
2047ಕ್ಕೆ ವಾರ್ಷಿಕ 500 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ: ಕೇಂದ್ರ ಸಚಿವ ಹೆಚ್‌ಡಿಕೆ ಭರವಸೆ
ಸಣ್ಣ ಗಾತ್ರದ ಉಕ್ಕು ವಲಯವು ಕೇವಲ ಒಂದು ಉದ್ಯಮವಲ್ಲ. ಇದು ದೇಶಿಯ ಕೈಗಾರಿಕೀಕರಣದ ಬೆನ್ನೆಲು. ಇದು ಸ್ಥಳೀಯ ಆರ್ಥಿಕತೆಗೆ ಶಕ್ತಿ ನೀಡುತ್ತಿದೆ ಹಾಗೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದೆ ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸಣ್ಣ ಪ್ರಮಾಣದ ಉಕ್ಕು ಉತ್ಪಾದಿತ ಕ್ಷೇತ್ರವು ರಾಷ್ಟ್ರದ ಅಭಿವೃದ್ಧಿಯ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದ್ದು, 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಮತ್ತು 2047ರ ವೇಳೆಗೆ 500 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಕಾರ್ಯಸೂಚಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನವದೆಹಲಿಯ ವಿಜ್ಞಾನ ಭವನದಲ್ಲಿ ಸಣ್ಣ ಪ್ರಮಾಣದ ಉಕ್ಕು ಕೈಗಾರಿಕೆಗಳ ಸವಾಲುಗಳ ಕುರಿತು ಉಕ್ಕು ಸಚಿವಾಲಯ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಉಕ್ಕು ವಲಯದ ಒಟ್ಟು ಉತ್ಪಾದನೆಯ ಶೇ.50 ರಷ್ಟನ್ನು ಉತ್ಪಾದಿಸುತ್ತಿರುವ ಸಣ್ಣ ಪ್ರಮಾಣದ ಉಕ್ಕು ಕೈಗಾರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದರು.
ಸಣ್ಣ ಗಾತ್ರದ ಉಕ್ಕು ವಲಯವು ಕೇವಲ ಒಂದು ಉದ್ಯಮವಲ್ಲ. ಇದು ದೇಶಿಯ ಕೈಗಾರಿಕೀಕರಣದ ಬೆನ್ನೆಲು. ಇದು ಸ್ಥಳೀಯ ಆರ್ಥಿಕತೆಗೆ ಶಕ್ತಿ ನೀಡುತ್ತಿದೆ ಹಾಗೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದೆ. ಸಮಗ್ರ ಬೆಳವಣಿಗೆಗೆ ಉತ್ತೇಜನ ನೀಡುತ್ತಿರುವುದು ಮಾತ್ರವಲ್ಲದೆ, ದೇಶವನ್ನು ಶೂನ್ಯ ಇಂಗಾಲ ಬಿಡುಗಡೆ ಹಾಗೂ ಉಕ್ಕು ವಲಯದಲ್ಲಿ ಜಾಗತಿಕ ಸುಸ್ಥಿರ ರಾಷ್ಟ್ರವನ್ನಾಗಿ ಹೊರಹೊಮ್ಮಿಸಲು ದೃಢನಿಶ್ಚಯ ಮಾಡಿದ್ದೇವೆ ಎಂದು ಹೇಳಿದರು.
ವಿಶೇಷ ಉಕ್ಕಿಗಾಗಿ ಪಿಎಲ್‌ಐ ಯೋಜನೆ, ಹಸಿರು ಉಕ್ಕು ಪ್ರಮಾಣೀಕರಣ ರೇಟಿಂಗ್ ವ್ಯವಸ್ಥೆ, ಹೈಡ್ರೋಜನ್ ಆಧರಿತ ಉಕ್ಕು ತಯಾರಿಕೆ ಯೋಜನೆಗಳು ಮತ್ತು ಉಕ್ಕಿನ ಸ್ಕ್ರ್ಯಾಪ್ ಮರುಬಳಕೆ ನೀತಿ ಸೇರಿದಂತೆ ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ ಎಂದರು.
"ಇಂಧನ ದಕ್ಷತೆಯು ಇನ್ನು ಮುಂದೆ ಐಚ್ಛಿಕವಲ್ಲ. ತ್ಯಾಜ್ಯ ಶಾಖ ಹೆಚ್ಚಳ, ಆತ್ಯಾಧುನಿಕ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಮತ್ತು ನವೀಕರಿಸಬಹುದಾದ ಇಂಧನ ಏಕೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಲ್ಲಿ ನಾವು ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳನ್ನು ಉತ್ತೇಜಿಸುತ್ತೇವೆ ಎಂದು ತಿಳಿಸಿದರು.
"ಮನೆ, ಬೃಹತ್ ಕಟ್ಟಡ, ಹೆದ್ದಾರಿ, ಸೇತುವೆ, ರೇಲ್ವೆ, ವಿಮಾನ, ರಾಕೆಟ್ ಸೇರಿದಂತೆ ರಾಷ್ಟ್ರದ ಭವ್ಯ ಇತಿಹಾಸವನ್ನು ನಿರ್ಮಿಸುವ ಉಕ್ಕು ಕ್ಷೇತ್ರವನ್ನು ನಾವು ಮತ್ತಷ್ಟು ಸಶಕ್ತಗೊಳಿಸಬೇಕಿದೆ. ನೀತಿ, ಉದ್ದೇಶ ಮತ್ತು ನಮ್ಮ ಜನರ ಉತ್ಸಾಹದೊಂದಿಗೆ ನಾವು ಭಾರತವನ್ನು ಜಾಗತಿಕ ಉಕ್ಕಿನ ಶಕ್ತಿ ಕೇಂದ್ರವನ್ನಾಗಿ ಮಾಡುತ್ತೇವೆ" ಎಂದರು.