ತೆಲಂಗಾಣ: ಬಜೆಟ್ ವಿರುದ್ಧ ನಿರ್ಣಯ ಅಂಗೀಕಾರ, ನೀತಿ ಆಯೋಗದ ಸಭೆಗೆ ಬಹಿಷ್ಕಾರ
x

ತೆಲಂಗಾಣ: ಬಜೆಟ್ ವಿರುದ್ಧ ನಿರ್ಣಯ ಅಂಗೀಕಾರ, ನೀತಿ ಆಯೋಗದ ಸಭೆಗೆ ಬಹಿಷ್ಕಾರ


ಹೈದರಾಬಾದ್, ಜು.24: ಕೇಂದ್ರ ಸರ್ಕಾರವು ರಾಜ್ಯದ ಹಕ್ಕುಗಳನ್ನುಉಲ್ಲಂಘಿಸುತ್ತಿರುವುದನ್ನು ಹಾಗೂ ರಾಜ್ಯಕ್ಕೆ ಅನುದಾನ ಬಿಡುಗಡೆಗೊಳಿಸದೆ ಇರುವುದನ್ನು ಖಂಡಿಸಿ, ಜುಲೈ 27ರಂದು ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುತ್ತಿರುವುದಾಗಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹೇಳಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ತಾರತಮ್ಯವಾಗಿದೆ ಎಂದು ಸದನ ಅಂಗೀಕರಿಸಿದ ನಿರ್ಣಯದ ಮೇಲಿನ ಚರ್ಚೆ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿದರು.

ʻಪ್ರಧಾನಿ ಅವರು ನೀತಿ ಆಯೋಗದ ಅಧ್ಯಕ್ಷರಾಗಿದ್ದಾರೆ. ತೆಲಂಗಾಣಕ್ಕೆ ಅನುದಾನ ಬಿಡುಗಡೆ ಮಾಡದೆ ಇರುವುದು ಮತ್ತು ಅಗತ್ಯ ಅನುಮತಿ ನೀಡದೆ ಇರುವುದನ್ನು ಖಂಡಿಸಿ, ತೆಲಂಗಾಣದ ಹಕ್ಕುಗಳನ್ನು ಘಾಸಿಗೊಳಿಸುವುದಕ್ಕಾಗಿ ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುತ್ತಿದ್ದೇನೆ,ʼ ಎಂದು ಅವರು ಹೇಳಿದರು.

ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆಯಲ್ಲಿ ತೆಲಂಗಾಣಕ್ಕೆ ನೀಡಿರುವ ಭರವಸೆಗಳನ್ನು ಈಡೇರಿಸುವುದು ಮತ್ತು ಬಜೆಟ್‌ಗೆ ತಿದ್ದುಪಡಿ ಮಾಡುವ ಮೂಲಕ ತೆಲಂಗಾಣದ ಮನವಿಗಳ ಕುರಿತು ಸಂಸತ್ತಿನ ಅಧಿವೇಶನದಲ್ಲಿ ಪ್ರಧಾನಿ ಹೇಳಿಕೆ ನೀಡಬೇಕು ಎಂದು ಹೇಳಿದರು.

ಉಕ್ಕು ಮತ್ತು ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆ, ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶ (ಐಟಿಐಆರ್) ಪುನರುಜ್ಜೀವನ, ಪಾಲಮುರು-ರಂಗರೆಡ್ಡಿ ಏತ ನೀರಾವರಿ ಯೋಜನೆಗೆ ಅನುಮತಿ, ಎನ್‌ಟಿಪಿಸಿ ವಿದ್ಯುತ್ ಸ್ಥಾವರ ನಿರ್ಮಾಣ ಮತ್ತು ಬುಡಕಟ್ಟು ವಿಶ್ವವಿದ್ಯಾನಿಲಯದ ಆರಂಭ ಬೇಡಿಕೆಯಲ್ಲಿ ಸೇರಿವೆ.

ಸಂವಿಧಾನದ ಪ್ರಕಾರ, ಭಾರತವು ರಾಜ್ಯಗಳ ಒಕ್ಕೂಟ. ದೇಶದ ಎಲ್ಲಾ ರಾಜ್ಯಗಳ ಸಮಗ್ರ ಮತ್ತು ಸಂಪೂರ್ಣ ಅಭಿವೃದ್ಧಿಯನ್ನು ಖಚಿತಪಡಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಕೇಂದ್ರವು ಒಕ್ಕೂಟದ ಮನೋಭಾವವನ್ನು ಕೈಬಿಟ್ಟಿದೆ. ಬಜೆಟ್‌ನಲ್ಲಿ ತೆಲಂಗಾಣಕ್ಕೆ ಅನ್ಯಾಯವಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ʻಎಪಿ ಮರುಸಂಘಟನೆ ಕಾಯಿದೆ ಪ್ರಕಾರ, ಎರಡೂ ರಾಜ್ಯಗಳ ಸುಸ್ಥಿರ ಅಭಿವೃದ್ಧಿ ಕೇಂದ್ರ ಸರ್ಕಾರದ ಜವಾಬ್ದಾರಿ. ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ವಿಫಲವಾಗಿದೆ. ಸಿಎಂ ಹಾಗೂ ಸಚಿವರು ಪ್ರಧಾನಮಂತ್ರಿ ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಿ ಹಣ ಬಿಡುಗಡೆ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟರೂ, ಕೇಂದ್ರವು ಬಜೆಟ್‌ನಲ್ಲಿ ರಾಜ್ಯಕ್ಕೆ ತಾರತಮ್ಯ ಎಸಗಿದೆ. ಯುಪಿಎ ಸರ್ಕಾರ ತೆಲಂಗಾಣಕ್ಕೆ ಅನ್ಯಾಯ ವಾಗದಂತೆ ನೋಡಿಕೊಂಡಿದೆ. ಆದರೆ ʻಇಲ್ಲಿನ ಆಡಳಿತಗಾರರುʼ (ಬಿಆರ್‌ಎಸ್) ಭರವಸೆಗಳ ಅನುಷ್ಠಾನವನ್ನು ಪ್ರಶ್ನಿಸದ ಕಾರಣ ರಾಜ್ಯಕ್ಕೆ ಅನ್ಯಾಯವಾಗಿದೆ,ʼ ಎಂದು ಅವರು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ರಾಜ್ಯದ ಜನರು ಕೇಂದ್ರಕ್ಕೆ ತೆರಿಗೆಯಾಗಿ 3.68 ಲಕ್ಷ ಕೋಟಿ ರೂ.ಕೊಟ್ಟಿದ್ದಾರೆ. ಪ್ರತಿಯಾಗಿ ರಾಜ್ಯಕ್ಕೆ ಕೇವಲ 1.68 ಲಕ್ಷ ಕೋಟಿ ದೊರೆತಿದೆ. ದಕ್ಷಿಣದ ಐದು ರಾಜ್ಯಗಳಾದ ತೆಲಂಗಾಣ, ಆಂಧ್ರ, ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಿಂದ ಸಂಗ್ರಹಿಸಿದ ಜಿಎಸ್‌ಟಿ ಸುಮಾರು 22 ಲಕ್ಷ ಕೋಟಿ ರೂ. ಕೇಂದ್ರ ನೀಡಿರುವುದು 6.42 ಲಕ್ಷ ಕೋಟಿ ರೂ. 3.41 ಲಕ್ಷ ಕೋಟಿ ತೆರಿಗೆ ನೀಡಿರುವ ಉತ್ತರ ಪ್ರದೇಶಕ್ಕೆ ಕೇಂದ್ರ 6.91 ಲಕ್ಷ ಕೋಟಿ ರೂ. ಪಾವತಿಸಿದೆ. ಇದು ತಾರತಮ್ಯ,ʼ ಎಂದು ಹೇಳಿದರು.

ಆಂಧ್ರಪ್ರದೇಶ ಅಥವಾ ಇತರರು ಕೇಂದ್ರದಿಂದ ಹಣ ಪಡೆಯುವುದನ್ನು ತಮ್ಮ ಸರ್ಕಾರ ವಿರೋಧಿಸುವುದಿಲ್ಲ. ಆದರೆ, ರಾಜ್ಯದ ಪಾಲನ್ನು ಮಾತ್ರ ಕೇಳುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮಾತಿನ ಚಕಮಕಿ: ಚರ್ಚೆ ವೇಳೆ ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಆರ್‌ಎಸ್ ಮತ್ತು ಬಿಜೆಪಿ ನಡುವೆ ಮಾತಿನ ಚಕಮಕಿ ನಡೆಯಿತು.

ದೆಹಲಿಯಲ್ಲಿ ಸಿಎಂ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ನಿರಶನ ಕೈಗೊಳ್ಳುವಂತೆ ಬಿಆರ್‌ಎಸ್ ಶಾಸಕ ಕೆ.ಟಿ.ರಾಮರಾವ್ ಸೂಚಿಸಿದರು. ವಿಪಕ್ಷ ನಾಯಕ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರೂ ಉಪವಾಸದಲ್ಲಿ ಪಾಲ್ಗೊಳ್ಳಬೇಕು ಎಂದು ರೇವಂತ್ ರೆಡ್ಡಿ ಹೇಳಿದರು.

ತೆಲಂಗಾಣ ಪ್ರವಾಸದ ವೇಳೆ ರೇವಂತ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣ್ಣ ಎಂದು ಸಂಬೋಧಿಸಿದ್ದರೂ, ರಾಜ್ಯಕ್ಕೆ ಅನ್ಯಾಯವಾಗಿದೆ ಎಂಬ ರಾಮರಾವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ʻನೋಟು ಅಮಾನ್ಯೀಕರಣ, ಜಿಎಸ್‌ಟಿ, ರಾಷ್ಟ್ರಪತಿ/ ಉಪರಾಷ್ಟ್ರಪತಿ ಚುನಾವಣೆ ಮತ್ತು ಎನ್‌ಡಿಎಗೆ ಬಿಆರ್‌ಎಸ್ ಬೆಂಬಲ ನೀಡಿದೆ,ʼ ಎಂದು ಹೇಳಿದರು.

ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವ ನಿರ್ಣಯಕ್ಕೆ ತಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ರಾಮರಾವ್‌ ಹೇಳಿದರು.

ಸ್ಥಾನ ಉಳಿಸಿಕೊಳ್ಳಲು ಆರೋಪ: ʻಕೇಂದ್ರದ ಮೇಲೆ ಆರೋಪ ಹೊರಿಸಿ, ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ರೇವಂತ್ ರೆಡ್ಡಿ ಯತ್ನಿಸುತ್ತಿದ್ದಾರೆ,ʼ ಎಂದು ಬಿಜೆಪಿ ಪಕ್ಷದ ನಾಯಕ ಮಹೇಶ್ವರ್ ರೆಡ್ಡಿ ಆರೋಪಿಸಿದರು.

ʻಯುಪಿಎ ಘೋಷಿಸಿದಂತೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದ್ದರೆ, ಕೈಗಾರಿಕೆಗಳು ತೆಲಂಗಾಣದಿಂದ ಹೊರಹೋಗುತ್ತವೆ. ರಾಮಗುಂಡಂನಲ್ಲಿ ರಸಗೊಬ್ಬರ ಸ್ಥಾವರ, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ, ರೈಲ್ವೆ ಜಾಲ ಮತ್ತು 80,000 ಕೋಟಿ ರೂ. ಪ್ರಸ್ತುತ ಯೋಜನೆಗಳು ಬಿಜೆಪಿ ಕೊಡುಗೆ. ನಿರ್ಣಯವನ್ನು ಹಿಂಪಡೆಯಬೇಕು. ಇದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ,ʼ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಇತರ ರಾಜ್ಯ ಸಚಿವರು, ಬಿಆರ್‌ಎಸ್, ಎಐಎಂಐಎಂ, ಸಿಪಿಐ ಸದಸ್ಯರು ಮಾತನಾಡಿದರು.

Read More
Next Story