ತಮಿಳುನಾಡು ಬಿಎಸ್‌ಪಿ ನಾಯಕ ಆರ್ಮ್‌ಸ್ಟ್ರಾಂಗ್ ಹತ್ಯೆ: ರಾಜಕೀಯ ಕೃತ್ಯವಲ್ಲ ಎಂದ ಚೆನ್ನೈ ಪೊಲೀಸ್
ತಮಿಳುನಾಡು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಅವರ ಹತ್ಯೆಯು ರಾಜಕೀಯ ಸ್ವರೂಪದ್ದಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಚೆನ್ನೈ ಪೊಲೀಸರು ಶನಿವಾರ (ಜುಲೈ 6) ಹೇಳಿದ್ದಾರೆ.
ತಮಿಳುನಾಡು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಅವರ ಹತ್ಯೆಯು ರಾಜಕೀಯ ಸ್ವರೂಪದ್ದಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಚೆನ್ನೈ ಪೊಲೀಸರು ಶನಿವಾರ (ಜುಲೈ 6) ಹೇಳಿದ್ದಾರೆ.
ಆರ್ಮ್‌ಸ್ಟ್ರಾಂಗ್ ಅವರನ್ನು ಆರು ಮಂದಿಯ ಗ್ಯಾಂಗ್ ಶುಕ್ರವಾರ ಚೆನ್ನೈನಲ್ಲಿ ಅವರ ಮನೆಯ ಸಮೀಪವೇ ಹತ್ಯೆ ಮಾಡಿತ್ತು. ಚೆನ್ನೈ ಕಾರ್ಪೊರೇಷನ್‌ನ ಮಾಜಿ ಕೌನ್ಸಿಲರ್ ಆಗಿದ್ದ ಆರ್ಮ್‌ಸ್ಟ್ರಾಂಗ್ ಅವರ ಮೇಲೆ ಪೆರಂಬೂರ್‌ನಲ್ಲಿರುವ ಅವರ ಮನೆಯ ಸಮೀಪವೇ ದಾಳಿ ನಡೆಸಿ ಪರಾರಿಯಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆರ್ಮ್‌ಸ್ಟ್ರಾಂಗ್ ಮೃತಪಟ್ಟಿದ್ದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಹೆಚ್ಚುವರಿ ಆಯುಕ್ತ (ಉತ್ತರ) ಆಸ್ರಾ ಗಾರ್ಗ್, “ನಾವು ಇದುವರೆಗೆ ಎಂಟು ಶಂಕಿತರನ್ನು ಬಂಧಿಸಿದ್ದೇವೆ. ಇದು ಆರಂಭಿಕ ತನಿಖೆ, ಪ್ರಾಥಮಿಕ ತನಿಖೆಯಾಗಿದೆ. ಆದ್ದರಿಂದ ಸ್ವಲ್ಪ ಸಮಯದ ನಂತರ, ಹೆಚ್ಚಿನ ಸತ್ಯಗಳು ಮತ್ತು ಸಂದರ್ಭಗಳು ಬೆಳಕಿಗೆ ಬರುವುದರೊಂದಿಗೆ ಸ್ಪಷ್ಟ ಮತ್ತು ಸರಿಯಾದ ಚಿತ್ರಣ ಹೊರಹೊಮ್ಮುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿವಿಧ ಶೋಧನೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಅಧಿಕಾರಿಗಳು ವಿವಿಧ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ ಮತ್ತು ಹತ್ಯೆಯಲ್ಲಿ ಹೆಚ್ಚಿನ ಜನರು ಭಾಗಿಯಾಗಿರುವ ಸಾಧ್ಯತೆಯಿದೆ. ವಿಶೇಷ ತಂಡವು ತನಿಖೆ ನಡೆಸುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ದೃಷ್ಟಿಕೋನ ಇಲ್ಲ ಎಂದು ಆಸ್ರಾ ಗಾರ್ಗ್ ಪ್ರತಿಪಾದಿಸಿದ್ದಾರೆ.
ಯಾರು ಈ ಕೆ ಆರ್ಮ್‌ಸ್ಟ್ರಾಂಗ್?
ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪೂರ್ಣಗೊಳಿಸಿದ ಕೆ ಆರ್ಮ್‌ಸ್ಟ್ರಾಂಗ್ ಚೆನ್ನೈ ನ್ಯಾಯಾಲಯಗಳಲ್ಲಿ ವಕೀಲರಗಾಗಿದ್ದರು. 2006 ರಲ್ಲಿ ಅವರು ಕಾರ್ಪೊರೇಷನ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದರು ಮತ್ತು ನಂತರದ ವರ್ಷದಲ್ಲಿ ಬಿಎಸ್‌ಪಿಯ ತಮಿಳುನಾಡು ಘಟಕದ ಅಧ್ಯಕ್ಷರಾದರು. 2011 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅವರು ಕೊಳತ್ತೂರ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ ಅವರು ದಲಿತರು ಮತ್ತು ಹಿಂದುಳಿದವರ ಹಕ್ಕುಗಳಿಗಾಗಿ ಸತತವಾಗಿ ಹೋರಾಟ ನಡೆಸುತ್ತಿದ್ದರು. ಚೆನ್ನೈನಲ್ಲಿ ಬಿಎಸ್‌ಪಿ ರಾಜಕೀಯ ಅಸ್ತಿತ್ವವನ್ನು ಹೊಂದಿಲ್ಲದಿದ್ದರೂ, ಆಮ್‌ಸ್ಟ್ರಾಂಗ್ ಎಂಬ ವಕೀಲರು ದಲಿತರ ಧ್ವನಿಯಾಗಿದ್ದರು.