ತೆಲಂಗಾಣ ಪ್ರವಾಹ | ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ನೆರವು ನೀಡಿ: ಸಿಎಂ ಮನವಿ
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಮತ್ತು ವ್ಯಾಪಕ ವಿನಾಶದಿಂದ ಹೊರಬರಲು ಆರ್ಥಿಕ ನೆರವು ನೀಡುವಂತೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಸೋಮವಾರ (ಸೆಪ್ಟೆಂಬರ್ 2) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಕ್ಷಣದ ನೆರವಿಗೆ ಔಪಚಾರಿಕ ಮನವಿಯೊಂದಿಗೆ, ಕೇಂದ್ರಕ್ಕೆ ಹಾನಿಯ ವಿವರವಾದ ವರದಿಯನ್ನು ಸಲ್ಲಿಸುವಂತೆ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ತಿಳಿಸಿದರು. ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಮನವಿ ಮಾಡಿದರು.
ಪರಿಹಾರ ಮೊತ್ತ ಹೆಚ್ಚಳ: ಹೈದರಾಬಾದಿನಲ್ಲಿ ನಡೆದ ಸಭೆಯಲ್ಲಿ ರೇವಂತ್ ರೆಡ್ಡಿ ಅವರು ಮಳೆ ಮತ್ತು ಪ್ರವಾಹ ಪರಿಹಾರ ಕಾರ್ಯ ಗಳನ್ನು ಪರಿಶೀಲಿಸಿದರು. ಪ್ರವಾಹದಲ್ಲಿ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಧನಸಹಾಯವನ್ನು 4 ಲಕ್ಷದಿಂದ 5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಘೋಷಿಸಿದರು. ಜಾನುವಾರು, ಮೇಕೆ, ಕುರಿಗಳಿಗೆ ಅಧಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಖಮ್ಮಂ, ಭದ್ರಾದ್ರಿ ಕೊತಗುಡೆಂ, ಮಹಬೂಬಾಬಾದ್ ಮತ್ತು ಸೂರ್ಯಪೇಟ್ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಕ್ಷಣದ ಪರಿಹಾರ 5 ಕೋಟಿ ರೂ., ಮಂಜೂರು ಮಾಡಿದರು.