ತಮಿಳುನಾಡು: 13 ಮಸೂದೆಗಳಿಗೆ ರಾಜ್ಯಪಾಲರ ಒಪ್ಪಿಗೆ
13 ಮಸೂದೆಗಳಲ್ಲಿ ಪುದುಕೊಟ್ಟೈ, ತಿರುವಣ್ಣಾಮಲೈ, ನಾಮಕ್ಕಲ್ ಮತ್ತು ಕಾರೈಕುಡಿಯ ಪುರಸಭೆಗಳನ್ನು ಕಾರ್ಪೊರೇಷನ್ ಆಗಿ ಮೇಲ್ದರ್ಜೆಗೇರಿಸಿರುವ ಮಸೂದೆಯೂ ಇದೆ.
ಕಳೆದ ತಿಂಗಳು ಬಜೆಟ್ ಅಧಿವೇಶನದಲ್ಲಿ ವಿಧಾನಸಭೆ ಅಂಗೀಕರಿಸಿದ 13 ಮಸೂದೆಗಳಿಗೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಒಪ್ಪಿಗೆ ನೀಡಿದ್ದಾರೆ.
ರಾಜ್ಯಪಾಲರು ಮಸೂದೆಗಳನ್ನು ಅಂಗೀಕರಿಸದೆ ತಿಂಗಳಾನುಗಟ್ಟಲೆ ಕಾಯಿಸುತ್ತಾರೆ ಎಂದು ಡಿಎಂಕೆ ಸರ್ಕಾರ ದೂರಿತ್ತು. ಆದರೆ, ಈಗ ಬದಲಾವಣೆ ಆಗಿದ್ದು, ಮಸೂದೆಗಳನ್ನು ಅಂಗೀಕರಿಸಿದ ಒಂದು ತಿಂಗಳೊಳಗೆ ಅನುಮೋದನೆ ನೀಡಿದ್ದಾರೆ. ಈ ಮಸೂದೆಗಳು ಕಳೆದ ಎರಡು ದಶಕಗಳಲ್ಲಿ ಅಂಗೀಕರಿಸಲ್ಪಟ್ಟ 111 ಹಳೆಯ ಕಾನೂನುಗಳು ಮತ್ತು 115 ವಿನಿಯೋಗ ಕಾಯಿದೆಗಳನ್ನು ರದ್ದುಗೊಳಿಸುತ್ತವೆ.
13 ಮಸೂದೆಗಳಲ್ಲಿ ಪುದುಕೊಟ್ಟೈ, ತಿರುವಣ್ಣಾಮಲೈ, ನಾಮಕ್ಕಲ್ ಮತ್ತು ಕಾರೈಕುಡಿಯ ಪುರಸಭೆಗಳನ್ನು ಕಾರ್ಪೊರೇಷನ್ ಆಗಿ ಮೇಲ್ದರ್ಜೆ ಗೇರಿಸಿದ ಮಸೂದೆಯೂ ಸೇರಿದೆ. ಈ ಪಟ್ಟಣಗಳ ಜನಸಂಖ್ಯೆ 3 ಲಕ್ಷಕ್ಕಿಂತ ಕಡಿಮೆಯಿದ್ದರೂ, ಐತಿಹಾಸಿಕ ಮಹತ್ವ ಮತ್ತು ಯಾತ್ರಾ ಕ್ಷೇತ್ರ ಆಗಿರುವುದರಿಂದ, ನಾಲ್ಕು ಹೊಸ ಕಾರ್ಪೊರೇಷನ್‌ಗಳನ್ನು ರಚಿಸಲಾಗಿದೆ.
ʻಜನಸಂಖ್ಯೆ ಹಾಗೂ ಸರ್ಕಾರ ನಿಗದಿಪಡಿಸಿದ ಆದಾಯದ ಮಾನದಂಡಗಳನ್ಳು ಲೆಕ್ಕಿಸದೆ, ಪ್ರದೇಶವೊಂದನ್ನು ಪಟ್ಟಣ ಪಂಚಾಯಿತಿ, ಪುರಸಭೆ ಅಥವಾ ನಗರಸಭೆ ಎಂದು ಘೋಷಿಸಲು ನಗರ ಸ್ಥಳೀಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ,ʼ ಎಂದು ಅಧಿಕಾರಿಯೊಬ್ಬರು ಹೇಳಿದರು.
ತಮಿಳುನಾಡು ಎಸ್‌ಸಿ/ಎಸ್‌ಟಿ ಆಯೋಗದ ಅಧ್ಯಕ್ಷರ ವಯೋಮಿತಿ ಹೆಚ್ಚಳ(70 ರ ಬದಲು 75 ವರ್ಷ), ತಮಿಳುನಾಡು ನಗರ ಜಲ ಮೂಲಸೌಲಭ್ಯ ಹಣಕಾಸು ಸೇವೆಗಳ ನಿಯಮಿತ ಮತ್ತು ತಮಿಳುನಾಡು ಮೂಲಸೌಲಭ್ಯ ನಿಧಿಯನ್ನು ಸಕ್ರಿಯಗೊಳಿಸುವ ಮತ್ತೊಂದು ಮಸೂದೆಯನ್ನು ಅಂಗೀಕರಿಸಲಾಗಿದೆ.