The Federal Bharat | ʼದ ಫೆಡರಲ್ʼ ಹಿಂದಿ ಆವೃತ್ತಿ ದೆಹಲಿಯಿಂದ ಆರಂಭ
ಇದು ಇಂಗ್ಲಿಷ್, ತೆಲುಗು ಮತ್ತು ಕನ್ನಡ ಡಿಜಿಟಲ್ ಸುದ್ದಿ ತಾಣಗಳ ಬಳಿಕ ಇದೀಗ ಹಿಂದಿ ಸುದ್ದಿ ತಾಣ, ಭಾರತ ಪ್ರಮುಖ ಡಿಜಿಟಲ್ ಸುದ್ದಿ ಜಾಲದ ಭಾಗವಾಗಿದೆ.
ಚೆನ್ನೈನಿಂದ 'ದಿ ಫೆಡರಲ್' ಡಿಜಿಟಲ್ ನ್ಯೂಸ್ ವೆಬ್‌ಸೈಟ್ ಆರಂಭವಾಗಿ ಐದು ವರ್ಷಗಳ ಬಳಿಕ ಇದೀಗ, ತನ್ನ ಹಿಂದಿ ಆವೃತ್ತಿ ʻದಿ ಫೆಡರಲ್ ಭಾರತ್(The Federal Bharat) ʼ ಪ್ರಾರಂಭಿಸುವ ಮೂಲಕ ದೆಹಲಿಗೂ ತನ್ನ ಸುದ್ದಿ ಜಾಲ ವಿಸ್ತರಿಸಿದೆ.
ಇದು ಇಂಗ್ಲಿಷ್, ತೆಲುಗು ಮತ್ತು ಕನ್ನಡ ಡಿಜಿಟಲ್ ಸುದ್ದಿ ತಾಣಗಳ ಬಳಿಕ ಇದೀಗ ಹಿಂದಿ ಸುದ್ದಿ ತಾಣ, ಭಾರತ ಪ್ರಮುಖ ಡಿಜಿಟಲ್ ಸುದ್ದಿ ಜಾಲದ ಭಾಗವಾಗಿದೆ.
ತಮಿಳಿನ ʼಪುತಿಯಾ ತಲೈಮುರೈʼ ನಂತಹ ಮುಂಚೂಣಿ ಸುದ್ದಿ ವಾಹಿನಿಯನ್ನು ಹೊಂದಿರುವ ʼನ್ಯೂ ಜನರೇಷನ್ ಮೀಡಿಯಾʼದ ʼದ ಫೆಡರಲ್ʼ ಡಿಜಿಟಲ್ ಸುದ್ದಿ ತಾಣದ ಈ ದೆಹಲಿ ಮೂಲದ ಹೊಸ ವಿಸ್ತರಣೆಯು ಅದರ ಐದನೇ ಆವೃತ್ತಿಯಾಗಿದೆ.
ರಾಜ್ಯ ಕೇಂದ್ರಿತ ಸುದ್ದಿಗಳೊಂದಿಗೆ ರಾಷ್ಟ್ರ ರಾಜಧಾನಿಯ ಬೆಳವಣಿಗೆಗಳನ್ನೂ ಒಳಗೊಳ್ಳುವ ಈ ಹೊಸ ಆವೃತ್ತಿಯು ʼದ ಫೆಡರಲ್ʼ ಪಾಲಿಗೆ ಹೊಸ ಸಂಭ್ರಮದ ಸಂಗತಿ. ಡಿಜಿಟಲ್ ಸುದ್ದಿತಾಣವನ್ನು ಇನ್ನಷ್ಟು ಸಮೃದ್ಧಗೊಳಿಸುವ ಅವಕಾಶ.
ಐದನೇ ಆವೃತ್ತಿಯಾಗಿ ಹಿಂದಿ
ಹೆಸರೇ ಸೂಚಿಸುವಂತೆ ರಾಜ್ಯಗಳ ಆಗುಹೋಗುಗಳ ಮೇಲೆ ಪ್ರಮುಖವಾಗಿ ಗಮನ ಕೇಂದ್ರೀಕರಿಸಿ 2019ರಲ್ಲಿ 'ದ ಫೆಡರಲ್(The Federal News)' ಚೆನ್ನೈನಿಂದ ತನ್ನ ಕಾರ್ಯಾಚರಣೆ ಆರಂಭಿಸಿತ್ತು. ಹಾಗಾಗಿ ಇಂಗ್ಲಿಷ್‌ನಲ್ಲಿ ರಾಷ್ಟ್ರೀಯ ಸುದ್ದಿ ಜಾಲತಾಣವನ್ನು ಆರಂಭಿಸಿದ ಬಳಿಕ The Federal Telangana, The Federal Andhra Pradesh ಮತ್ತು The Federal Karnataka ಡಿಜಿಟಲ್ ಸುದ್ದಿ ತಾಣಗಳನ್ನು ಆರಂಭಿಸಿತು.
ಕ್ಲಾಸಿಕಲ್ ಜರ್ನಲಿಸಂ
"ಸುದ್ದಿಯ ಎಲ್ಲಾ ಆಯಾಮಗಳನ್ನು ಓದುಗರ ಮುಂದಿಡುವುದು ಮತ್ತು ಯಾವುದೇ ಬಗೆಯ ರಾಜಕಾರಣ, ಸರ್ಕಾರ ಅಥವಾ ನಿರ್ದಿಷ್ಟ ವ್ಯಕ್ತಿಗಳ ಪರ ವಕಾಲತು ವಹಿಸದೇ ಇರುವ ಎಚ್ಚರವನ್ನು ಕಾಯ್ದುಕೊಳ್ಳುವುದು ನಮ್ಮ ಪತ್ರಿಕಾ ವೃತ್ತಿಧರ್ಮ" ಎಂದು ʼದ ಫೆಡರಲ್ʼ ಮುಖ್ಯ ಸಂಪಾದಕರಾದ ಎಸ್ ಶ್ರೀನಿವಾಸನ್ ಅವರು ಈ ಸಂದರ್ಭದಲ್ಲಿ ತಮ್ಮ ಮಾಧ್ಯಮದ ಆಶಯಗಳನ್ನು ವಿವರಿಸಿದ್ದಾರೆ.
"ನಮಗೆ ಸುದ್ದಿಯೇ ಹೀರೋ. ಸುದ್ದಿಯನ್ನು ಪ್ರಸ್ತುತಪಡಿಸುವಾಗ ಅದರ ಎಲ್ಲಾ ಆಯಾಮಗಳನ್ನು ಓದುಗರ ಮುಂದಿಡುವುದೇ ನಮ್ಮ ಆದ್ಯತೆ" ಎಂದು ಅವರು ಖಚಿತಪಡಿಸಿದ್ದಾರೆ.
"ದೇಶದ ಉದ್ದಗಲಕ್ಕೆ ಇರುವ ನಮ್ಮ ಪ್ರತಿಭಾವಂತ ಸ್ವತಂತ್ರ ಪತ್ರಕರ್ತರು ʼದ ಫೆಡರಲ್ʼಗೆ ವಿಶೇಷ ವರದಿಗಳು ಮತ್ತು ವಿಶ್ಲೇಷಣೆಗಳನ್ನು ನೀಡುತ್ತಾರೆ. ಖಚಿತತೆ, ವಾಸ್ತವತೆ ಮತ್ತು ಆಳ ಒಳನೋಟದ ಅಭಿಮತ ಮತ್ತು ದೃಷ್ಟಿಕೋನದ ಲೇಖನಗಳು ನಮ್ಮ ವಿಶೇಷ" ಎಂದೂ ಅವರು ವಿವರಿಸಿದ್ದಾರೆ.
ದೆಹಲಿಯ ಆವೃತ್ತಿಯ ಪ್ರತಿಭಾವಂತ ಪತ್ರಕರ್ತರ ತಂಡವನ್ನು ಸೌರಭ್ ಕುಮಾರ್ ಗುಪ್ತಾ ಅವರು ಮುನ್ನಡೆಸಲಿದ್ದಾರೆ.