Pahalgam Terror Attack | ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ; ಶಿವಮೊಗ್ಗ ಮೂಲದ ರಿಯಲ್​ ಎಸ್ಟೇಟ್​ ಉದ್ಯಮಿ ಸಾವು, ಹಲವರಿಗೆ ಗಾಯ
x

Pahalgam Terror Attack | ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ; ಶಿವಮೊಗ್ಗ ಮೂಲದ ರಿಯಲ್​ ಎಸ್ಟೇಟ್​ ಉದ್ಯಮಿ ಸಾವು, ಹಲವರಿಗೆ ಗಾಯ

ಘಟನೆ ಬಗ್ಗೆ ಮಂಜುನಾಥ್ ಪತ್ನಿ ಪಲ್ಲವಿ ಪ್ರತಿಕ್ರಿಯೆ ನೀಡಿದ್ದು, ಏ.19ರಂದು ಪ್ರವಾಸಕ್ಕೆ ಹೋಗಿದ್ದೆವು. ಉಗ್ರರು ಬಂದು ನಮ್ಮ ಧರ್ಮವನ್ನು ವಿಚಾರಿಸಿ, ನಮ್ಮ ಕಣ್ಣೆದುರಿಗೇ ಪತಿಯನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ.


ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ಮಂಗಳವಾರ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ ಐವರು ಪ್ರವಾಸಿಗರು ಗಾಯಗೊಂಡಿದ್ದಾರೆ. ಶಿವಮೊಗ್ಗದ ವಿಜಯನಗರ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದು, ಇವರ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯಾಹ್ನ 2:30ರ ಸುಮಾರಿಗೆ ಕುದುರೆ ಸವಾರಿ ಮಾಡುತ್ತಿದ್ದ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆದಿದೆ. ಲಷ್ಕರ್-ಎ-ತೊಯ್ಬಾದ ಪರೋಕ್ಷ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಜವಾಬ್ದಾರಿ ಹೊತ್ತಿದೆ.

ಘಟನೆ ಬಗ್ಗೆ ಮಂಜುನಾಥ್ ಪತ್ನಿ ಪಲ್ಲವಿ ಪ್ರತಿಕ್ರಿಯೆ ನೀಡಿದ್ದು, ಏ.19ರಂದು ಪ್ರವಾಸಕ್ಕೆ ಹೋಗಿದ್ದೆವು. ಉಗ್ರರು ಬಂದು ನಮ್ಮ ಧರ್ಮವನ್ನು ವಿಚಾರಿಸಿ, ನಮ್ಮ ಕಣ್ಣೆದುರಿಗೇ ಪತಿಯನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ. ಅವರನ್ನು ಕೊಲ್ಲು ವೇಳೆ ನನ್ನನ್ನು ಹಾಗೂ ಮಗನನ್ನು ಕೊಂದುಬಿಡಿ ಎಂದು ನಾವು ಉಗ್ರರಿಗೆ ಕೋರಿಕೊಂಡೆವು. ಆಗ ಅವರು ನಿಮ್ಮನ್ನು ಕೊಲ್ಲಲ್ಲ, ಹೋಗಿ ಮೋದಿಗೆ ಹೇಳಿ ಎಂದು ತಿಳಿಸಿದ್ದಾರೆ.

ಹಲವರಿಗೆ ಗಾಯ

ಉಗ್ರರ ಗುಂಡಿನ ದಾಳಿಗೆ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಅನಂತ್‌ನಾಗ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ದಾಳಿ ನಡೆದ ಸ್ಥಳವನ್ನು ತಲುಪಲು ಪ್ರಯತ್ನಿಸುತ್ತಿವೆ ಆದರೆ ಕಠಿಣ ಭೂಪ್ರದೇಶದಿಂದಾಗಿ ತೊಂದರೆಗಳನ್ನು ಎದುರಿಸುತ್ತಿವೆ.

ಬೈಸರನ್ ಹುಲ್ಲುಗಾವಲು ಪಹಲ್ಗಾಮ್ ಗಿರಿಧಾಮದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ ಮತ್ತು ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳ ಮೂಲಕ ಮಾತ್ರ ಹೋಗಬಹುದು. ದಾಳಿಯ ನಂತರ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ನಡೆಸುತ್ತಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿಕೊಂಡಿದ್ದಾರೆ.

ಅಮಿತ್ ಶಾ ತುರ್ತು ಸಭೆ

ಭಯೋತ್ಪಾದಕ ದಾಳಿಯ ನಂತರ, ಅಮಿತ್ ಶಾ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಸಭೆಯಲ್ಲಿ ಗೃಹ ಕಾರ್ಯದರ್ಶಿ, ಗುಪ್ತಚರ ಬ್ಯೂರೋ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಅಧಿಕಾರಿಗಳು ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಭೆ

ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಯವರು ತಕ್ಷಣ ಕಾರ್ಯಪ್ರವತ್ತರಾಗುವಂತೆ ಸೂಚನೆ ನೀಡಿದ್ದಾರೆ.

ಸಿಎಂ ಅವರ ಸೂಚನೆ ಮೇರೆಗೆ ಅಧಿಕಾರಿಗಳ ಒಂದು ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಪೊಲೀಸ್ ಅಧಿಕಾರಿಗಳೂ ತೆರಳಿದ್ದಾರೆ.

ಒಮರ್ ಅಬ್ದುಲ್ಲಾ ಖಂಡನೆ

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ದಾಳಿಯನ್ನು ಖಂಡಿಸಿ "ನನಗೆ ನಂಬಲಾಗದಷ್ಟು ಆಘಾತವಾಗಿದೆ. ಪ್ರವಾಸಿಗರ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ನಾನು ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.

Read More
Next Story