
ತಿರುಪತಿ ಲಡ್ಡು ವಿವಾದ: ಎಸ್‌ಐಟಿ ತನಿಖೆ ಅಂತ್ಯ- ಪ್ರಕರಣ ಮಾಸ್ಟರ್‌ಮೈಂಡ್ ಇವರೇ ನೋಡಿ!
ತಿರುಪತಿ ಲಡ್ಡು ಕಲಬೆರಕೆ ತುಪ್ಪದ ಪ್ರಕರಣದ ಎಸ್‌ಐಟಿ ತನಿಖೆ ಪೂರ್ಣಗೊಂಡಿದೆ. 16 ತಿಂಗಳ ತನಿಖೆ, 36 ಆರೋಪಿಗಳು ಮತ್ತು ಹವಾಲಾ ದಂಧೆಯ ಸಂಪೂರ್ಣ ವಿವರ ಇಲ್ಲಿದೆ.
ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ತಿರುಮಲ ತಿರುಪತಿ ದೇವಸ್ಥಾನದ (TTD) ಕಲಬೆರಕೆ ತುಪ್ಪದ ಪ್ರಕರಣದ ಎಸ್‌ಐಟಿ (SIT) ತನಿಖೆ ಅಂತ್ಯಗೊಂಡಿದ್ದು, ಅಂತಿಮ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಸುಮಾರು 16 ತಿಂಗಳುಗಳ ಕಾಲ 10 ರಾಜ್ಯಗಳಲ್ಲಿ ಸುದೀರ್ಘ ತನಿಖೆ ನಡೆಸಿದ ಎಸ್‌ಐಟಿ, ಅಂತಿಮವಾಗಿ ನ್ಯಾಯಾಲಯಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಈ ಪ್ರಕರಣದಲ್ಲಿ ಒಟ್ಟು 36 ಮಂದಿಯನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ.
ಪ್ರಮುಖ ಆರೋಪಿಗಳು ಮತ್ತು ಮಾಸ್ಟರ್ ಮೈಂಡ್‌ಗಳು
ಎಸ್‌ಐಟಿ ತನಿಖೆಯ ಪ್ರಕಾರ, ಈ ಇಡೀ ಹಗರಣದ ಹಿಂದೆ ಉತ್ತರಾಖಂಡದ ಬೋಲೆ ಬಾಬಾ ಆರ್ಗಾನಿಕ್ ಡೈರಿಯ ನಿರ್ದೇಶಕರಾದ ಪೋಮಿಲ್ ಮತ್ತು ವಿಪಿನ್ ಜೈನ್ ಪ್ರಮುಖ ಸಂಚುಕೋರ (A1 & A2). ಈತನಿಗೆ ಸಾಥ್ ನೀಡಿದ ಪ್ರಮುಖ ವ್ಯಕ್ತಿಗಳು ಇವರೇ ನೋಡಿ
• ಚಿನ್ನಪ್ಪನ್ನ (A24): ಟಿಟಿಡಿ ಮಾಜಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರ ಖಾಸಗಿ ಪಿಎ. ಇವರ ಬಂಧನದ ನಂತರವೇ ತನಿಖೆ ಚುರುಕುಗೊಂಡಿತ್ತು.
• ಸುಬ್ರಮಣ್ಯಂ (A27): ಟಿಟಿಡಿ ಪ್ರೊಕ್ಯೂರ್‌ಮೆಂಟ್ ಜಿಎಂ (ಖರೀದಿ ವಿಭಾಗದ ಪ್ರಧಾನ ವ್ಯವಸ್ಥಾಪಕ).
ಹವಾಲಾ ದಂಧೆ ಮತ್ತು ಲಂಚದ ಹಣ
ಮುಂಬೈನ ಹವಾಲಾ ಏಜೆಂಟ್ ಅಮಾನ್ ಗುಪ್ತಾ ಎಂಬಾತ ಚಿನ್ನಪ್ಪನ್ನ ಅವರಿಗೆ ಎರಡು ಬಾರಿ ತಲಾ 50 ಲಕ್ಷ ರೂಪಾಯಿಗಳನ್ನು (ಒಟ್ಟು 1 ಕೋಟಿ ರೂ.) ಹವಾಲಾ ಮೂಲಕ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಹಣವು ಕಲಬೆರಕೆ ತುಪ್ಪ ಪೂರೈಕೆಗೆ ಪ್ರತಿಯಾಗಿ ನೀಡಲಾದ ಲಂಚ ಎಂದು ಎಸ್‌ಐಟಿ ಪುರಾವೆ ಸಂಗ್ರಹಿಸಿದೆ.
ಕಲಬೆರಕೆ ನಡೆದಿದ್ದು ಹೇಗೆ?
ಉತ್ತರಾಖಂಡದ ಬೋಲೆ ಬಾಬಾ ಡೈರಿ, ತಮಿಳುನಾಡಿನ ಎಆರ್ ಡೈರಿ ಮತ್ತು ಆಂಧ್ರಪ್ರದೇಶದ ವೈಷ್ಣವಿ ಡೈರಿಗಳು ಸೇರಿ ಈ ಅಕ್ರಮ ಎಸಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ನಕಲಿ ಸೀಲುಗಳು, ಸುಳ್ಳು ಜಿಎಸ್‌ಟಿ ಬಿಲ್‌ಗಳು, ಲ್ಯಾಬ್ ರಿಪೋರ್ಟ್‌ಗಳು ಮತ್ತು ವಾರಂಟಿ ಸರ್ಟಿಫಿಕೇಟ್‌ಗಳನ್ನು ಬಳಸಿ ಕಲಬೆರಕೆ ತುಪ್ಪವನ್ನು ಪೂರೈಸಲಾಗಿತ್ತು. ಪೂರೈಕೆಗೆ ಅಗತ್ಯವಿರುವ ಅರ್ಹತೆ ಇಲ್ಲದಿದ್ದರೂ ಎಆರ್ ಡೈರಿಯಿಂದ ತುಪ್ಪ ಪಡೆಯಲು ಅಕ್ರಮ ಹಾದಿ ತುಳಿಯಲಾಗಿತ್ತು.
ಮಾಜಿ ಅಧ್ಯಕ್ಷರು ಮತ್ತು ಇಒಗಳಿಗೆ ಬಿಗ್ ರಿಲೀಫ್
ಈ ಪ್ರಕರಣದಲ್ಲಿ ಹೆಚ್ಚು ಕುತೂಹಲ ಮೂಡಿಸಿದ್ದು ರಾಜಕೀಯ ನಾಯಕರ ಪಾತ್ರ. ಆದರೆ, ಎಸ್‌ಐಟಿ ತನ್ನ ಅಂತಿಮ ಚಾರ್ಜ್‌ಶೀಟ್‌ನಲ್ಲಿ ಈ ಕೆಳಗಿನ ಅಂಶಗಳನ್ನು ಸ್ಪಷ್ಟಪಡಿಸಿದೆ.
• ತನಿಖೆಗೆ ಹಾಜರಾಗಿದ್ದ ಟಿಟಿಡಿ ಮಾಜಿ ಅಧ್ಯಕ್ಷರು ಮತ್ತು ಇಒಗಳ (EO) ಹೆಸರುಗಳನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
• ರಾಜಕೀಯ ಪ್ರೇರಿತ ಅಂಶಗಳಿಗಿಂತ ಹೆಚ್ಚಾಗಿ, ತುಪ್ಪದ ಕಲಬೆರಕೆಯಲ್ಲಿ ನೇರವಾಗಿ ಭಾಗಿಯಾದವರು ಮತ್ತು ಅದರಿಂದ ಲಾಭ ಪಡೆದವರ ಮೇಲೆ ಮಾತ್ರ ಎಸ್‌ಐಟಿ ಗಮನ ಹರಿಸಿದೆ.
• ಇದರಿಂದಾಗಿ ಮಾಜಿ ಟಿಟಿಡಿ ಅಧ್ಯಕ್ಷರು ಮತ್ತು ಉನ್ನತ ಅಧಿಕಾರಿಗಳಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.
ಏನಿದು ಪ್ರಕರಣ?
ತಿರುಮಲ ತಿರುಪತಿ ದೇವಸ್ಥಾನದ ಕಲಬೆರಕೆ ತುಪ್ಪದ ಪ್ರಕರಣವು ದೇಶದ ಧಾರ್ಮಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ವಿವಾದಗಳಲ್ಲಿ ಒಂದಾಗಿದೆ. ಈ ಹಗರಣವು 2024ರ ಸೆಪ್ಟೆಂಬರ್‌ನಲ್ಲಿ ಬೆಳಕಿಗೆ ಬಂದಿದ್ದು, ವಿಶ್ವಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಇತರ ತೈಲಗಳನ್ನು ಬೆರೆಸಲಾಗಿದೆ ಎಂಬ ಗಂಭೀರ ಆರೋಪದೊಂದಿಗೆ ಆರಂಭವಾಯಿತು. ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಯಾದ ವಿಶೇಷ ತನಿಖಾ ದಳ (SIT) ಕಳೆದ 16 ತಿಂಗಳುಗಳ ಕಾಲ ಹತ್ತು ರಾಜ್ಯಗಳಲ್ಲಿ ನಡೆಸಿದ ಸುದೀರ್ಘ ತನಿಖೆಯಲ್ಲಿ ಈ ಅಕ್ರಮದ ಹಿಂದಿದ್ದ ವ್ಯವಸ್ಥಿತ ಜಾಲವನ್ನು ಬಯಲಿಗೆಳೆದಿದೆ.

