
ಪಂದ್ಯ ಗೆದ್ದ ಸಂಭ್ರಮದಲ್ಲಿ ದಕ್ಷಿಣ ಆಫ್ರಿಕಾ ತಂಡದ ಆಟಗಾರರು.
ತವರು ನೆಲದಲ್ಲಿ ಟೀಂ ಇಂಡಿಯಾಗೆ ಮತ್ತೆ ಮುಖಭಂಗ; 25 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾಗೆ ಐತಿಹಾಸಿಕ ಟೆಸ್ಟ್ ಸರಣಿ ಜಯ!
ಭಾರತ ತಂಡವು ಗೆಲುವಿಗೆ ಅಗತ್ಯವಿದ್ದ 549 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು. ದಕ್ಷಿಣ ಆಫ್ರಿಕಾದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿದ ಭಾರತ, ಕೇವಲ 140 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಶರಣಾಯಿತು.
ತವರು ನೆಲದಲ್ಲಿ ಟೀಂ ಇಂಡಿಯಾದ ಪ್ರಾಬಲ್ಯ ಮತ್ತೊಮ್ಮೆ ಮಣ್ಣುಗೂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 408 ರನ್‌ಗಳ ಹೀನಾಯ ಸೋಲು ಅನುಭವಿಸುವ ಮೂಲಕ ಭಾರತ ಸರಣಿಯನ್ನು 0-2 ಅಂತರದಲ್ಲಿ ಕೈಚೆಲ್ಲಿದೆ. ಈ ಮೂಲಕ ತವರು ನೆಲದಲ್ಲಿ ಸತತ ವೈಟ್‌ವಾಶ್ ಮುಖಭಂಗಕ್ಕೆ ಒಳಗಾಗಿದೆ.
ಬುಧವಾರ (ನ.26) ನಡೆದ ಪಂದ್ಯದ ಐದನೇ ಹಾಗೂ ಅಂತಿಮ ದಿನದಾಟದಲ್ಲಿ ಭಾರತ ತಂಡವು ಗೆಲುವಿಗೆ ಅಗತ್ಯವಿದ್ದ 549 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು. ದಕ್ಷಿಣ ಆಫ್ರಿಕಾದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿದ ಭಾರತ, ಕೇವಲ 140 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಶರಣಾಯಿತು.
ಭಾರತಕ್ಕೆ ಅತಿದೊಡ್ಡ ಸೋಲು
ರನ್ ಅಂತರದಲ್ಲಿ ಇದು ಭಾರತದ ಟೆಸ್ಟ್ ಇತಿಹಾಸದಲ್ಲೇ ಅತಿದೊಡ್ಡ ಸೋಲು ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 30 ರನ್‌ಗಳಿಂದ ಸೋತಿದ್ದ ಭಾರತ, ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲೂ ಚೇತರಿಸಿಕೊಳ್ಳಲಾಗದೆ ಸರಣಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ದಕ್ಷಿಣ ಆಫ್ರಿಕಾ ತಂಡವು ಭಾರತದಲ್ಲಿ 25 ವರ್ಷಗಳ ಬಳಿಕ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ.
ಜಡೇಜಾ ಒಂಟಿ ಹೋರಾಟ
ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತದ ಪರ ರವೀಂದ್ರ ಜಡೇಜಾ (87 ಎಸೆತಗಳಲ್ಲಿ 54 ರನ್) ಒಬ್ಬರೇ ದಿಟ್ಟ ಹೋರಾಟ ಪ್ರದರ್ಶಿಸಿದರು. ಆದರೆ ಅವರಿಗೆ ಉಳಿದ ಬ್ಯಾಟರ್‌ಗಳಿಂದ ಸರಿಯಾದ ಸಾಥ್ ಸಿಗಲಿಲ್ಲ. ಸಾಯಿ ಸುದರ್ಶನ್ 138 ಎಸೆತಗಳನ್ನು ಎದುರಿಸಿ ಕೇವಲ 14 ರನ್ ಗಳಿಸಿದರೂ, ಕ್ರೀಸ್‌ನಲ್ಲಿ ನೆಲೆಯೂರಲು ಪರದಾಡಿದರು. ಅಂತಿಮವಾಗಿ ಸೆನುರಾನ್ ಮುತ್ತುಸಾಮಿ ಅವರ ಬೌಲಿಂಗ್‌ನಲ್ಲಿ ಏಡನ್ ಮಾರ್ಕ್ರಾಮ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.
ಗಂಭೀರ್ ತಂತ್ರಗಾರಿಕೆಗೆ 'ಗಂಭೀರ' ಪೆಟ್ಟು
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಂತ್ರಗಾರಿಕೆ ಮತ್ತು ಆಟಗಾರರ ಆಯ್ಕೆ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಕೇವಲ 13 ತಿಂಗಳ ಅಂತರದಲ್ಲಿ ಭಾರತ ತವರಿನಲ್ಲಿ ಎರಡನೇ ಬಾರಿಗೆ ವೈಟ್‌ವಾಶ್ ಆಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ಕನಸಿಗೆ ದೊಡ್ಡ ಪೆಟ್ಟು ಬಿದ್ದಿದೆ. ಗಂಭೀರ್ ನೇತೃತ್ವದಲ್ಲಿ ಭಾರತ ತವರಿನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟು 5 ಟೆಸ್ಟ್ ಪಂದ್ಯಗಳನ್ನು ಸೋತಂತಾಗಿದೆ. ಕಳೆದ 66 ವರ್ಷಗಳಲ್ಲಿ 7 ತಿಂಗಳ ಅವಧಿಯಲ್ಲಿ ಭಾರತ 5 ಟೆಸ್ಟ್ ಸೋತಿರುವುದು ಇದೇ ಮೊದಲು.
ದಕ್ಷಿಣ ಆಫ್ರಿಕಾದ ಸಂಘಟಿತ ಆಟ
ದಕ್ಷಿಣ ಆಫ್ರಿಕಾ ಪರ ಆಫ್‌ಸ್ಪಿನ್ನರ್ ಸೈಮನ್ ಹಾರ್ಮರ್ (6/37) ಎರಡನೇ ಇನಿಂಗ್ಸ್‌ನಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿದರು. ಒಟ್ಟಾರೆ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ ಹಾರ್ಮರ್, ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಏಡನ್ ಮಾರ್ಕ್ರಾಮ್ ಒಂದೇ ಟೆಸ್ಟ್‌ನಲ್ಲಿ 9 ಕ್ಯಾಚ್ ಹಿಡಿಯುವ ಮೂಲಕ ಅಜಿಂಕ್ಯ ರಹಾನೆ (8 ಕ್ಯಾಚ್) ಹೆಸರಲ್ಲಿದ್ದ ದಾಖಲೆಯನ್ನು ಮುರಿದರು. ಮಾರ್ಕೊ ಜಾನ್ಸನ್ ಅವರ ಆಲ್‌ರೌಂಡ್ ಆಟ ಮತ್ತು ಅಮೋಘ ಫೀಲ್ಡಿಂಗ್ ಪ್ರವಾಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಯುವಪಡೆ ವಿಫಲ
ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಯುವ ಆಟಗಾರರು ಸ್ಪಿನ್ ಬೌಲಿಂಗ್ ಎದುರಿಸುವಲ್ಲಿನ ತಾಂತ್ರಿಕ ದೋಷಗಳು ಎದ್ದು ಕಂಡವು. ಸ್ಪಿನ್ನರ್ಸ್ ಕೈಚಳಕವನ್ನು ಅರಿಯುವಲ್ಲಿನ ವೈಫಲ್ಯ ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

