
ನನಗೆ ಚಪ್ಪಲಿ ತೋರಿಸಿದರು: ತೇಜಸ್ವಿ ವಿರುದ್ಧ ರೋಹಿಣಿ ಆಚಾರ್ಯ ಕಿಡಿ; ಯಾದವ್ ಕುಟುಂಬದಲ್ಲಿ ಭಿನ್ನಮತ
ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ಕುಟುಂಬವನ್ನು ತ್ಯಜಿಸುತ್ತಿದ್ದೇನೆ ಎಂದು ರೋಹಿಣಿ ಈಗಾಗಲೇ ಘೋಷಿಸಿದ್ದು, ಇದು ಲಾಲು ಕುಟುಂಬದ ರಾಜಕೀಯ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕುಟುಂಬದಲ್ಲಿನ ಆಂತರಿಕ ಕಲಹ ಬೀದಿಗೆ ಬಂದಿದೆ. ತಮ್ಮ ತಂದೆಗೆ ಕಿಡ್ನಿ ದಾನ ಮಾಡಿ ಪ್ರಾಣ ಉಳಿಸಿದ್ದ ಮಗಳು ರೋಹಿಣಿ ಆಚಾರ್ಯ, ಇದೀಗ ತಮ್ಮ ಸಹೋದರ ತೇಜಸ್ವಿ ಯಾದವ್ ಮತ್ತು ಆತನ ಆಪ್ತರೇ ತಮ್ಮನ್ನು ಕುಟುಂಬದಿಂದ ಹೊರಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದು ಯಾದವ್ ಕುಟುಂಬದಲ್ಲಿನ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದೆ.
ಭಾನುವಾರ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿಣಿ, "ನನಗೆ ಈಗ ಕುಟುಂಬವಿಲ್ಲ. ಈ ಬಗ್ಗೆ ನೀವು ತೇಜಸ್ವಿ ಯಾದವ್, ಸಂಜಯ್ ಯಾದವ್ ಮತ್ತು ರಮೀಜ್ ಅವರನ್ನೇ ಕೇಳಬೇಕು. ಅವರೇ ನನ್ನನ್ನು ಕುಟುಂಬದಿಂದ ಹೊರಹಾಕಿದ್ದು. ಸೋಲಿನ ಹೊಣೆ ಹೊರಲು ಅವರು ಸಿದ್ಧರಿಲ್ಲ," ಎಂದು ಕಣ್ಣೀರು ಹಾಕಿದ್ದಾರೆ. "ಪಕ್ಷವು ಹೀಗೆ ಹೀನಾಯವಾಗಿ ಸೋತಿದ್ದೇಕೆ ಎಂದು ಇಡೀ ದೇಶ ಕೇಳುತ್ತಿದೆ. ಈ ಬಗ್ಗೆ ಸಂಜಯ್ ಯಾದವ್ ಮತ್ತು ರಮೀಜ್ ಹೆಸರು ಹೇಳಿದರೆ, ಮನೆಯಿಂದ ಹೊರಹಾಕಲಾಗುತ್ತದೆ, ಅವಮಾನಿಸಲಾಗುತ್ತದೆ ಮತ್ತು ನಿಂದಿಸಲಾಗುತ್ತದೆ," ಎಂದು ಅವರು ನೋವು ತೋಡಿಕೊಂಡರು.
ಕೊಳಕು ಕಿಡ್ನಿ ಎಂದರೇ?
ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ರೋಹಿಣಿ ಮತ್ತಷ್ಟು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. "ನಿನ್ನೆ, ಒಬ್ಬ ಮಗಳನ್ನು, ಸಹೋದರಿಯನ್ನು, ವಿವಾಹಿತ ಮಹಿಳೆಯನ್ನು, ತಾಯಿಯನ್ನು ಅವಮಾನಿಸಲಾಯಿತು. ಹೊಲಸು ನಿಂದನೆಗಳನ್ನು ಮಾಡಲಾಯಿತು, ನನಗೆ ಹೊಡೆಯಲು ಚಪ್ಪಲಿ ಎತ್ತಲಾಯಿತು. ನಾನು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳಲಿಲ್ಲ, ಸತ್ಯವನ್ನು ಬಿಟ್ಟುಕೊಡಲಿಲ್ಲ, ಇದೇ ಕಾರಣಕ್ಕೆ ನಾನು ಈ ಅವಮಾನವನ್ನು ಸಹಿಸಬೇಕಾಯಿತು," ಎಂದು ಅವರು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, "ನನ್ನನ್ನು ನಿಂದಿಸಲಾಯಿತು. ನಾನು ನನ್ನ ತಂದೆಗೆ 'ಕೊಳಕು ಕಿಡ್ನಿ'ಯನ್ನು ಅಳವಡಿಸಿದ್ದೇನೆ, ಕೋಟ್ಯಂತರ ರೂಪಾಯಿ ತೆಗೆದುಕೊಂಡು ಚುನಾವಣಾ ಟಿಕೆಟ್ ಖರೀದಿಸಿದ್ದೇನೆ ಎಂದು ಹೇಳಿದರು," ಎಂದು ಅವರು ಆರೋಪಿಸಿದ್ದಾರೆ.
ಶಾಪ ತಟ್ಟಿತು
ವರದಿಗಳ ಪ್ರಕಾರ, ಚುನಾವಣಾ ಫಲಿತಾಂಶ ಬಂದ ನಂತರ, ಸೋಲಿನ ಹೊಣೆಯ ಬಗ್ಗೆ ರೋಹಿಣಿ ಮತ್ತು ತೇಜಸ್ವಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ತೇಜಸ್ವಿ, "ತುಮ್ಹಾರಾ ಹಾಯ್ ಲಗ್ ಗಯಾ ಹಮ್ ಲೋಗೋ ಕೋ" (ನಿನ್ನ ಶಾಪ ನಮಗೆ ತಟ್ಟಿತು) ಎಂದು ಹೇಳಿ, ಸೋಲಿಗೆ ರೋಹಿಣಿಯನ್ನೇ ದೂಷಿಸಿದ್ದಾರೆ ಎನ್ನಲಾಗಿದೆ. ಈ ಆರೋಪಗಳ ಬಗ್ಗೆ ತೇಜಸ್ವಿ ಯಾದವ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ಕುಟುಂಬವನ್ನು ತ್ಯಜಿಸುತ್ತಿದ್ದೇನೆ ಎಂದು ರೋಹಿಣಿ ಈಗಾಗಲೇ ಘೋಷಿಸಿದ್ದು, ಇದು ಲಾಲು ಕುಟುಂಬದ ರಾಜಕೀಯ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.

