Tirupati laddu controversy| ತುಪ್ಪ ಪೂರೈಕೆದಾರರ ವಿರುದ್ಧ ಟಿಟಿಡಿ ಕಾನೂನು ಕ್ರಮ
x

Tirupati laddu controversy| ತುಪ್ಪ ಪೂರೈಕೆದಾರರ ವಿರುದ್ಧ ಟಿಟಿಡಿ ಕಾನೂನು ಕ್ರಮ

ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ ಎಂದು ಟಿಟಿಡಿ ಆಡಳಿತ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.


ದೇವಸ್ಥಾನದ ಮಂಡಳಿ ಎ.ಆರ್. ಡೈರಿ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ ಮತ್ತು ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪವನ್ನು ಪೂರೈಸಿದ ಆರೋಪದ ಮೇಲೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಾರ್ಯನಿರ್ವ ಹಣಾಧಿಕಾರಿ ಜೆ. ಶ್ಯಾಮಲ ರಾವ್ ಹೇಳಿದ್ದಾರೆ.

ತಿರುಪತಿ ದೇವಸ್ಥಾನಕ್ಕೆ ಸರಬರಾಜಾಗುವ ತುಪ್ಪದಲ್ಲಿ ಮೀನಿನ ಎಣ್ಣೆ, ಹಂದಿ ಮತ್ತು ಗೋವಿನ ಕೊಬ್ಬು ಇದೆ ಎಂಬ ವರದಿ ಪ್ರಕಟವಾದ ಬಳಿಕ ಇದು ಟಿಟಿಡಿಯ ಮೊದಲ ಅಧಿಕೃತ ಪ್ರತಿಕ್ರಿಯೆಯಾಗಿದೆ.

ʻಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ,ʼ ಎಂದು ಕಾರ್ಯನಿರ್ವಾಹಕ ಅಧಿಕಾರಿ ಹೇಳಿದರು.

ಎ.ಆರ್. ಡೈರಿಯಿಂದ ವಿತರಣೆ ಸ್ಥಗಿತ: ʻಎ.ಆರ್. ಡೈರಿಯಿಂದ ತುಪ್ಪ ಖರೀದಿ ನಿಲ್ಲಿಸಿದ್ದೇವೆ. ದೇವಾಲಯದ ಪಾವಿತ್ರ್ಯ ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಎ.ಆರ್. ಡೈರಿ ಪೂರೈಸಿದ್ದ 10 ಟ್ಯಾಂಕರ್ ತುಪ್ಪದಲ್ಲಿ 6 ಟ್ಯಾಂಕರ್ ಬಳಸಲಾಗಿದೆ. 4 ಟ್ಯಾಂಕರ್‌ಗಳ ತುಪ್ಪದ ಮಾದರಿಗಳನ್ನು ಪರೀಕ್ಷೆಗೆ ಗುಜರಾತಿನ ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ,ʼ ಎಂದು ವಿವರಿಸಿದರು.

ಟಿಟಿಡಿಗೆ ತುಪ್ಪ ಪೂರೈಸಲು ಹಿಂದಿನ ಸರ್ಕಾರ ಆಯ್ಕೆ ಮಾಡಿದ ಐದು ಕಂಪನಿಗಳಲ್ಲಿ ಎ.ಆರ್. ಡೈರಿ ಕೂಡ ಒಂದು.

ʻಟಿಟಿಡಿ ಕಳುಹಿಸಿದ ತುಪ್ಪದ ಮಾದರಿಗಳಲ್ಲಿ ಸೋಯಾ ಅವರೆ, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆ, ಗೋವಿನ ಕೊಬ್ಬು ಇತ್ಯಾದಿ ಪತ್ತೆಯಾಗಿದೆʼ ಎಂದು ಹೇಳಿದರು. ಆಂಧ್ರಪ್ರದೇಶದ ಸಚಿವ ಆನಂ ರಾಮನಾರಾಯಣ ರೆಡ್ಡಿ ಅವರು ಬುಧವಾರ (ಸೆಪ್ಟೆಂಬರ್ 18) ಪ್ರಯೋಗಾಲಯದ ವರದಿಯನ್ನು ಸಾರ್ವಜನಿಕಗೊಳಿಸಿದ್ದರು.

ಗುಣಮಟ್ಟದ ಪರೀಕ್ಷೆಗಳಲ್ಲಿ ಉತ್ತೀರ್ಣ: ಎಆರ್ ಡೈರಿ- ತಮ್ಮ ಕಂಪನಿಯ ತುಪ್ಪವು ಟಿಟಿಡಿ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಡೆಸಿದ ಗುಣಮಟ್ಟದ ನಿಯಂತ್ರಣ ಮತ್ತು ಆಹಾರ ಸುರಕ್ಷತೆ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿದೆ ಎಂದು ದಿಂಡಿಗಲ್‌ನ ಎ.ಆರ್ .ಡೈರಿ ಫುಡ್‌ನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿಗಳು ಶುಕ್ರವಾರ (ಸೆಪ್ಟೆಂಬರ್ 20) ದ ಫೆಡರಲ್‌ಗೆ ತಿಳಿಸಿದರು.

ʻನಮ್ಮ ಬಳಿ ಪ್ರಮಾಣಪತ್ರಗಳಿವೆ. ನಾವು ಎನ್‌ಎಬಿಎಲ್‌ ಪ್ರಮಾಣಪತ್ರಗಳನ್ನು ತುಪ್ಪದ ಟ್ಯಾಂಕರ್‌ಗಳೊಂದಿಗೆ ಕಳುಹಿಸಿದ್ದೇವೆ. ನಾವು ಕಳಿಸಿದ ತುಪ್ಪವನ್ನು ಟಿಟಿಡಿಯಲ್ಲಿ ಪರೀಕ್ಷಿಸಲಾಗಿದೆ; ಯಾವುದೇ ಕಲಬೆರಕೆ ಕಂಡುಬಂದಿಲ್ಲ,ʼ ಎಂದು ಕಂಪನಿ ಹೇಳಿದೆ.

Read More
Next Story