
Tej Pratap Yadav Expelled | ಆರ್‌ಜೆಡಿ ಪಕ್ಷದಿಂದ ತಮ್ಮ ಪುತ್ರನನ್ನೇ ಉಚ್ಛಾಟನೆ ಮಾಡಿದ ಲಾಲು ಪ್ರಸಾದ್ ಯಾದವ್
ತೇಜ್ ಪ್ರತಾಪ್ ಯಾದವ್ ಯುವತಿಯೊಂದಿಗೆ ಕಾಣಿಸಿಕೊಂಡ ಫೇಸ್ ಬುಕ್ ಪೋಸ್ಟ್ ಬೆಳಕಿಗೆ ಬಂದ ನಂತರ ಆರ್‌ಜೆಡಿ ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡಲಾಗಿದೆ.
ಬಿಹಾರದ ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಭಾನುವಾರ ತಮ್ಮ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಆರು ವರ್ಷಗಳವರೆಗೆ ಉಚ್ಛಾಟಿಸಿದ್ದಾರೆ. ತಮ್ಮ ಕುಟುಂಬದ ಜತೆ ಸಂಬಂಧ ಕಡಿದುಕೊಳ್ಳಲು ಬೇಜವಾಬ್ದಾರಿ ವರ್ತನೆಯೇ ಕಾರಣ ಎಂದು ʼಎಕ್ಸ್ʼನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ತೇಜ್ ಪ್ರತಾಪ್ ಯಾದವ್ ಯುವತಿಯೊಂದಿಗೆ ಕಾಣಿಸಿಕೊಂಡ ಪೋಸ್ಟ್ ಫೇಸ್ ಬುಕ್‌ನಲ್ಲಿ ಬೆಳಕಿಗೆ ಬಂದ ಮರುದಿನವೇ ಲಾಲು ಪ್ರಸಾದ್ ಕುಟುಂಬದಲ್ಲಿ ಈ ಬೆಳವಣಿಗೆ ನಡೆದಿದೆ. ಆದಾಗ್ಯೂ, ಫೇಸ್‌ಬುಕ್‌ನಲ್ಲಿ ತಾನು ಯಾವುದೇ ಯುವತಿಯೊಂದಿಗಿನ ಪೋಸ್ಟ್ ಹಂಚಿಕೊಂಡಿಲ್ಲ, ನನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರೂ ಪಕ್ಷದಿಂದ ಉಚ್ಛಾಟಿಸಿರುವುದು ಕುತೂಹಲ ಮೂಡಿಸಿದೆ.
"ತೇಜ್ ಪ್ರತಾಪ್ ಯಾದವ್ ಅವರ ಕೆಲಸ, ಸಾರ್ವಜನಿಕ ಸನ್ನಡತೆ ಹಾಗೂ ಬೇಜವಾಬ್ದಾರಿಯುತ ವರ್ತನೆಯು ಕುಟುಂಬದ ಸಂಪ್ರದಾಯಗಳಿಗೆ ವಿರುದ್ಧವಾಗಿದೆ" ಎಂದು ಲಾಲು ಪ್ರಸಾದ್ ಯಾದವ್ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಬೇಜಾವಾಬ್ದಾರಿಯ ನಡವಳಿಕೆ
ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿ ಸಾಮಾಜಿಕ ಹೋರಾಟದೆಡೆಗಿನ ಪಕ್ಷದ ಸಾಂಘಿಕ ಹೋರಾಟವನ್ನು ತೇಜ್ ಪ್ರತಾಪ್ ದುರ್ಬಲಗೊಳಿಸಿದ್ದಾರೆ. ಕುಟುಂಬದ ಸಭ್ಯತೆ ಹಾಗೂ ಮೌಲ್ಯಗಳಿಗೆ ಹಿರಿಯ ಮಗನ ನಡವಳಿಕೆ ಅನುಗುಣವಾಗಿಲ್ಲ. ಹಾಗಾಗಿ ಪಕ್ಷ ಹಾಗೂ ಕುಟುಂಬದಿಂದ ಅವರನ್ನು ಹೊರಗಿಡಲಾಗಿದೆ. ಈ ಕ್ಷಣದಿಂದಕಲೇ ಕುಟುಂಬ ಹಾಗೂ ಪಕ್ಷದಲ್ಲಿ ತೇಜ್ ಯಾವುದೇ ಪಾತ್ರ ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಮಸಿ ಬಳಿಯುವ ಪ್ರಯತ್ನ: ತೇಜ್ ಪ್ರತಾಪ್
ನನ್ನ ಸಾಮಾಜಿಕ ಜಾಲತಾಣದ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ನನ್ನ ಭಾವಚಿತ್ರಗಳನ್ನು ವಿರುಪಗೊಳಿಸಿ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ತೇಜ್ ಪ್ರತಾಪ್ ಯಾದವ್ ಆರೋಪಿಸಿದ್ದಾರೆ.
ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಅನುಷ್ಕಾ ಯಾದವ್ ಹಾಗೂ ನಾನು 12 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ನಮ್ಮ ಪ್ರೀತಿಯು ಸಂಬಂಧದವರೆಗೂ ಬಂದಿದೆ ಎಂದು ಉಲ್ಲೇಖಿಸಲಾಗಿದೆ.
ಪೋಸ್ಟ್‌ಗೆ ಹೆಚ್ಚಿದ ಆಕ್ರೋಶ
ತೇಜ್ ಪ್ರತಾಪ್ ಯಾದವ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೇಜ್ ಪ್ರತಾಪ್ ಯಾದವ್ ಅವರು 2018 ರಲ್ಲೇ ಐಶ್ವರ್ಯ ರಾಯ್ ಅವರೊಂದಿಗೆ ವಿವಾಹವಾಗಿದ್ದಾರೆ ಎಂದು ಹಲವು ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ತೇಜ್ ಪ್ರತಾಪ್ ಯಾದವ್ ಅವರು ಬಿಹಾರ ಮಾಜಿ ಸಿಎಂ ದರೋಗಾ ಪ್ರಸಾದ್ ರೈ ಅವರ ಮೊಮ್ಮಗಳಾದ ಐಶ್ವರ್ಯ ರಾಯ್ ಅವರನ್ನು ಮದುವೆಯಾಗಿದ್ದರು. ಕೆಲ ತಿಂಗಳ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಐಶ್ವರ್ಯ ಮನೆ ಬಿಟ್ಟು ಹೋಗಿದ್ದರು.
ತಮ್ಮ ಫೇಸ್ ಬುಕ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ತೇಜ್ ಪ್ರತಾಪ್ ಯಾದವ್ ಪೊಲೀಸರಿಗೆ ದೂರು ನೀಡಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಕಾಯಕರ್ತರಿಗೆ ಮನವಿ ಮಾಡಿದ್ದಾರೆ.