ನಟ ಅಭಿನಯ್ ಕಿಂಗರ್ ನಿಧನ; ಅನಾಥವಾದ ಮೃತದೇಹ, ಅಂತ್ಯಕ್ರಿಯೆ ಜವಾಬ್ದಾರಿ ಹೊತ್ತ ನಾಡಿಗರ್ ಸಂಘ
x

ಬಾಡಿಗೆ ಮನೆಯಲ್ಲೇ ನಟ ಅಭಿನಯ್ ಕಿಂಗರ್ ಸಾವು

ನಟ ಅಭಿನಯ್ ಕಿಂಗರ್ ನಿಧನ; ಅನಾಥವಾದ ಮೃತದೇಹ, ಅಂತ್ಯಕ್ರಿಯೆ ಜವಾಬ್ದಾರಿ ಹೊತ್ತ ನಾಡಿಗರ್ ಸಂಘ

2002 ರ ಯಶಸ್ವಿ ಚಿತ್ರ 'ತುಳ್ಳುವಧೋ ಇಲಮೈ' ಮೂಲಕ ಪರಿಚಿತರಾಗಿದ್ದ ನಟ, ತಮ್ಮ ಕೊನೆಯ ದಿನಗಳಲ್ಲಿ ತೀವ್ರ ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.


Click the Play button to hear this message in audio format

ತಮಿಳು ಚಿತ್ರರಂಗದ ಯುವ ನಟ ಅಭಿನಯ್ ಕಿಂಗರ್ (44) ಅವರು ಲಿವರ್ ಸಂಬಂಧಿ ಕಾಯಿಲೆಯಿಂದ ಸೋಮವಾರ ನಿಧನರಾಗಿದ್ದಾರೆ. 2002 ರ ಯಶಸ್ವಿ ಚಿತ್ರ 'ತುಳ್ಳುವಧೋ ಇಲಮೈ' ಮೂಲಕ ಪರಿಚಿತರಾಗಿದ್ದ ನಟ, ತಮ್ಮ ಕೊನೆಯ ದಿನಗಳಲ್ಲಿ ತೀವ್ರ ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಚಿಕಿತ್ಸೆಗೆ ನೆರವು ಕೋರಿದ್ದ ನಟ

ದಿವಂಗತ ಹಿರಿಯ ನಟಿ ಟಿಪಿ ರಾಧಾಮಣಿ ಅವರ ಪುತ್ರರಾಗಿರುವ ಅಭಿನಯ್ ಕಿಂಗರ್ ಅವರು, ಈ ವರ್ಷದ ಆರಂಭದಲ್ಲಿ ತಮ್ಮ ಚಿಕಿತ್ಸೆಗೆ ಹಣಕಾಸಿನ ನೆರವು ಕೋರಿ ಹೃದಯ ವಿದ್ರಾವಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಾನು ಇನ್ನು ಹೆಚ್ಚು ಕಾಲ ಬದುಕುವುದಿಲ್ಲ, ಒಂದೂವರೆ ವರ್ಷ ಮಾತ್ರ ಬಾಳಬಹುದು ಎಂದು ವೈದ್ಯರು ಹೇಳಿದ್ದಾರೆ ಎಂದು ಅವರು ಕಣ್ಣೀರು ಹಾಕಿದ್ದರು. ತಾಯಿಯ ನಿಧನದ ನಂತರ ಇವರು ಮತ್ತಷ್ಟು ಒಂಟಿಯಾಗಿದ್ದರು.

ಅಭಿನಯ್ ಬಗ್ಗೆ

ಅಭಿನಯ್ ಕಿಂಗರ್ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡ ನಟ. ಅವರು 2002 ರ ತುಳ್ಳುವಧೋ ಇಲಮೈ ಚಿತ್ರದಲ್ಲಿ ಧನುಷ್ ಮತ್ತು ಶೆರಿನ್ ಅವರೊಂದಿಗೆ ನಟನಾಗಿ ಪದರ್ಪಣೆ ಮಾಡಿದ್ದರು. ಚಿತ್ರದ ಯಶಸ್ಸಿನ ನಂತರ, ಅವರು ಜ್ಜಂಕ್ಷನ್ (2002), ಸಿಂಗರ ಚೆನ್ನೈ (2004) ಮತ್ತು ಪೊನ್ ಮೇಗಲೈ (2005) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

2000 ರ ದಶಕದ ಉತ್ತರಾರ್ಧದಲ್ಲಿ, ಅವರು ಪೋಷಕ ಪಾತ್ರಗಳಲ್ಲಿ ನಟಿಸಲು ಮುಂದಾದರು. ಅವರು ತುಪ್ಪಕ್ಕಿ (2012) ಮತ್ತು ಅಂಜಾನ್ (2014) ಚಿತ್ರಗಳಲ್ಲಿ ವಿದ್ಯುತ್ ಜಮ್ವಾಲ್‌ಗೆ ಡಬ್ಬಿಂಗ್ ಮಾಡುವ ಮೂಲಕವೂ ಹೆಸರುವಾಸಿಯಾಗಿದ್ದರು. ಅವರ ತಾಯಿ ಟಿಪಿ ರಾಧಾಮಣಿ 2019 ರಲ್ಲಿ ನಿಧನರಾದ ನಂತರ, ಅವರ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು.

ಬಾಡಿಗೆ ಮನೆಯಲ್ಲಿ ದುರಂತ ಅಂತ್ಯ

ಕೋಡಂಬಾಕ್ಕಂನ ರಂಗರಾಜಪುರಂನಲ್ಲಿರುವ ಬಾಡಿಗೆ ಮನೆಯಲ್ಲಿ ಅಭಿನಯ್ ಕಿಂಗರ್ ನಿಧನರಾಗಿದ್ದಾರೆ. ಅವರಿಗೆ ಹತ್ತಿರದ ಸಂಬಂಧಿಕರು ಯಾರೂ ಇಲ್ಲದ ಕಾರಣ, ಆರಂಭದಲ್ಲಿ ಮೃತದೇಹವನ್ನು ಇಡುವುದಕ್ಕೆ ಮನೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಪೊಲೀಸರು, ಮಾಧ್ಯಮಗಳು, ತಮಿಳುನಾಡು ವಸತಿ ಮಂಡಳಿ ಅಧ್ಯಕ್ಷ ಪೂಚಿ ಮುರುಗನ್ ಮತ್ತು ನಟ ವಿಜಯ್ ಮುತ್ತು ಸೇರಿದಂತೆ ಹಲವು ಗಣ್ಯರ ಮಧ್ಯಸ್ಥಿಕೆಯ ನಂತರ ಅನುಮತಿ ದೊರಕಿದೆ ಎನ್ನಲಾಗಿದೆ.

ಅಂತ್ಯಕ್ರಿಯೆಯ ಜವಾಬ್ದಾರಿ ಹೊತ್ತ ನಾಡಿಗರ್ ಸಂಘ

ಅಭಿನಯ್ ಅವರಿಗೆ ಯಾವುದೇ ಕುಟುಂಬ ಸದಸ್ಯರು ಇಲ್ಲದ ಕಾರಣ, ಅವರ ಅಂತ್ಯಕ್ರಿಯೆಯನ್ನು ನೆರವೇರಿಸುವ ಮಹತ್ವದ ಜವಾಬ್ದಾರಿಯನ್ನು ನಾಡಿಗರ್ ಸಂಘ (ದಕ್ಷಿಣ ಭಾರತೀಯ ಕಲಾವಿದರ ಸಂಘ) ಮತ್ತು ಕೆಪಿವೈ ಬಾಲಾ ವಹಿಸಿಕೊಂಡಿದ್ದಾರೆ. ಚಿತ್ರರಂಗದ ಸದಸ್ಯರು ಮತ್ತು ಅಭಿಮಾನಿಗಳು ಅಭಿನಯ್ ಅವರ ಅಕಾಲಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Read More
Next Story