
ಚಿತ್ರ ಕೃಪೆ- ಎಕ್ಸ್ ಪೋಸ್ಟ್ನಿಂದ (ಸಂಗ್ರಹ ಚಿತ್ರ)
ಬಾಂಬ್ ಸ್ಫೋಟ ಪ್ರಕರಣ: ಯಾಸಿನ್ ಭಟ್ಕಳ್ ಸೇರಿ ಐವರ ಮರಣದಂಡನೆ ಶಿಕ್ಷೆ ಎತ್ತಿ ಹಿಡಿದ ತೆಲಂಗಾಣ ಹೈಕೋರ್ಟ್
2013 ರ ಫೆಬ್ರವರಿ 21 ರಂದು ಹೈದರಾಬಾದ್‌ನ ದಿಲ್‌ಸುಖ್‌ನಗರ್‌ನ ಜನನಿಬಿಡ ಪ್ರದೇಶದಲ್ಲಿ ಎರಡು ಭೀಕರ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಈ ದಾಳಿಯಲ್ಲಿ 18 ಜನರು ಮೃತಪಟ್ಟಿದ್ದರು. ಇವರಲ್ಲಿ ತುಂಬು ಗರ್ಭಿಣಿಯೂ ಇದ್ದಳು. ಘಟನೆಯನ್ನು 131 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
2013ರಲ್ಲಿ ಹೈದರಾಬಾದ್‌ನ ದಿಲ್‌ಸುಖ್‌ನಗರದಲ್ಲಿ ಸಂಭವಿಸಿದ್ದ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ಸೇರಿದಂತೆ ಐವರು ಉಗ್ರರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್ ಏಪ್ರಿಲ್ 8ರಂದು ಎತ್ತಿಹಿಡಿದಿದೆ. ಈ ಐವರು ದೋಷಿಗಳು ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
2013 ರ ಫೆಬ್ರವರಿ 21 ರಂದು ಹೈದರಾಬಾದ್‌ನ ದಿಲ್‌ಸುಖ್‌ನಗರ್‌ನ ಜನನಿಬಿಡ ಪ್ರದೇಶದಲ್ಲಿ ಎರಡು ಭೀಕರ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಈ ದಾಳಿಯಲ್ಲಿ 18 ಜನರು ಮೃತಪಟ್ಟಿದ್ದರು. ಇವರಲ್ಲಿ ತುಂಬು ಗರ್ಭಿಣಿಯೂ ಇದ್ದಳು. ಘಟನೆಯನ್ನು 131 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದಾಳಿಯನ್ನು ನಿಷೇಧಿತ ಉಗ್ರ ಸಂಘಟನೆ ಭಾರತೀಯ ಮುಜಾಹಿದೀನ್ (ಐಎಂ) ಸಂಘಟಿಸಿತ್ತು ಎಂಬುದು ಎನ್‌ಐಎ ತನಿಖೆಯಲ್ಲಿ ಬಹಿರಂಗವಾಗಿತ್ತು. ಆದರೆ, ಮುಖ್ಯ ರೂವಾರಿ ರಿಯಾಜ್ ಭಟ್ಕಳ್ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಆದರೆ ಎನ್‌ಐಎ ಬಂಧಿಸಿದ್ದ ಅಸದುಲ್ಲಾ ಅಖ್ತರ್ (ಹದ್ದಿ), ಜಿಯಾ ಉರ್ ರೆಹಮಾನ್, ಮೊಹಮ್ಮದ್ ತಹಸೀನ್ ಅಖ್ತರ್, ಮೊಹಮ್ಮದ್ ಅಹ್ಮದ್ ಸಿದ್ದಿಬಾಪಾ (ಯಾಸಿನ್ ಭಟ್ಕಳ್), ಐಜಾಜ್ ಶೇಖ್ರನ್ನ ವಿಚಾರಣೆ ನಡೆಸಿದ್ದ ಎನ್‌ಐಎ ನ್ಯಾಯಾಲಯವು 2016 ರ ಡಿಸೆಂಬರ್ 16ರಂದು ಮರಣದಂಡನೆ ವಿಧಿಸಿತ್ತು.
ಉಗ್ರರು ಭಾರತದ ವಿರುದ್ಧ ಯುದ್ಧ ಸಾರಲು ಉಗ್ರಗಾಮಿ ಚಟುವಟಿಕೆಗಳನ್ನು ರೂಪಿಸಿದ್ದರು ಎಂದು ಎನ್‌ಐಎ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿತ್ತು. ಸೈಕಲ್‌ಗಳ ಮೇಲೆ ಇರಿಸಲಾಗಿದ್ದ ಇಂಪ್ರೊವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್ (ಐಇಡಿ) ಅನ್ನು ಸ್ಫೋಟಕ್ಕೆ ಬಳಸಲಾಗಿತ್ತು. ಅದರಲ್ಲಿ ಉಕ್ಕಿನ ಮೊಳೆಗಳು, ಬೋಲ್ಟ್‌ಗಳು ಮತ್ತು ಅಮೋನಿಯಂ ನೈಟ್ರೇಟ್ ತುಂಬಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದರು. ಮೊದಲ ಸ್ಫೋಟವು ದಿಲ್‌ಸುಖ್‌ನಗರ್‌ದ ಬಸ್ ನಿಲ್ದಾಣದ ಬಳಿ ಸಂಭವಿಸಿದ್ದು, ಎರಡನೇ ಸ್ಫೋಟವು ಎ1 ಮಿರ್ಚಿ ಸೆಂಟರ್ ಸಮೀಪ ನಡೆದಿತ್ತು.
ಹೈಕೋರ್ಟ್‌ನ ತೀರ್ಪಿನಲ್ಲಿ ಏನಿದೆ?
ನ್ಯಾಯಮೂರ್ತಿ ಕೆ. ಲಕ್ಷ್ಮಣ್ ಮತ್ತು ನ್ಯಾಯಮೂರ್ತಿ ಪಿ. ಶ್ರೀ ಸುಧಾ ಅವರ ದ್ವಿಸದಸ್ಯ ಪೀಠವು ಈ ಪ್ರಕರಣದಲ್ಲಿ ಎರಡು ಪ್ರಮುಖ ಅರ್ಜಿಗಳನ್ನು ವಿಚಾರಣೆಗೆ ಒಳಪಡಿಸಿತು: ಮೊದಲನೆಯದು ಮರಣದಂಡನೆಯ ದೃಢೀಕರಣಕ್ಕಾಗಿ ಸೆಷನ್ಸ್ ನ್ಯಾಯಾಧೀಶರಿಂದ ಮಾಡಲಾದ ಉಲ್ಲೇಖ, ಮತ್ತು ಎರಡನೆಯದು ದೋಷಿಗಳು ತಮ್ಮ ಶಿಕ್ಷೆಯನ್ನು ರದ್ದುಗೊಳಿಸುವಂತೆ ಸಲ್ಲಿಸಿದ ಮನವಿ. ತನಿಖಾಧಿಕಾರಿಗಳು ಮತ್ತು ಅರ್ಜಿದಾರರ ಪರ ವಕೀಲರ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ಹೈಕೋರ್ಟ್ ಎನ್‌ಐಎ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು. ಈ ಘಟನೆಯ ಗಂಭೀರತೆ ಮತ್ತು ಸಾಕ್ಷ್ಯಗಳ ವಿಶ್ವಾಸಾರ್ಹತೆಯನ್ನು ಒತ್ತಿಹೇಳಿತು.
ಯಾಸಿನ್ ಭಟ್ಕಳ್ ಕರ್ನಾಟಕ ನಂಟು
ಸೈಯದ್ ಮೊಹಮ್ಮದ್ ಅಹ್ಮದ್ ಜರಾರ್ ಸಿದ್ದಿಬಾಪಾ ಅಲಿಯಾಸ್ ಯಾಸಿನ್ ಭಟ್ಕಳ್ ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದೀನ್ (IM) ನ ಸಹ-ಸಂಸ್ಥಾಪಕ ಮತ್ತು ನಾಯಕನಾಗಿದ್ದ. ಆತ, ರಿಯಾಜ್ ಭಟ್ಕಳ್ ಅಲಿಯಾಸ್ ರಿಯಾಜ್ ಅಹ್ಮದ್ ಮೊಹಮ್ಮದ್ ಇಸ್ಮಾಯಿಲ್ ಶಾಹಬಂತರಿ ಜತೆ ಸೇರಿ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಜತೆ ಭಾರತದ ಹಲವೆಡೆ ಭಯೋತ್ಪಾದನಾ ಕೃತ್ಯಗಳನ್ನು ನಡೆಸಿದ್ದರು. ರಿಯಾಜ್ ಭಟ್ಕಳ್ ಈಗಲೂ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ.
ಮೂಲತಃ ಕರ್ನಾಟಕ ಕರಾವಳಿಯ ಭಟ್ಕಳದ ರಿಯಾಜ್ ಭಟ್ಕಳ್ ಹಾಗೂ ಆತನ ಸೋದರ ಇಕ್ಬಾಲ್ ಭಟ್ಕಳ್ ಹಾಗೂ ಅದೇ ಊರಿನ ಯಾಸಿನ್ ಭಟ್ಕಳ್ ಪಾಕಿಸ್ತಾನದ ಐಎಸ್‌ಐ ಪ್ರೇರಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮೂಲಕ ಬೆಂಗಳೂರು, ಹೈದರಾಬಾದ್, ಮುಂಬಯಿ, ಪುಣೆ, ದೆಹಲಿ ಸೇರಿದಂತೆ ಹಲವು ಕಡೆ ಬಾಂಬ್ ಸ್ಫೋಟಗಳನ್ನು ನಡೆಸುವ ಮೂಲಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ರಿಯಾಜ್, ಇಕ್ಬಾಲ್ ಸೋದರರು ಪಾಕಿಸ್ತಾನದಲ್ಲಿ ತಲೆಮರೆಸಿಕೊಡಿದ್ದು, ಭಾರತೀಯ ಪೊಲೀಸರ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾರೆ.