Tirupati laddu Controversy| ‘ನಂಬಿಕೆಯೊಂದಿಗೆ ಆಟವಾಡುವವರನ್ನು ಭಕ್ತರು ಕ್ಷಮಿಸುವುದಿಲ್ಲ’: ಕಾಂಗ್ರೆಸ್
ಹೊಸದಿಲ್ಲಿ: ತಿರುಪತಿ ಲಡ್ಡುವಿನ ಅಪವಿತ್ರೀಕರಣದ ಆರೋಪ ನಿಜವಾಗಿದ್ದರೆ, ಪೂರ್ಣ ಪ್ರಮಾಣದ ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಬೇಕು. ಒಂದುವೇಳೆ ಆರೋಪ ಸುಳ್ಳು ಅಥವಾ ಪ್ರೇರೇಪಿತವಾಗಿದ್ದರೆ, ಲಕ್ಷಾಂತರ ತಿರುಪತಿ ಭಕ್ತರು ತಮ್ಮ ನಂಬಿಕೆಯೊಂದಿಗೆ ಆಡುವವರನ್ನು ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ.
ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ʻಪೂರ್ಣ ಪ್ರಮಾಣದ ತನಿಖೆಗೆ ಆದೇಶಿಸಿ, ತಪ್ಪಿತಸ್ಥರನ್ನು ಗುರುತಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಒಂದು ವೇಳೆ ಆರೋಪ ಸುಳ್ಳು ಇಲ್ಲವೇ ಪ್ರೇರೇಪಿತವಾಗಿದ್ದರೆ, ತಿರುಪತಿಯ ಲಕ್ಷಾಂತರ ಭಕ್ತರು ಇಂಥವರ ನ್ನು ಕ್ಷಮಿಸುವುದಿಲ್ಲ. ಅಲ್ಲಿಯವರೆಗೆ, ಬಿಜೆಪಿಯು ಚುನಾವಣೆ ಕಾಲದಲ್ಲಿ ಧ್ರುವೀಕರಣದ ಪಿತೂರಿ ಸಿದ್ಧಾಂತಗಳನ್ನು ಗಾಳಿಯಲ್ಲಿ ತೂರಲು ಇದು ನೆರವಾಗಲಿದೆ,ʼ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ನಾಯ್ಡು ಆರೋಪ: ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಹೇಳಿಕೆಯು ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿದೆ. ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ಈ ಘೋರ ಆರೋಪ ಮಾಡಿದ್ದಾರೆ ಎಂದು ವೈಎಸ್‌ಆರ್‌ಸಿಪಿ ದೂರಿದೆ. ಪ್ರತಿಯಾಗಿ, ಟಿಡಿಪಿ ಪ್ರಯೋಗಾಲಯದ ವರದಿಯನ್ನು ಬಿಡುಗಡೆಗೊಳಿಸಿದೆ.
ಬುಧವಾರ ನಡೆದ ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯ್ಡು, ಹಿಂದಿನ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು ಸಹ ಬಿಡಲಿಲ್ಲ. ಲಡ್ಡು ತಯಾರಿಸಲು ಕಳಪೆ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿದೆ,ʼ ಎಂದು ಹೇಳಿದ್ದರು.
ಟಿಡಿಪಿ ವಕ್ತಾರ ಆನಂ ವೆಂಕಟರಮಣ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʻತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಒದಗಿಸಿದ ತುಪ್ಪದ ಮಾದರಿಯು ಕಲಬೆರಕೆ ಆಗಿರುವುದನ್ನು ಗುಜರಾತ್ ಮೂಲದ ಪ್ರಯೋಗಾಲಯ ಖಚಿತಪಡಿಸಿದೆ,ʼ ಎಂದಿದ್ದರು.ಪ್ರಯೋಗಾಲಯ ತುಪ್ಪದ ಮಾದರಿಯನ್ನು ಜುಲೈ 9, 2024ರಂದು ಸ್ವೀಕರಿಸಿದ್ದು, ಜುಲೈ 16ರಂದು ವರದಿ ನೀಡಿದೆ.
ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಪ್ರತಿಕ್ರಿಯಿಸಿ, ಲಡ್ಡು ತಯಾರಿಸಲು ದನ/ಹಂದಿ ಕೊಬ್ಬು ಹಾಗೂ ಮೀನಿನ ಎಣ್ಣೆಯನ್ನು ಬಳಸಲಾಗಿದೆ ಎಂದು ಪ್ರಯೋಗಾಲಯದ ವರದಿ ದೃಢಪಡಿಸಿದೆ ಎಂದು ಹೇಳಿದರು.
ವೈಎಸ್‌ಆರ್‌ಸಿಪಿ ಹಿರಿಯ ನಾಯಕ ಹಾಗೂ ಟಿಟಿಡಿ ಮಾಜಿ ಅಧ್ಯಕ್ಷ ಬಿ. ಕರುಣಾಕರ್ ರೆಡ್ಡಿ,ʼ ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ತಿರುಪತಿ ಲಡ್ಡುಗಳ ಮೇಲೆ ಅಪವಿತ್ರ ಆರೋಪಗಳನ್ನು ಮಾಡುತ್ತಿದ್ದಾರೆ,ʼ ಎಂದು ಆರೋಪಿಸಿದ್ದಾರೆ.