೇಕು ಎಂಬ ಡಿಎಂಕೆಯ ಬೇಡಿಕೆ ಸಂವಿಧಾನಾತ್ಮಕ ಚರ್ಚೆಗೆ ಕಾರಣವಾಗಬಹುದು. ಸ್ಟಾಲಿನ್ ಈಗಾಗಲೇ ಈ ವಿಷಯದಲ್ಲಿ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುವುದಾಗಿ ಘೋಷಿಸಿದ್ದಾರೆ.
ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಮತ್ತು ಇತರ ನಾಯಕರು, ಸ್ಟಾಲಿನ್‌ರ ಈ ಕ್ರಮವನ್ನು "ಹಿಂದಿ ವಿರೋಧದ ರಾಜಕೀಯ ಗಿಮಿಕ್" ಎಂದು ಟೀಕಿಸಿದ್ದಾರೆ.