
ಮುಂಬೈಗೆ ಉಗ್ರರ ಬೆದರಿಕೆ? 14 ಭಯೋತ್ಪಾದಕರು, 400 ಕೆ.ಜಿ ಆರ್‌ಡಿಎಕ್ಸ್ ರೆಡಿ; ವಾಟ್ಸ್ಆ್ಯಪ್ ಸಂದೇಶ
ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು, ತಕ್ಷಣವೇ ಅಪರಾಧ ವಿಭಾಗ, ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ಇತರ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ರವಾನಿಸಿದ್ದಾರೆ. ಅದೇ ರೀತಿ ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ 14 ಶಸ್ತ್ರಸಜ್ಜಿತ ಭಯೋತ್ಪಾದಕರು 400 ಕೆಜಿ ಆರ್‌ಡಿಎಕ್ಸ್‌ನೊಂದಿಗೆ ಪ್ರವೇಶಿಸಿದ್ದಾರೆ ಎಂಬ ವಾಟ್ಸ್ಆ್ಯಪ್ ಸಂದೇಶವೊಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದಿದ್ದು, ನಗರದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಅನಂತ ಚತುರ್ಥಿ ಹಬ್ಬದ ಭದ್ರತಾ ಸಿದ್ಧತೆಗಳ ನಡುವೆಯೇ, ಪೊಲೀಸ್ ನಿಯಂತ್ರಣ ಕೊಠಡಿಯ ವಾಟ್ಸ್ಆ್ಯಪ್ ಸಂಖ್ಯೆಗೆ ಈ ಬೆದರಿಕೆ ಸಂದೇಶ ಬಂದಿದೆ. "ಒಟ್ಟು 34 ವಾಹನಗಳಲ್ಲಿ 400 ಕೆಜಿ ಆರ್‌ಡಿಎಕ್ಸ್ ತುಂಬಿ ಕಳುಹಿಸಲಾಗಿದ್ದು, ಇದರೊಂದಿಗೆ 'ಲಷ್ಕರ್-ಎ-ಜಿಹಾದಿ' ಸಂಘಟನೆಯ 14 ಭಯೋತ್ಪಾದಕರು ಮುಂಬೈ ಪ್ರವೇಶಿಸಿದ್ದಾರೆ" ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರ ಕಾರ್ಯಾಚರಣೆ
ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು, ತಕ್ಷಣವೇ ಅಪರಾಧ ವಿಭಾಗ, ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ಇತರ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ರವಾನಿಸಿದ್ದಾರೆ. ಅದೇ ರೀತಿ ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಿವಿಧೆಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಂದೇಶ ಬಂದಿರುವ ಮೊಬೈಲ್ ಸಂಖ್ಯೆಯ ಮೂಲವನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ.
ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಮತ್ತು ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಸ್ತುಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವಂತೆ ಮುಂಬೈ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗಣೇಶ ವಿಸರ್ಜನೆಯ ಅಂತಿಮ ದಿನದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ