Tirupati stampede: ತಿರುಪತಿಯಲ್ಲಿ ಕಾಲ್ತುಳಿತ; ಆರು ಮಂದಿ ಸಾವು, ನೂರಾರು ಮಂದಿಗೆ ಗಾಯ
Tirupati stampede: ವೈಕುಂಠ ದ್ವಾರ ದರ್ಶನವು ಜನವರಿ 10ರಿಂದ ಆರಂಭಗೊಂಡು ಅಲ್ಲಿಂದ ಹತ್ತು ದಿನಗಳವರೆಗೆ ಇರಲಿದೆ. ಈ ದರ್ಶನದ ಟಿಕೆಟ್ ಪಡೆಯಲು ದೇಶದ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದರು.
ವಿಶ್ವ ವಿಖ್ಯಾತ ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಬುಧವಾರ ರಾತ್ರಿ ‘ವೈಕುಂಠ ದ್ವಾರ ದರ್ಶನ’ದ ಟೋಕನ್ ಪಡೆದುಕೊಳ್ಳುವ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದ್ದು, ಆರು ಮಂದಿ ಭಕ್ತರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ನೂಕುನುಗ್ಗಲಿನಿಂದ 150ಕ್ಕೂ ಅಧಿಕ ಭಕ್ತರು ಗಾಯಗೊಂಡಿದ್ದಾರೆ.
ವೈಕುಂಠ ದ್ವಾರ ದರ್ಶನವು ಜನವರಿ 10ರಿಂದ ಆರಂಭಗೊಂಡು ಅಲ್ಲಿಂದ ಹತ್ತು ದಿನಗಳವರೆಗೆ ಇರಲಿದೆ. ಈ ದರ್ಶನದ ಟಿಕೆಟ್ ಪಡೆಯಲು ದೇಶದ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತರು ದೇವಸ್ಥಾನಕ್ಕೆ ಬಂದಿದ್ದರು.
ಮೃತರಲ್ಲಿ ಒಬ್ಬರನ್ನು ಮಲ್ಲಿಕಾ ಎಂದು ಗುರುತಿಸಲಾಗಿದ್ದು, ತಮಿಳುನಾಡು ಮೂಲದವರಿ. ಮೃತರ ಪೈಕಿ ಇತರರ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.
ಕಾಲ್ತುಳಿತದಲ್ಲಿ ಭಕ್ತರು ಸಾವನ್ನಪ್ಪಿದ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ನಾಯ್ಡು ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಉನ್ನತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಪೊಲೀಸರು ಒಂದೆರಡು ಮಹಿಳಾ ಭಕ್ತರಿಗೆ ಸಿಪಿಆರ್ ನೀಡುವ ವೀಡಿಯೊಗಳು ಮತ್ತು ಗಾಯಗೊಂಡ ವ್ಯಕ್ತಿಗಳನ್ನು ಆಂಬ್ಯುಲೆನ್ಸ್‌ಗಳಲ್ಲಿ ಸಾಗಿಸುವ ವೀಡಿಯೊಗಳು ವೈರಲ್ ಆಗಿವೆ.
ಟೋಕನ್ ಕೌಂಟರ್ ನಲ್ಲಿ ಅವ್ಯವಸ್ಥೆ
ಜನವರಿ 10 ರಿಂದ 19 ರವರೆಗೆ ನಡೆಯಲಿರುವ ʼವೈಕುಂಠ ದ್ವಾರಂʼ ದರ್ಶನಕ್ಕಾಗಿ ಪ್ರವೇಶ ಟೋಕನ್‌ಗಳನ್ನು ಪಡೆಯಲು ಸಾವಿರಾರು ಭಕ್ತರು ಜಮಾಯಿಸಿದ್ದರು. ಏಕಾಏಕಿ ಸಾವಿರಾರು ಭಕ್ತರು ಟಿಕೆಟ್ ಪಡೆಯಲು ಮುನ್ನುಗ್ಗಿದ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಕೌಂಟರ್‌ಗಳನ್ನು ಬೆಳಿಗ್ಗೆ 5 ಗಂಟೆಗೆ ತೆರೆಯಲು ನಿರ್ಧರಿಸಲಾಗಿದ್ದರೂ, ಭಕ್ತರು ಹಿಂದಿನ ದಿನ ಸಂಜೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲಲು ಪ್ರಾರಂಭಿಸಿದರು, ಇದು ಭಾರಿ ಜನಸಂದಣಿಗೆ ಕಾರಣವಾಯಿತು.
ಶ್ರೀನಿವಾಸಂ, ಬೈರಾಗಿಪಟ್ಟ ರಾಮಾನಾಯ್ಡು ಶಾಲೆ ಮತ್ತು ಸತ್ಯನಾರಾಯಣಪುರಂನಂತಹ ಸ್ಥಳಗಳಲ್ಲಿ ಕಾಲ್ತುಳಿತ ಸಂಭವಿಸಿದೆ
ನಿರ್ವಹಣೆಯೇ ಸವಾಲು
ಭಾರೀ ಸಂಖ್ಯೆಯ ಯಾತ್ರಾರ್ಥಿಗಳಿಗೆ ಟಿಕೆಟ್ ನೀಡಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮೂರು ದಿನಗಳಲ್ಲಿ (ಜನವರಿ 10-12) ಎಂಟು ಸ್ಥಳಗಳಲ್ಲಿ ಟೋಕನ್ ವಿತರಣೆ ಮಾಡುವುದಾಗಿ ಪ್ರಕಟಿಸಿತ್ತು. ಟಿಟಿಡಿ ಗಸ್ತು ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಸ್ಥಳದಲ್ಲಿದ್ದ ಹೊರತಾಗಿಯೂ, ಜನಸಂದಣಿ ಮಿತಿ ಮೀರಿದ ಕಾರಣ ನಿಯಂತ್ರಣ ಕಷ್ಟವಾಗಿತ್ತು ಎನ್ನಲಾಗಿದೆ.
ಜನವರಿ 10ರಂದು ವೈಕುಂಠ ಏಕಾದಶಿ ನಡೆಯಲಿದ್ದು ವೈಕುಂಠ ದ್ವಾರದ ಮೂಲಕ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಅವಕಾಶ ಕಲ್ಪಿಸಲಾಗಿದೆ. ಈ ಸಮಯದಲ್ಲಿ ಲಕ್ಷಾಂತರ ಮಂದಿ ವಿಶೇಷ ಟೋಕನ್ ಪಡೆದು ದೇವರ ದರ್ಶನ ಮಾಡುತ್ತಾರೆ.