ಥಾಣೆ:  ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಸ್ಥಳೀಯರಿಂದ ರೈಲು ತಡೆದು ಪ್ರತಿಭಟನೆ
x

ಥಾಣೆ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಸ್ಥಳೀಯರಿಂದ ರೈಲು ತಡೆದು ಪ್ರತಿಭಟನೆ


ಮಹಾರಾಷ್ಟ್ರದ ಥಾಣೆ ಶಾಲೆಯಲ್ಲಿ ನಾಲ್ಕು ವರ್ಷದ ಇಬ್ಬರು ಬಾಲಕಿಯರ ಮೇಲೆ ಶುಚೀಕರಣ ಸಿಬ್ಬಂದಿ(23)ಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯಿಂದ ಸಿಟ್ಟಿಗೆದ್ದ ಸ್ಥಳೀಯರು, ಬದ್ಲಾಪುರ ರೈಲು ನಿಲ್ದಾಣದಲ್ಲಿ ಜಮಾಯಿಸಿ ರೈಲು ಸಂಚಾರ ತಡೆದು ಹಳಿಗಳ ಮೇಲೆ ಮಂಗಳವಾರ ಧರಣಿ ನಡೆಸಿದರು.

ಆಗಸ್ಟ್ 16 ರಂದು ಘಟನೆ ನಡೆದಿದ್ದು, ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿ, ಮರುದಿನ ಆತನನ್ನು ಬಂಧಿಸಲಾಯಿತು. ಆನಂತರ ಶಾಲೆಯ ಪ್ರಾಂಶುಪಾಲ,ತರಗತಿ ಶಿಕ್ಷಕಿ ಮತ್ತು ಮಹಿಳಾ ಅಟೆಂಡರ್‌ ನ್ನು ಅಮಾನತುಗೊಳಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಆಡಳಿತ ಮಂಡಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು, ಶಾಲೆ ಆವರಣದಲ್ಲಿ ಕಟ್ಟೆಚ್ಚರ ವಹಿಸುವುದಾಗಿ ತಿಳಿಸಿದೆ.

ಕೋಪಗೊಂಡ ಪೋಷಕರು: ಆದರೆ, ಪೋಷಕರು ಶಾಲೆ ಆಡಳಿತದ ಪ್ರತಿಕ್ರಿಯೆಯಿಂದ ತೃಪ್ತರಾಗಿಲ್ಲ.

ಪ್ರಾಥಮಿಕ ಪೊಲೀಸ್ ತನಿಖೆಯಿಂದ ಬಾಲಕಿಯರ ಶೌಚಾಲಯಗಳಲ್ಲಿ ಮಹಿಳಾ ಅಟೆಂಡರ್‌ಗಳು ಇರಲಿಲ್ಲ ಎಂದು ತಿಳಿದುಬಂದಿದೆ. ಇದು ಮೂಲಭೂತ ಸುರಕ್ಷತೆ ಅಗತ್ಯವಾಗಿದೆ. ಜೊತೆಗೆ, ಶಾಲೆಯಲ್ಲಿನ ಹಲವು ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸದಿರುವುದು ಕಂಡು ಬಂದಿದೆ.

ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ಬದ್ಲಾಪುರ ರೈಲು ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆಯಿಂದ ಪೋಷಕರು ಧರಣಿ ನಿರತರಾಗಿದ್ದಾರೆ. ಪ್ರತಿಭಟನೆಯಿಂದ ಉಪನಗರ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ.

ಪೊಲೀಸ್ ಅಧಿಕಾರಿ ವರ್ಗ: ಪೊಲೀಸರನ್ನು ಸಂಪರ್ಕಿಸಿದಾಗ ಕ್ರಮಕೈಗೊಳ್ಳದ ಆರೋಪದ ಮೇಲೆ ಬದ್ಲಾಪುರ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣವನ್ನು ವಿರೋಧಿಸಿ ಹಲವು ಸಂಘಟನೆಗಳು ಬದ್ಲಾಪುರ ಬಂದ್‌ಗೆ ಕರೆ ನೀಡಿವೆ.

ಬಂಧಿತ ಆರೋಪಿ ವಿರುದ್ಧ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಮಹಾರಾಷ್ಟ್ರ ಮುಖ್ಯ ಮಂತ್ರಿ ಏಕನಾಥ್ ಶಿಂಧೆ ಮಂಗಳವಾರ ಹೇಳಿದ್ದಾರೆ. ತ್ವರಿತಗತಿಯಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗುತ್ತದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಲಾಗುವುದು ಎಂದರು. ʻನಾನು ಥಾಣೆ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಆರೋಪಿಯನ್ನು ಬಂಧಿಸಲಾಗಿದೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಹೇಳಿದ್ದೇನೆ. ರೈಲು ತಡೆಯಿಂದ ಸ್ಥಳೀಯ ರೈಲುಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಪೋಷಕರು ಸಂಯಮದಿಂದ ವರ್ತಿಸಬೇಕು,ʼ ಎಂದು ಅವರು ಮನವಿ ಮಾಡಿದರು.

ʻಘಟನೆ ದುರದೃಷ್ಟಕರ. ಈ ಬಗ್ಗೆ ತನಿಖೆ ನಡೆಸುವಂತೆ ಥಾಣೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪೋಷಕರು ಆರೋಪಿಸಿದಂತೆ ಪ್ರಕರಣವನ್ನು ದಾಖಲಿಸುವಲ್ಲಿ ಏಕೆ ವಿಳಂಬವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಶಿಕ್ಷಣ ಇಲಾಖೆ ಮತ್ತು ವಲಯ ಉಪ ಪೊಲೀಸ್ ಆಯುಕ್ತರು ಪ್ರತ್ಯೇಕ ತನಿಖೆ ನಡೆಸುತ್ತಾರೆʼ ಎಂದು ಅವರು ಹೇಳಿದರು.

Read More
Next Story