
ದುಬೈನಲ್ಲಿ ತೇಜಸ್ ದುರಂತ: 'ಸಾಹಸಕ್ಕೆ ಬಲಿಯಾಯಿತೇ ಭಾರತದ ಹೆಮ್ಮೆಯ ಲೋಹದ ಹಕ್ಕಿ?
ಈ ದುರಂತದ ಕೊನೆಯ ಕ್ಷಣಗಳನ್ನು ವಿಶ್ಲೇಷಿಸಿರುವ ವಾಯುಯಾನ ತಜ್ಞರು, ಪೈಲಟ್ 'ಬ್ಯಾರೆಲ್ ರೋಲ್' (Barrel Roll) ಎಂಬ ಸಾಹಸಮಯ ಕಸರತ್ತು ನಡೆಸುವಾಗ ಈ ಅವಘಡ ಸಂಭವಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿನಾದ್ಯಂತ ಭಾರತದ ರಕ್ಷಣಾ ಸಾಮರ್ಥ್ಯವನ್ನು ಸಾರಬೇಕಿದ್ದ ಕ್ಷಣವೊಂದು ದುರಂತದಲ್ಲಿ ಅಂತ್ಯಗೊಂಡಿದೆ. ಶುಕ್ರವಾರ ದುಬೈನಲ್ಲಿ ನಡೆದ ಪ್ರತಿಷ್ಠಿತ ಏರ್‌ಶೋನಲ್ಲಿ (Dubai Airshow 2025) ಭಾರತೀಯ ವಾಯುಪಡೆಯ 'ತೇಜಸ್' (LCA Tejas) ಲಘು ಯುದ್ಧ ವಿಮಾನ ಪತನಗೊಂಡು, ಸ್ಕ್ವಾಡ್ರನ್ ಲೀಡರ್ ನಮನ್ ಸ್ಯಾಲ್ ಹುತಾತ್ಮರಾಗಿದ್ದಾರೆ. ಆದರೆ, ಅತ್ಯಂತ ಸುರಕ್ಷಿತ ಎಂದು ನಂಬಲಾಗಿದ್ದ ತೇಜಸ್, ಇದ್ದಕ್ಕಿದ್ದಂತೆ ಪತನಗೊಂಡಿದ್ದು ಹೇಗೆ? ಎಂಬ ಪ್ರಶ್ನೆ ಈಗ ಜಗತ್ತನ್ನೇ ಕಾಡುತ್ತಿದೆ.
ಈ ದುರಂತದ ಕೊನೆಯ ಕ್ಷಣಗಳನ್ನು ವಿಶ್ಲೇಷಿಸಿರುವ ವಾಯುಯಾನ ತಜ್ಞರು, ಪೈಲಟ್ 'ಬ್ಯಾರೆಲ್ ರೋಲ್' (Barrel Roll) ಎಂಬ ಸಾಹಸಮಯ ಕಸರತ್ತು ನಡೆಸುವಾಗ ಈ ಅವಘಡ ಸಂಭವಿಸಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಏನಿದು ಬ್ಯಾರೆಲ್ ರೋಲ್? ಏನಾಯ್ತು ಕೊನೆಯ ಕ್ಷಣದಲ್ಲಿ?
ಸ್ಥಳೀಯ ಕಾಲಮಾನ ಮಧ್ಯಾಹ್ನ 2.08ಕ್ಕೆ ತೇಜಸ್ ಆಗಸದಲ್ಲಿ ಹಾರಾಟ ನಡೆಸುತ್ತಿತ್ತು. ಈ ವೇಳೆ ಪೈಲಟ್ 'ಬ್ಯಾರೆಲ್ ರೋಲ್' ಮಾಡಲು ಪ್ರಯತ್ನಿಸಿದ್ದಾರೆ. ಇದು ವಿಮಾನವನ್ನು ಸಂಪೂರ್ಣವಾಗಿ ತಲೆಕೆಳಗಾಗಿ ತಿರುಗಿಸಿ (360 ಡಿಗ್ರಿ ಅಕ್ಷೀಯ ತಿರುವು), ಮತ್ತೆ ನೇರ ಸ್ಥಿತಿಗೆ ತರುವ ಪ್ರಕ್ರಿಯೆ.
ವಿಮಾನವು ಮೇಲಕ್ಕೆ ಏರಿ (Pull up), ತಲೆಕೆಳಗಾಗಿ (Inverted), ನಂತರ ಕೆಳಕ್ಕೆ ಇಳಿದು (Nosedive) ಮತ್ತೆ ಮೇಲೇರಬೇಕಿತ್ತು. ಆದರೆ, ದುರದೃಷ್ಟವಶಾತ್ ವಿಮಾನವು ಕೆಳಕ್ಕೆ ಇಳಿದ ನಂತರ ಮತ್ತೆ ಮೇಲೇರಲು ವಿಫಲವಾಯಿತು. ಭೂಮಿಗೆ ತೀರಾ ಹತ್ತಿರದಲ್ಲಿದ್ದ ಕಾರಣ ಮತ್ತು ಮೇಲೇರಲು ಅಗತ್ಯವಾದ ವೇಗ ಇಲ್ಲದ ಕಾರಣ (Lack of speed and altitude), ವಿಮಾನ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಿತು. ದಟ್ಟವಾದ ಕಪ್ಪು ಹೊಗೆ ಆವರಿಸಿತು.
ತಾಂತ್ರಿಕ ದೋಷದ ಶಂಕೆ
ಈ ಪತನಕ್ಕೆ ಕೇವಲ ಮಾನವ ತಪ್ಪು ಕಾರಣವೇ ಅಥವಾ ತಾಂತ್ರಿಕ ದೋಷವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಜ್ಞರ ಪ್ರಕಾರ, ಎಂಜಿನ್ ಫ್ಲೇಮ್‌ಔಟ್ (Engine Flameout) ಅಥವಾ ಎಂಜಿನ್ ವೈಫಲ್ಯವೂ ಇದಕ್ಕೆ ಕಾರಣವಾಗಿರಬಹುದು. ಅಂದರೆ, ನಿರ್ಣಾಯಕ ಸಮಯದಲ್ಲಿ ಎಂಜಿನ್ ಶಕ್ತಿ ಕಳೆದುಕೊಂಡಿರಬಹುದು.
'ಆಯಿಲ್ ಲೀಕ್' ವದಂತಿ ಮತ್ತು ದುರಂತದ ಕಾಕತಾಳೀಯ
ಗಮನಾರ್ಹ ಸಂಗತಿಯೆಂದರೆ, ಈ ದುರಂತ ಸಂಭವಿಸುವ ಕೇವಲ ಒಂದು ದಿನದ ಮುಂಚೆ ತೇಜಸ್ ವಿಮಾನದಲ್ಲಿ 'ಆಯಿಲ್ ಲೀಕ್' (Oil Leak) ಇದೆ ಎಂಬ ಸುದ್ದಿ ಹರಿದಾಡಿತ್ತು. ಇದನ್ನು ಭಾರತ ಸರ್ಕಾರ ಸುಳ್ಳು ಸುದ್ದಿ ಎಂದು ತಳ್ಳಿಹಾಕಿತ್ತು. ಆದರೆ, ಅದರ ಬೆನ್ನಲ್ಲೇ ವಿಮಾನ ಪತನವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತೇಜಸ್ ಇತಿಹಾಸ ಮತ್ತು ಭವಿಷ್ಯ
ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಿಸಿರುವ ತೇಜಸ್, ಕಳೆದ 24 ವರ್ಷಗಳಲ್ಲಿ ಕಂಡ ಎರಡನೇ ಪತನ ಇದಾಗಿದೆ. ಅಮೆರಿಕದ ಜನರಲ್ ಎಲೆಕ್ಟ್ರಿಕ್ (GE) ಎಂಜಿನ್ ಹೊಂದಿರುವ ಈ ವಿಮಾನ, ಮಿಗ್-21ರ ಸ್ಥಾನ ತುಂಬಲು ಸಜ್ಜಾಗಿತ್ತು. ಅತ್ಯಂತ ಸುರಕ್ಷಿತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದ ತೇಜಸ್, ಈಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಎಡವಿರುವುದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ.
ವಾಯುಪಡೆ ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಕೋರ್ಟ್ ಆಫ್ ಎಂಕ್ವೈರಿ ವರದಿ ಬಂದ ನಂತರವಷ್ಟೇ ಸತ್ಯಾಂಶ ಹೊರಬರಲಿದೆ.

