Tirupati laddu row | ಕೇಂದ್ರೀಯ ಸಂಸ್ಥೆ ತನಿಖೆಗೆ ಸಿದ್ಧ: ಟಿಡಿಪಿ
x

Tirupati laddu row | ಕೇಂದ್ರೀಯ ಸಂಸ್ಥೆ ತನಿಖೆಗೆ ಸಿದ್ಧ: ಟಿಡಿಪಿ

ʻದೇವರನ್ನು ರಾಜಕೀಯದಿಂದ ದೂರವಿಡಬೇಕುʼ ಎಂದಿರುವ ಸುಪ್ರೀಂ ಕೋರ್ಟ್, ಹಿಂದಿನ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತವು ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆಂಧ್ರಪ್ರದೇಶ ಸಿಎಂ ನಾಯ್ಡು ಅವರ ಸಾರ್ವಜನಿಕ ಹೇಳಿಕೆಯನ್ನು ಪ್ರಶ್ನಿಸಿದೆ.


ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಆಂಧ್ರಪ್ರದೇಶ ಸರ್ಕಾರಕ್ಕೆ ಹಲವು ಕಠಿಣ ಪ್ರಶ್ನೆಗಳನ್ನು ಕೇಳಿದೆ. ಈ ಸಂಬಂಧದ ಹೇಳಿಕೆಗೆ ಬದ್ಧವಾಗಿದ್ದೇವೆ ಮತ್ತು ಕೇಂದ್ರೀಯ ತನಿಖೆಗೆ ಸಿದ್ಧವಾಗಿದ್ದೇವೆ ಎಂದು ಆಡಳಿತಾರೂಢ ಟಿಡಿಪಿ ಹೇಳಿದೆ.

ಪ್ರತಿಪಕ್ಷ ವೈಎಸ್‌ಆರ್‌ಸಿಪಿ ಸುಪ್ರೀಂ ಹೇಳಿಕೆಯನ್ನು ಬಳಸಿಕೊಂಡು, ಟಿಡಿಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಲಡ್ಡು ಪ್ರಸಾದ ಕುರಿತ ಟಿಡಿಪಿಯ ʻಹೇಯʼ ಪ್ರಚಾರವು ಇಡೀ ಜಗತ್ತಿಗೆ ನೋವುಂಟು ಮಾಡಿದೆ ಎಂದು ಹೇಳಿದೆ.

ಕೇಂದ್ರೀಯ ತನಿಖೆಗೆ ಸ್ವಾಗತ: ಟಿಡಿಪಿ- ಲಡ್ಡು ವಿಚಾರದಲ್ಲಿ ಕೇಂದ್ರ ಏಜೆನ್ಸಿಯ ತನಿಖೆ ಕುರಿತ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಟಿಡಿಪಿ ವಕ್ತಾರ ಪಟ್ಟಾಭಿರಾಮ ಕೊಮ್ಮರೆಡ್ಡಿ, ʻನಮಗೆ ಯಾವುದೇ ತೊಂದರೆ ಇಲ್ಲ. ನಾವು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಅದು ತನ್ನ ಕೆಲಸ ಮಾಡುತ್ತಿದೆ. ಕೇಂದ್ರ ಸಂಸ್ಥೆ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದರೆ, ನಾವು ಅದನ್ನು ಸ್ವಾಗತಿಸುತ್ತೇವೆ,ʼ ಎಂದು ಹೇಳಿದ್ದಾರೆ.

ʻದೇವರನ್ನು ರಾಜಕೀಯದಿಂದ ದೂರವಿಡಬೇಕುʼ ಎಂದಿರುವ ಸುಪ್ರೀಂ ಕೋರ್ಟ್, ಹಿಂದಿನ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತವು ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆಂಧ್ರಪ್ರದೇಶ ಸಿಎಂ ನಾಯ್ಡು ಅವರ ಸಾರ್ವಜನಿಕ ಹೇಳಿಕೆಯನ್ನು ಪ್ರಶ್ನಿಸಿದೆ.

ಕಲಬೆರಕೆ ತುಪ್ಪ ಬಳಕೆಯಾಗಿದೆ ಎಂದು ಸ್ಪಷ್ಟವಾಗಿಲ್ಲ: ಪ್ರಯೋಗಾಲಯದ ವರದಿಯಲ್ಲಿ ʻಎಲ್ಲವೂ ಸ್ಪಷ್ಟವಾಗಿಲ್ಲʼ ಮತ್ತು ʻತಿರಸ್ಕೃತ ತುಪ್ಪʼ ಕೂಡ ಪರೀಕ್ಷೆಗೆ ಒಳಪಟ್ಟಿದೆಯೆಂದು ಸೂಚಿಸಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ʻಇದೇ ತುಪ್ಪವನ್ನು ಬಳಸಲಾಗಿದೆ ಎಂಬುದು ವರದಿಯಿಂದ ಸ್ಪಷ್ಟವಾಗಿಲ್ಲ. ಖಚಿತವಾಗದೆ ಇರುವಾಗ, ನೀವು ಅದನ್ನು ಸಾರ್ವಜನಿಕ ಗೊಳಿಸಿದ್ದೇಕೆ?ʼ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಕೇಳಿದೆ.

ರಾಜ್ಯ ನೇಮಿಸಿರುವ ಎಸ್‌ಐಟಿ ತನಿಖೆಯನ್ನು ಮುಂದುವರಿಸಬೇಕೇ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪೀಠ ಕೇಳಿದೆ.

ವೈಎಸ್ಆರ್‌ಸಿಪಿ ‌ವಾಗ್ದಾಳಿ: ʻಲಡ್ಡು ಪ್ರಸಾದದ ವಿಷಯದಲ್ಲಿ ಮಾಡಿದ ಹೇಯ ಪ್ರಚಾರದಿಂದ ಇಡೀ ಜಗತ್ತು ತೀವ್ರವಾಗಿ ನೊಂದಿದೆ. ಭಯದ ವಾತಾವರಣ ಸೃಷ್ಟಿಸಲಾಯಿತು ಮತ್ತು ಹಿಂದೂ ಸಮುದಾಯದ ಮೇಲೆ ಹಿಂಸಾಚಾರ ನಡೆಯಿತು,ʼ ಎಂದು ಪಕ್ಷದ ನಾಯಕ ಬಿ. ಕರುಣಾಕರ ರೆಡ್ಡಿ ಹೇಳಿದರು.

ರೆಡ್ಡಿ ಅವರು ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ದ ಎರಡು ಬಾರಿಯ ಅಧ್ಯಕ್ಷ. ರೆಡ್ಡಿಯವರ ಪ್ರಕಾರ, ಟಿಡಿಪಿ ನೇತೃತ್ವದ ರಾಜ್ಯ ಸರ್ಕಾರವು ದೇವರನ್ನು ರಾಜಕೀಯಕ್ಕೆ ಎಳೆದು ಭಾರಿ ಅನ್ಯಾಯ ಮಾಡಿತು, ಹಾಗೆ ಮಾಡಬೇಡಿ ಎಂದು ಭಾವೋದ್ರಿಕ್ತ ಮನವಿಗಳ ಹೊರತಾಗಿಯೂ ಈ ಕೃತ್ಯಕ್ಕೆ ಮುಂದಾಯಿತು.

ಸಿಎಂ ಭಕ್ತರ ಕ್ಷಮೆ ಕೇಳಲಿ: ಪ್ರಸಾದ ಕುರಿತ ಹೇಳಿಕೆಗೆ ಸಿಎಂ ಭಕ್ತರ ಕ್ಷಮೆ ಯಾಚಿಸಬೇಕು ಎಂದು ವೈಎಸ್‌ಆರ್‌ಸಿಪಿ ಮುಖಂಡ ವಿ. ಶ್ರೀನಿವಾಸ ರಾವ್ ಆಗ್ರಹಿಸಿದ್ದಾರೆ.

ʻತಿರುಮಲ ಲಡ್ಡು ಪ್ರಸಾದದ ಕಲಬೆರಕೆ ಬಗ್ಗೆ ಚಂದ್ರಬಾಬು ಅವರ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಟೀಕಿಸಿದೆ. ಸರ್ಕಾರದ ವಕೀಲರು ಕೂಡ ಬಳಸಿದ ತುಪ್ಪ ಕಲಬೆರಕೆಯಾಗಿಲ್ಲ ಎಂದು ನ್ಯಾಯಾಲಯದಲ್ಲಿ ಸ್ಪಷ್ಟಪಡಿಸಿದ್ದಾರೆ,ʼ ಎಂದು ರಾವ್‌ ತಿಳಿಸಿದ್ದಾರೆ.

ವೈಎಸ್‌ಆರ್‌ಸಿಪಿ ನಾಯಕಿ ರೋಜಾ ಸೆಲ್ವಮಣಿ, ತುಪ್ಪ ಕಲಬೆರಕೆ ಕುರಿತು ಸಾಕ್ಷ್ಯಾಧಾರ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಪ್ರಶ್ನೆಗಳನ್ನು ಕೇಳಿದೆ ಎಂದಿದ್ದಾರೆ .

ಟಿಡಿಪಿ ವಕ್ತಾರರಾದ ಜ್ಯೋಷ್ನಾ ತಿರುನಗರಿ, ವಿಷಯ ನ್ಯಾಯಾಂಗ ವಿಚಾರಣೆಯಲ್ಲಿದ್ದು, ನ್ಯಾಯಾಲಯ ತನ್ನ ಕೆಲಸ ಮಾಡುತ್ತದೆ. ಮತ್ತು ಬಳಸಿದ ತುಪ್ಪವು ಕಲಬೆರಕೆಯಾಗಿರಲಿಲ್ಲ ಎಂಬುದು ಸತ್ಯ ಎಂದು ಹೇಳಿದರು.

ಎಸ್‌ಐಟಿಯಿಂದ ಮೂರು ತಂಡ ರಚನೆ: ಲಡ್ಡುಗಳ ತಯಾರಿಕೆಗೆ ಪ್ರಾಣಿಗಳ ಕೊಬ್ಬಿನ ಬಳಕೆ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಆಂಧ್ರಪ್ರದೇಶದ ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಹೇಳಿದೆ.

ತಿರುಪತಿ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಈಗಾಗಲೇ ಎಸ್‌ಐಟಿಗೆ ವರ್ಗಾಯಿಸಲಾಗಿದ್ದು, ತಮಿಳುನಾಡು ಮೂಲದ ಎ.ಆರ್. ಡೈರಿ ಕಲಬೆರಕೆ ತುಪ್ಪವನ್ನು ಪೂರೈಸಿದ ಆರೋಪದ ಮೇಲೆ ತಂಡ ತನಿಖೆ ನಡೆಸಲಿದೆ ಎಂದು ಎಸ್‌ಐಟಿ ಮುಖ್ಯಸ್ಥ ಸರ್ವಶ್ರೇಷ್ಠ ತ್ರಿಪಾಠಿ ಹೇಳಿದ್ದಾರೆ.

ʻಪ್ರಕರಣದ ತನಿಖೆಗೆ ಎಸ್‌ಐಟಿ ಅಧಿಕಾರಿಗಳು ಮೂರು ತಂಡ ರಚಿಸಿದ್ದಾರೆ. ತುಪ್ಪ ಕಲಬೆರಕೆಗೆ ಕಾರಣರಾದ ಪ್ರತಿಯೊಬ್ಬರನ್ನೂ ತನಿಖೆ ಮಾಡುತ್ತೇವೆ; ವರದಿ ಸಲ್ಲಿಸಲು ಕಾಲಾವಧಿ ವಿಧಿಸಿಲ್ಲʼ ಎಂದು ತ್ರಿಪಾಠಿ ಹೇಳಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಸದಸ್ಯರು, ಅಧಿಕಾರಿಗಳು ಮತ್ತು ಕಾರ್ಮಿಕರು ಸೇರಿದಂತೆ ಎಲ್ಲರನ್ನೂ ಎಸ್‌ಐಟಿ ವಿಚಾರಣೆ ನಡೆಸಲಿದೆ ಎಂದು ಗುಂಟೂರು ವಲಯ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ತಿಳಿಸಿದ್ದಾರೆ.

ಎಸ್‌ಐಟಿ ಅಧಿಕಾರಿಗಳು ತಮಿಳುನಾಡಿನ ಎಆರ್ ಡೈರಿ ಫುಡ್ಸ್ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಅಡುಗೆ ಮನೆ, ಮಾರಾಟದ ಸ್ಥಳಗಳ ಪರಿಶೀಲನೆ ಮತ್ತು ಸಿಹಿತಿಂಡಿ ತಯಾರಿಸುವವರ ವಿಚಾರಣೆ ನಡೆಸಲಿದೆ.

ಸೋಮವಾರ ಎಸ್‌ಐಟಿ ಅಧಿಕಾರಿಗಳು ತುಪ್ಪ ಸಂಗ್ರಹ ಟ್ಯಾಂಕರ್‌ಗಳು, ಬೂಂದಿ ಪೋಟು (ಲಡ್ಡು ಪದಾರ್ಥ ತಯಾರಿಸುವ ಸ್ಥಳ)ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Read More
Next Story