
ಕವಿ ತಿರುವಳ್ಳುವರ್ ಅವರಿಗೆ ಕೇಸರಿ ವಸ್ತ್ರ: ವಿವಾದ ಸೃಷ್ಟಿಸಿದ ರಾಜ್ಯಪಾಲ
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು 'ತಿರುವಳ್ಳುವರ್ ತಿರುನಾಳ್ ವಿಳ' ಆಚರಣೆಗೆ ರೂಪಿಸಿರುವ ಆಹ್ವಾನಪತ್ರಿಕೆ ವಿವಾದಕ್ಕೆ ಕಾರಣವಾಗಿದೆ. ಆಹ್ವಾನಪತ್ರಿಕೆಯಲ್ಲಿ ತಮಿಳು ಕವಿ, ಸಂತ ತಿರುವಳ್ಳುವರ್ ಅವರಿಗೆ ಕೇಸರಿ ವಸ್ತ್ರ ತೊಡಿಸಲಾಗಿದೆ.
ಎಂಡಿಎಂಕೆ ನಾಯಕ ವೈಕೋ ತೀವ್ರ ಅಸಮ್ಮತಿ ವ್ಯಕ್ತಪಡಿಸಿದ್ದು, ʻತಿರುವಳ್ಳುವರ್ ಜಾತಿ ಮತ್ತು ಧರ್ಮವನ್ನು ಮೀರಿದವರು. ಇದು ಖಂಡನೀಯ. ರಾಜ್ಯಪಾಲರು ರಾಜಭವನವನ್ನು ನಗೆಪಾಟಲು ಮಾಡಿದ್ದಾರೆ,ʼ ಎಂದು ಹೇಳಿದರು.
ಇತ್ತೀಚೆಗೆ ರಾಜ್ಯಪಾಲರು ತಿರುವಳ್ಳುವರ್ ಅವರ ಹಣೆ ಮೇಲೆ ಭಸ್ಮ, ಕೇಸರಿ ವಸ್ತ್ರ ಧರಿಸಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಇದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಂಚಿಕೊಂಡ ಶ್ವೇತ ವಸ್ತ್ರ ಧರಿಸಿರುವ ಕವಿಯ ಚಿತ್ರಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿತ್ತು.
ʻಸಕಲ ಜೀವ ಸಂತಾನವನ್ನು ಸಲಹುವ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು, ಪ್ರಯತ್ನದಿಂದ ಮಾತ್ರ ಯಶಸ್ಸು, ಸ್ವಾವಲಂಬನೆ- ಸದ್ಗುಣವೇ ಜೀವನ ಎಂಬ ಪರಿಕಲ್ಪನೆಯನ್ನು ರೂಪಿಸಿದವರು ವಳ್ಳುವರ್. ಅವರಿಗೆ ಕಳಂಕ ಅಂಟಿಸಲು ಯಾರಿಗೂ ಸಾಧ್ಯವಿಲ್ಲʼ ಎಂದು ಸ್ಟಾಲಿನ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ತಮಿಳುನಾಡಿನಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಬಿಜೆಪಿ, ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಜಗತ್ತಿನಾದ್ಯಂತ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ವಿಶ್ವದ ಅತ್ಯಂತ ಹಳೆಯ ಭಾಷೆಯಾದ ತಮಿಳು ನಮ್ಮ ಹೆಮ್ಮೆ. ತಮಿಳು ಭಾಷೆಯ ಜಾಗತಿಕ ಖ್ಯಾತಿಯನ್ನು ಹೆಚ್ಚಿಸಲು ಬಿಜೆಪಿ ಸಕಲ ಪ್ರಯತ್ನ ಮಾಡಲಿದೆ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.