ತೆಲಂಗಾಣದಲ್ಲಿ ‘ತೆಲುಗು ಕಡ್ಡಾಯ’: ಕೇಂದ್ರದ ವಿರುದ್ಧ ತೊಡೆತಟ್ಟಿದ ಮತ್ತೊಂದು ರಾಜ್ಯ!
x

ಎಐ ರಚಿತ ಚಿತ್ರ

ತೆಲಂಗಾಣದಲ್ಲಿ ‘ತೆಲುಗು ಕಡ್ಡಾಯ’: ಕೇಂದ್ರದ ವಿರುದ್ಧ ತೊಡೆತಟ್ಟಿದ ಮತ್ತೊಂದು ರಾಜ್ಯ!

ತೆಲಂಗಾಣದ ಎಲ್ಲ ಮಕ್ಕಳೂ ತಮ್ಮ ಮಾತೃಭಾಷೆ ಕಲಿಯಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಿಳಿಸಿದ್ದಾರೆ.


ಕೇಂದ್ರ ಸರ್ಕಾರದ ವಿರುದ್ಧ ದಕ್ಷಿಣದ ಎರಡು ಪ್ರಮುಖ ರಾಜ್ಯಗಳು ಭಾಷಾ ಸಮರಕ್ಕೆ ಮುಂದಾಗಿವೆ. ತಮಿಳುನಾಡು ಸರ್ಕಾರ ಈಗಾಗಲೇ ಭಾಷಾ ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟ ಎಂದು ಹೇಳಿರುವ ಬೆನ್ನಲ್ಲೇ ತೆಲಂಗಾಣ ಸರ್ಕಾರವೂ ಈಗ ಭಾಷೆಯ ವಿಚಾರದಲ್ಲಿ ದೃಢ ನಿಲುವು ಕೈಗೊಂಡಿದೆ. ಇನ್ನು ಮುಂದೆ ತೆಲಂಗಾಣದಲ್ಲಿ ಸಿಬಿಎಸ್‌ಇ ಸೇರಿದಂತೆ ಎಲ್ಲ ಶಾಲೆಗಳಲ್ಲೂ ತೆಲುಗು ಕಡ್ಡಾಯಗೊಳಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ವಿರುದ್ಧ ಮತ್ತೊಂದು ರಾಜ್ಯ ತಿರುಗಿಬಿದ್ದಿದೆ.

ತೆಲಂಗಾಣದ ಎಲ್ಲ ಮಕ್ಕಳೂ ತಮ್ಮ ಮಾತೃಭಾಷೆ ಕಲಿಯಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಿಳಿಸಿದ್ದಾರೆ. ಜೊತೆಗೆ 9 ಮತ್ತು 10ನೇ ತರಗತಿಯ ಪಠ್ಯಕ್ರಮದಲ್ಲಿನ ‘ಸ್ಟ್ಯಾಂಡರ್ಡ್ ತೆಲುಗು’ವನ್ನು ‘ಸರಳ ತೆಲುಗು’ವಾಗಿ ಬದಲಾಯಿಸಲಾಗುತ್ತದೆ ಎಂದೂ ಹೇಳಿದೆ. ಇದರಿಂದಾಗಿ ಯಾವ ವಿದ್ಯಾರ್ಥಿಯ ಮಾತೃಭಾಷೆ ತೆಲುಗು ಆಗಿರುವುದಿಲ್ಲವೋ ಅಂತಹ ವಿದ್ಯಾರ್ಥಿಗಳಿಗೂ ತೆಲುಗು ಕಲಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ತ್ರಿಭಾಷಾ ಸೂತ್ರಕ್ಕೆ ಸಂಬಂಧಿಸಿ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನಡುವೆ ಭಾಷಾ ಸಮರ ಶುರುವಾಗಿದೆ. ಆ ಹೋರಾಟಕ್ಕೆ ಇದೀಗ ತೆಲಂಗಾಣವೂ ಕೈಜೋಡಿಸಿದೆ.

ಎನ್​​ಇಪಿಗೆ ಆಕ್ಷೇಪ

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಈಗಾಗಲೇ ಎನ್ಇಪಿಯಲ್ಲಿನ ನಿಬಂಧನೆಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಮೂರನೇ ಭಾಷೆಯನ್ನು ಕಲಿಯಬೇಕೇ ಹೊರತು ಹಿಂದಿಯೆ ಕಲಿಯಬೇಕೆಂದು ಒತ್ತಡ ಹೇರುವಂತಿಲ್ಲ ಎನ್ನುವುದು ತ.ನಾಡು ಸರ್ಕಾರದ ವಾದ. ಆದರೆ, ಕೇಂದ್ರ ಸರ್ಕಾರ ತಮಿಳುನಾಡಿನ ಆರೋಪವನ್ನು ನಿರಾಕರಿಸಿದೆ. ಬ ಹಿಂದಿ ಸೇರಿದಂತೆ ಯಾವುದೇ ಭಾಷೆಯನ್ನು ಕಲಿಯಬೇಕೆಂದು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ತಮಿಳುನಾಡು ರಾಜ್ಯವು ಪ್ರಸ್ತುತ ದ್ವಿಭಾಷಾ ನೀತಿ ಹೊಂದಿದೆ. ಅಂದರೆ ವಿದ್ಯಾರ್ಥಿಗಳು ಇಂಗ್ಲಿಷ್ ಮತ್ತು ತಮಿಳು ಮಾತ್ರ ಕಲಿಯುತ್ತಾರೆ. ದ್ವಿಭಾಷಾ ನೀತಿಯ ಮೂಲಕವೇ ನಮ್ಮ ರಾಜ್ಯವು ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್) ವಿಷಯಗಳಲ್ಲಿ ಹೆಚ್ಚಿನ ಸಾಧಕರನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಇಷ್ಟು ಸಾಕು ಎಂದು ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಹೇಳಿಕೆ ನೀಡಿದ್ದಾರೆ.

ಕೇಂದ್ರ-ಸ್ಟಾಲಿನ್ ವಿವಾದ

ಎನ್‌ಇಪಿ ಜಾರಿ ಮಾಡದೇ ಹೋದರೆ ಕೇಂದ್ರ ಸರ್ಕಾರದ 2,400 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಿಲ್ಲ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬೆದರಿಕೆ ಹಾಕಿದ್ದಾರೆ ಎನ್ನುವುದು ತಮಿಳುನಾಡು ಸರ್ಕಾರದ ಆರೋಪ . ಪ್ರಧಾನ್ ಅವರ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತು ನಟ-ರಾಜಕಾರಣಿ ಕಮಲ್ ಹಾಸನ್ ಅವರಂತಹ ಹಲವು ತಮಿಳು ಪ್ರಭಾವಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಇತ್ತೀಚಿನ ದಿನಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡಿನಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.

ರೈಲು ನಿಲ್ದಾಣಗಳಲ್ಲಿನ ಹಿಂದಿ ನಾಮಫಲಕಗಳಿಗೆ, ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಅಂಚೆ ಕಚೇರಿಗಳು, ಬಿಎಸ್‌ಎನ್‌ಎಲ್ ಕಚೇರಿಗಳ ನಾಮಫಲಕಕ್ಕೆ ಮಸಿ ಬಳಿಯುವಂಥ ಕೃತ್ಯಗಳೂ ನಡೆದಿವೆ.

Read More
Next Story