ಇಸಿ ಕಚೇರಿ ಎದುರು ಟಿಎಂಸಿ ಮುಖಂಡರ ಬಂಧನ‌
x

ಇಸಿ ಕಚೇರಿ ಎದುರು ಟಿಎಂಸಿ ಮುಖಂಡರ ಬಂಧನ‌

ಪೊಲೀಸ್ ಠಾಣೆಯಲ್ಲಿ ಧರಣಿ ಮುಂದುವರಿಕೆ


ನವದೆಹಲಿ, ಏಪ್ರಿ‌ಲ್‌ 8- ಸಿಬಿಐ, ಎನ್‌ಐಎ, ಇಡಿ ಮುಖ್ಯಸ್ಥರ ಬದಲಾವಣೆಗೆ ಒತ್ತಾಯಿಸಿ ಚುನಾವಣೆ ಆಯೋಗ (ಇಸಿ)ದ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಹಲವು ಮುಖಂಡರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಂಧನದ ಬಳಿಕ ತಾವು ಮಂದಿರ್‌ ಮಾರ್ಗ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಟಿಎಂಸಿ ನಾಯಕರು ಹೇಳಿದರು. ಟಿಎಂಸಿ ನಾಯಕರನ್ನು ಬಿಡುಗಡೆ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆದರೆ, ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲಿದ್ದು ಪ್ರತಿಭಟನೆ ಮುಂದುವರಿಸುವುದಾಗಿ ಟಿಎಂಸಿ ಮುಖಂಡರು ಹೇಳಿದ್ದಾರೆ.

ಟಿಎಂಸಿ ನಾಯಕರಾದ ಡೆರೆಕ್ ಓಬ್ರಿಯೆನ್, ಮೊಹಮ್ಮದ್ ನದಿಮುಲ್ ಹಕ್, ಡೋಲಾ ಸೇನ್, ಸಾಕೇತ್ ಗೋಖಲೆ, ಸಾಗರಿಕಾ ಘೋಷ್, ಶಾಸಕ ವಿವೇಕ್ ಗುಪ್ತಾ, ಮಾಜಿ ಸಂಸದರಾದ ಅರ್ಪಿತಾ ಘೋಷ್, ಶಂತನು ಸೇನ್ ಮತ್ತು ಅಬೀರ್ ರಂಜನ್ ಬಿಸ್ವಾಸ್, ಪಕ್ಷದ ಪಶ್ಚಿಮ ಬಂಗಾಳದ ವಿದ್ಯಾರ್ಥಿ ವಿಭಾಗದ ಉಪಾಧ್ಯಕ್ಷ ಸುದೀಪ್ ರಾಹಾ ಸಂಜೆ 4 ಗಂಟೆಗೆ ಇಸಿ ಕಚೇರಿಗೆ ಹೋದರು. ಕೇಂದ್ರದ ಬಿಜೆಪಿ ಸರ್ಕಾರದ ಆದೇಶದಂತೆ ವರ್ತಿಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಆದಾಯ ತೆರಿಗೆ (ಐಟಿ) ಇಲಾಖೆಗಳ ಮುಖ್ಯಸ್ಥರನ್ನು ಬದಲಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದರು. ಅವರು ಆದೇಶದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಲೋಕಸಭೆ ಚುನಾವಣೆಯಲ್ಲಿ ಸಮಾನರ ಸ್ಪರ್ಧೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವಿರೋಧ ಪಕ್ಷಗಳ ನಾಯಕರ ವಿರುದ್ಧ ಕೇಂದ್ರೀಯ ಸಂಸ್ಥೆಗಳ ದುರುಪಯೋಗವನ್ನು ನಿಲ್ಲಿಸುವಂತೆ ನಿಯೋಗವು ಆಯೋಗವನ್ನು ಒತ್ತಾಯಿಸಿತು. ʻಬಿಜೆಪಿಯ ಆದೇಶದ ಮೇರೆಗೆ ಕೇಂದ್ರೀಯ ಸಂಸ್ಥೆಗಳು ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿವೆʼ ಎಂದು ಟಿಎಂಸಿ ಆರೋಪಿಸಿದೆ.

ʻಚುನಾವಣೆಗಳ ಪಾವಿತ್ರ್ಯವನ್ನು ಕಾಪಾಡಲು ಮಧ್ಯಪ್ರವೇಶಿಸುವಂತೆ ನಾವು ಚುನಾವಣೆ ಆಯೋಗವನ್ನು ಕೇಳಿದ್ದೇವೆʼ ಎಂದು ಘೋಷ್ ಧರಣಿ ಸಂದರ್ಭದಲ್ಲಿ ಹೇಳಿದರು. ಟಿಎಂಸಿ ಸದಸ್ಯರು ʻಎನ್ಐಎ ಡಿಜಿ, ಇಡಿ, ಸಿಬಿಐ ನಿರ್ದೇಶಕರನ್ನು ಈಗಲೇ ಬದಲಿಸಿʼ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಪ್ರತಿಭಟನೆ ಮುಂದುವರಿದಂತೆ ಭದ್ರತಾ ಸಿಬ್ಬಂದಿ ಎಲ್ಲರನ್ನು ಬಲವಂತವಾಗಿ ಹೊರಹಾಕಿ ಬಂಧಿಸಿದರು. ಸೆಕ್ಷನ್ 144 ಜಾರಿಯಲ್ಲಿರು ವುದರಿಂದ ಬಂಧಿಸಲಾಗಿದೆ ಮತ್ತು ಪ್ರತಿಭಟನೆಗೆ ಅನುಮತಿ ತೆಗೆದುಕೊಂಡಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲ ನಾಯಕರನ್ನು ಬಸ್‌ನಲ್ಲಿ ಮಂದಿರ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ʻಟಿಎಂಸಿ ನಾಯಕರನ್ನು ಬಿಡುಗಡೆ ಮಾಡಲಾಗಿದೆ. ಮಹಿಳಾ ಪ್ರತಿಭಟನಾಕಾರರನ್ನು ಸೂರ್ಯಾಸ್ತಕ್ಕೆ ಮುನ್ನ ಮತ್ತು ಪುರುಷ ಪ್ರತಿಭಟನಾಕಾರರನ್ನು ರಾತ್ರಿ 9 ಗಂಟೆಗೆ ಬಿಡುಗಡೆ ಮಾಡಲಾಯಿತುʼ ಎಂದು ಅಧಿಕಾರಿ ಹೇಳಿದರು. ಏತನ್ಮಧ್ಯೆ, ಇಸಿ ವಕ್ತಾರರು, ಟಿಎಂಸಿ ಧರಣಿ ಬಗ್ಗೆ ಚುನಾವಣೆ ಆಯೋಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಕೋಲ್ಕತ್ತಾದಲ್ಲಿ ಪ್ರತಿಭಟನೆ: ಕೋಲ್ಕತ್ತಾದಲ್ಲಿ ಸಂಸದ ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಟಿಎಂಸಿ ನಾಯಕರ ನಿಯೋಗವು ಸಂಜೆ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರನ್ನು ಭೇಟಿ ಮಾಡಿ, ಪಕ್ಷದ ನಾಯಕರ ಬಂಧನದ ಬಗ್ಗೆ ದೂರು ಸಲ್ಲಿಸಿತು. ರಾಜ್ಯಪಾಲರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ʻಇದು ಪ್ರಜಾಪ್ರಭುತ್ವದ ಕೊಲೆʼ ಎಂದು ಹೇಳಿದರು. ಪಕ್ಷದ ನಾಯಕರನ್ನು ಅಮಾನುಷವಾಗಿ ನಡೆಸಿಕೊಂಡಿದ್ದಕ್ಕೆ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ʻಎಐಟಿಸಿ ನಿಯೋಗವು ಚುನಾವಣೆ ಆಯೋಗವನ್ನು ಭೇಟಿ ಮಾಡಲು ಹೋಗಿದೆ. ಇವರಲ್ಲಿ ಐವರು ಸಂಸದರಾಗಿದ್ದರು. ಆ ನಾಯಕರನ್ನು, ವಿಶೇಷವಾಗಿ ಮಹಿಳೆಯರನ್ನು, ಎಳೆದಾಡಿದ ರೀತಿಯು ಪ್ರಜಾಪ್ರಭುತ್ವದ ಹಗಲಿನ ಹತ್ಯೆಯಾಗಿದೆ. ಈ ಹತ್ಯೆಯ ಪ್ರಮುಖ ಪ್ರಚೋದಕ ಚುನಾವಣಾ ಆಯೋಗʼ ಎಂದು ಬ್ಯಾನರ್ಜಿ ದೂರಿದರು.

ʻನಾನೇಕೆ ಚುನಾವಣೆ ಆಯೋಗವನ್ನು ದೂರುತ್ತಿದ್ದೇನೆ ಎಂದು ಜನ ಆಶ್ಚರ್ಯ ಪಡಬಹುದು. ದೆಹಲಿ ಪೊಲೀಸರು ಅಥವಾ ಸಿಐಎಸ್ಎಫ್‌ ನ್ನು ನಿಯಂತ್ರಿಸುವವರನ್ನು ಏಕೆ ದೂಷಿಸುತ್ತಿಲ್ಲ ಎಂದು ಕೇಳಬಹುದು. ಚುನಾವಣೆ ಘೋಷಣೆಯಾದ ತಕ್ಷಣ ಎಲ್ಲ ನಿಯಂತ್ರಣ ಚುನಾವಣೆ ಆಯೋಗಕ್ಕೆ ಸೇರುತ್ತದೆ,ʼ ಎಂದು ಹೇಳಿದರು.

ಬಿಜೆಪಿ ನಾಯಕ ಜಿತೇಂದ್ರ ತಿವಾರಿ ಅವರು ಮಾರ್ಚ್ 26 ರಂದು ಎನ್‌ಐಎ ಪೊಲೀಸ್ ವರಿಷ್ಠಾಧಿಕಾರಿ ಡಿ.ಆರ್. ಸಿಂಗ್ ಅವರನ್ನು ʻಪ್ಯಾಕೆಟ್ʼ ನೊಂದಿಗೆ ಭೇಟಿಯಾದರು ಮತ್ತು ಒಂದು ಗಂಟೆಗಳ ಬಳಿಕ ಬರಿಗೈಯಲ್ಲಿ ತೆರಳಿದರು ಎಂದು ಇಸಿಗೆ ಬರೆದ ಪತ್ರದಲ್ಲಿ ಟಿಎಂಸಿ ಆರೋಪಿಸಿದೆ. ತಿವಾರಿ ಅವರು ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರ ಹೆಸರಿರುವ ಪಟ್ಟಿಯನ್ನು ಹಸ್ತಾಂತರಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ.

ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ 2022 ರಲ್ಲಿ ನಡೆದ ಸ್ಫೋಟದ ಶಂಕಿತರನ್ನು ಬಂಧಿಸಲು ಹೋಗಿದ್ದ ಎನ್‌ಐಎ ತಂಡದ ಮೇಲೆ ಜನ ಶನಿವಾರ ದಾಳಿ ನಡೆಸಿದ್ದರು. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಯಿತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನಿಖಾಧಿಕಾರಿಗಳು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

Read More
Next Story