Tirupati laddu Controversy|ತುಪ್ಪ ಕಲಬೆರಕೆ:ತನಿಖೆಗೆ ಎಸ್‌ಐಟಿ ನೇಮಕ
ತಿರುಮಲ ತಿರುಪತಿ ಲಡ್ಡುತಯಾರಿಸಲು ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗುವುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭಾನುವಾರ (ಸೆಪ್ಟೆಂಬರ್ 22) ಹೇಳಿದ್ದಾರೆ.
ವೈಎಸ್‌ಆರ್‌ಸಿಪಿ ಆಡಳಿತದ ಅವಧಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದಲ್ಲಿ ತುಪ್ಪ ಖರೀದಿಗೆ ಸಂಬಂಧಿಸಿದ ಹಲವು ಕಾರ್ಯವಿಧಾನಗಳನ್ನು ಬದಲಿಸಲಾಗಿತ್ತು. ಆಗ ಟಿಟಿಡಿ ಮಂಡಳಿಯ ನೇಮಕಗಳು ಜೂಜಾಟದಂತಾ ಗಿತ್ತು. ಮಂಡಳಿಯಲ್ಲಿ ಹಿಂದೂಯೇತರರಿಗೆ ಆದ್ಯತೆ ನೀಡಿ, ನಂಬಿಕೆಯಿಲ್ಲದವರನ್ನು ನೇಮಿಸಿದ ಉದಾಹರಣೆಗಳಿವೆ ಎಂದು ದೂರಿದರು.
ಉಂಡವಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಿರುವುದರಿಂದ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಐಜಿ ಅಥವಾ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗುವುದು. ಇದು ಅಧಿಕಾರ ದುರುಪಯೋಗದ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ. ಸರ್ಕಾರ ಲಡ್ಡು ಕಲಬೆರಕೆ ಮರುಕಳಿಸದಂತೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಇದರಲ್ಲಿ ಯಾವುದೇ ರಾಜಿ ಇಲ್ಲ,ʼ ಎಂದು ನಾಯ್ಡು ಹೇಳಿದರು.
ಜನರ ಭಾವನೆಗಳೊಂದಿಗೆ ಆಟವಾಡುವ ಹಕ್ಕು ಯಾರಿಗೂ ಇಲ್ಲ. ತಿರುಮಲದಲ್ಲಿ ಸೋಮವಾರ ಬೆಳಗ್ಗೆ 6 ರಿಂದ 10 ರವರೆಗೆ ಶ್ರೀವಾರಿ (ಶ್ರೀ ವೆಂಕಟೇಶ್ವರ) ದೇವಸ್ಥಾನದ ಬಂಗಾರು ಬಾವಿ (ಚಿನ್ನದ ಬಾವಿ) ಯಾಗಶಾಲೆಯಲ್ಲಿ ಸಂತಿ ಹೋಮ ಪಂಚಗವ್ಯ ಪ್ರೋಕ್ಷಣೆ ನಡೆಯಲಿದೆ ಎಂದು ಹೇಳಿದರು.
ಹಿಂದಿನ ಷರತ್ತುಗಳ ಪ್ರಕಾರ, ತುಪ್ಪ ಪೂರೈಕೆದಾರರು ಕನಿಷ್ಠ ಮೂರು ವರ್ಷ ಅನುಭವ ಹೊಂದಿರಬೇಕಿತ್ತು. ಆದರೆ, ಜಗನ್ ಮೋಹನ್ ರೆಡ್ಡಿ ಅಧಿಕಾರಕ್ಕೆ ಬಂದ ನಂತರ ಅದನ್ನು ಒಂದು ವರ್ಷಕ್ಕೆ ಇಳಿಸಲಾಯಿತು. ಪೂರೈಕೆದಾರರ ವಹಿವಾಟು 250 ಕೋಟಿ ರೂ.ಇರಬೇಕು ಎಂಬ ಶರತ್ತನ್ನು 150 ಕೋಟಿ ರೂ.ಗೆ ಇಳಿಸಲಾಯಿತು. ತುಪ್ಪವನ್ನು ಕೆಜಿಗೆ 319 ರೂ.ಗೆ ಪೂರೈಸಲು ಹೇಗೆ ಸಾಧ್ಯ? ಎ.ಆರ್. ಡೈರಿ ಫುಡ್ಸ್ ಪ್ರೈವೇಟ್ ಲಿ. ಜೂನ್ 12, 2024 ರಿಂದ ತುಪ್ಪವನ್ನು ಪೂರೈಸಲು ಪ್ರಾರಂಭಿಸಿತು,ʼ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಗನ್ ಬರೆದ ಪತ್ರವನ್ನು ಉಲ್ಲೇಖಿಸಿದ ಅವರು, ವೈಎಸ್‌ಆರ್‌ಸಿಪಿ ಮುಖ್ಯಸ್ಥರು ಪತ್ರಗಳ ಮೂಲಕ ಪ್ರತಿದಾಳಿಗೆ ಪ್ರಯತ್ನಿಸುತ್ತಿದ್ದಾರೆ. ಜಗನ್ ಅವರು 2019- 2024 ರ ಅವಧಿಯಲ್ಲಿನ ತಮ್ಮ ಸರ್ಕಾರದ ಕ್ರಮಗಳನ್ನು ಬೇಜವಾಬ್ದಾರಿಯಿಂದ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ವಿಶ್ವಪ್ರಸಿದ್ಧ ದೇವಾಲಯದಲ್ಲಿ ಕಳಂಕಕ್ಕೆ ಕಾರಣವಾಯಿತು,ʼ ಎಂದು ಹೇಳಿದರು.
ವೆಂಕಟೇಶ್ವರ ಸ್ವಾಮಿಯ ಪ್ರಸಾದಕ್ಕೆ ವಿಶೇಷ ಸ್ಥಾನವಿದೆ. ಏಕೆಂದರೆ, ಶುದ್ಧ ಪದಾರ್ಥಗಳ ಬಳಕೆ ಮತ್ತು ಕಳೆದ 300 ವರ್ಷಗಳಿಂದ ತಯಾರಿಸುವ ರಾಜಿಯಾಗದ ಗುಣಮಟ್ಟದಿಂದ ಪ್ರಸಿದ್ಧಿಯಾಗಿದೆ.