Tirupati Laddu| ತಿರುಪತಿ ಲಡ್ಡುವಿನಲ್ಲಿ ತಂಬಾಕು ಪತ್ತೆ
ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೀಡಿದ ಪ್ರಸಾದ ಲಡ್ಡುವಿನೊಳಗೆ ಕಾಗದದಲ್ಲಿ ಸುತ್ತಿದ ತಂಬಾಕು ಸಿಕ್ಕಿದೆ ಎಂದು ಮಹಿಳಾ ಭಕ್ತೆಯೊಬ್ಬರು ಸೆಪ್ಟೆಂಬರ್ 19 ರಂದು ಹೇಳಿದ್ದಾರೆ.
ಖಮ್ಮಂ ಜಿಲ್ಲೆಯ ನಿವಾಸಿ ದೊಂತು ಪದ್ಮಾವತಿ ಅವರು ಸೆಪ್ಟೆಂಬರ್ 19 ರಂದು ತಿರುಪತಿಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕುಟುಂಬ ಮತ್ತು ಸ್ನೇಹಿತರಿಗೆ ಹಂಚಲು ಲಡ್ಡು ತೆಗೆದುಕೊಂಡು ಹೋಗಿದ್ದರು. ವಿತರಿಸಲು ಮುಂದಾದಾಗ ಲಡ್ಡುವಿನಲ್ಲಿ ಸಣ್ಣ ಕಾಗದದಲ್ಲಿ ಸುತ್ತಿದ ತಂಬಾಕಿನ ತುಂಡುಗಳನ್ನು ಕಂಡು ಗಾಬರಿಯಾಯಿತು ಎಂದು ಹೇಳಿದರು.
ʻಪ್ರಸಾದ ಪವಿತ್ರವಾಗಿರಬೇಕು. ಅದರಲ್ಲಿ ಇಂಥ ಮಾಲಿನ್ಯ ಸಿಕ್ಕಿದರೆ, ಮನಸ್ಸಿಗೆ ಭಾರಿ ನೋವಾಗುತ್ತದೆ,ʼ ಎಂದು ಹೇಳಿದ್ದಾರೆ.
ಕಲುಷಿತ ತುಪ್ಪದ ವಿವಾದ: ಲಡ್ಡು ತಯಾರಿಸಲು ಕಲುಷಿತ ತುಪ್ಪ ಬಳಸಲಾಗಿದೆ ಎಂಬ ವಿವಾದದ ನಂತರ ಬಂದಿರುವ ಈ ಆರೋಪದಿಂದ ಭಕ್ತರು ಆಘಾತಗೊಂಡಿದ್ದಾರೆ.
ಪ್ರಸಾದದಲ್ಲಿ ಕಲುಷಿತ ತುಪ್ಪ ಬಳಕೆಯಾಗಿದೆ ಎಂದು ಪ್ರಯೋಗಾಲಯದ ವರದಿ ಸಾರ್ವಜನಿಕಗೊಂಡ ಬಳಿಕ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಮಿಳುನಾಡಿನ ತುಪ್ಪ ಪೂರೈಕೆದಾರರಿಗೆ ನೋಟಿಸ್ ನೀಡಿದೆ.
ಲಡ್ಡುವಿನಲ್ಲಿ ತಂಬಾಕು ಪತ್ತೆಯಾಗಿರುವುದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅನುಸರಿಸುತ್ತಿರುವ ಗುಣಮಟ್ಟ ನಿಯಂತ್ರಣ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ.