
ತಮಿಳುನಾಡಿನ ಸರ್ಕಾರಿ ಕೇಬಲ್ ನೆಟ್‌ವರ್ಕ್‌ನಲ್ಲಿ 'ಪುದಿಯ ತಲೈಮುರೈ' ಸ್ಥಗಿತ, ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಆರೋಪ
ಶುಕ್ರವಾರದಿಂದ, 'ಅರಸು ಕೇಬಲ್'ನ ಚಾನೆಲ್ ಸಂಖ್ಯೆ 44ರಲ್ಲಿ ಲಭ್ಯವಿದ್ದ 'ಪುದಿಯ ತಲೈಮುರೈ' ಪ್ರಸಾರವು ಏಕಾಏಕಿ ನಿಂತುಹೋಗಿದ್ದು, ಟಿವಿ ಪರದೆಯ ಮೇಲೆ "ಸಿಗ್ನಲ್ ಇಲ್ಲ" ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ ಎಂದು ರಾಜ್ಯದಾದ್ಯಂತ ವೀಕ್ಷಕರು ದೂರುತ್ತಿದ್ದಾರೆ.
ತಮಿಳುನಾಡಿನ ಪ್ರಮುಖ ಸುದ್ದಿ ವಾಹಿನಿಯಾದ 'ಪುದಿಯ ತಲೈಮುರೈ ಪ್ರಸಾರವನ್ನು ಸರ್ಕಾರಿ ಸ್ವಾಮ್ಯದ ಕೇಬಲ್ ಟಿವಿ ಆಪರೇಟರ್ ಆದ ತಮಿಳುನಾಡು ಅರಸು ಕೇಬಲ್ ಟಿವಿ ಕಾರ್ಪೊರೇಷನ್ (TACTV) ದಿಢೀರ್ ಸ್ಥಗಿತಗೊಳಿಸಿದೆ. ಇದು ರಾಜ್ಯದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ತೀವ್ರ ಕಳವಳ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರದಿಂದ, 'ಅರಸು ಕೇಬಲ್'ನ ಚಾನೆಲ್ ಸಂಖ್ಯೆ 44ರಲ್ಲಿ ಲಭ್ಯವಿದ್ದ 'ಪುದಿಯ ತಲೈಮುರೈ' ಪ್ರಸಾರವು ಏಕಾಏಕಿ ನಿಂತುಹೋಗಿದ್ದು, ಟಿವಿ ಪರದೆಯ ಮೇಲೆ "ಸಿಗ್ನಲ್ ಇಲ್ಲ" ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ ಎಂದು ರಾಜ್ಯದಾದ್ಯಂತ ವೀಕ್ಷಕರು ದೂರುತ್ತಿದ್ದಾರೆ. 'ದ ಫೆಡರಲ್ ಕರ್ನಾಟಕ'ದ ಸಹೋದರ ಸಂಸ್ಥೆಯಾಗಿರುವ 'ಪುದಿಯ ತಲೈಮುರೈ', ತಮಿಳುನಾಡಿನಲ್ಲಿ ತನ್ನ ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಹೆಸರುವಾಸಿಯಾಗಿದೆ. ಚಾನೆಲ್‌ನ ತಾಂತ್ರಿಕ ಮತ್ತು ಆಡಳಿತ ತಂಡಗಳು ಅಕ್ಟೋಬರ್ 3 ರಿಂದ 6ರವರೆಗೆ ಹಲವು ಬಾರಿ ದೂರು ನೀಡಿದರೂ, ಅರಸು ಕೇಬಲ್ ಅಧಿಕಾರಿಗಳಿಂದ ಯಾವುದೇ ಸ್ಪಷ್ಟನೆ ಅಥವಾ ಅಧಿಕೃತ ಪ್ರತಿಕ್ರಿಯೆ ಲಭಿಸಿಲ್ಲ ಎಂದು ವಾಹಿನಿ ವರದಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ 'ಪುದಿಯ ತಲೈಮುರೈ' ವಾಹಿನಿಯು ವಿರೋಧ ಪಕ್ಷಗಳ ಚಟುವಟಿಕೆಗಳಿಗೆ ಹಾಗೂ ನಟ ವಿಜಯ್ ಅವರ ರಾಜಕೀಯ ಬೆಳವಣಿಗೆಗಳಿಗೆ ಹೆಚ್ಚಿನ ಪ್ರಸಾರ ನೀಡಿತ್ತು ಎಂದು ಹೇಳಲಾಗಿದೆ. ಇದಲ್ಲದೆ, ಕರೂರ್ ದೇವಾಲಯದ ಕಾಲ್ತುಳಿತದಂತಹ ದುರ್ಘಟನೆಗಳಲ್ಲಿ ಸರ್ಕಾರದ ವೈಫಲ್ಯಗಳನ್ನು ವಾಹಿನಿ ವರದಿ ಮಾಡಿತ್ತು. ಈ ವರದಿಗಳು ಆಡಳಿತಾರೂಢ ಡಿಎಂಕೆ ಸರ್ಕಾರದ ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿರಬಹುದು ಮತ್ತು ಇದೇ ಪ್ರಸಾರ ಸ್ಥಗಿತಕ್ಕೆ ಮೂಲ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಘಟನೆಯನ್ನು "ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಮೇಲಿನ ದಾಳಿ" ಎಂದು ವಿರೋಧ ಪಕ್ಷಗಳು, ಪತ್ರಕರ್ತರ ಸಂಘಟನೆಗಳು ಮತ್ತು ಆಡಳಿತಾರೂಢ ಮೈತ್ರಿಕೂಟದ ಕೆಲವು ಪಕ್ಷಗಳು ಕೂಡ ತೀವ್ರವಾಗಿ ಖಂಡಿಸಿವೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ, "ತನ್ನ ತಪ್ಪುಗಳ ಬಗ್ಗೆ ಯಾವುದೇ ಟೀಕೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ನೋಡಿಕೊಳ್ಳಲು ಡಿಎಂಕೆ ಸರ್ಕಾರ ಹೊರಟಿದೆ. ಸೇಡಿನ ರಾಜಕಾರಣಕ್ಕಾಗಿ ವಾಹಿನಿಗಳನ್ನೇ ಸ್ಥಗಿತಗೊಳಿಸುವುದು ಖಂಡನೀಯ," ಎಂದು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್, "ಚುನಾವಣೆ ಸಮೀಪಿಸುತ್ತಿದ್ದಂತೆ ವಿರೋಧಿ ಧ್ವನಿಗಳನ್ನು ಹತ್ತಿಕ್ಕಲು ವಾಹಿನಿಗಳನ್ನೇ ಬ್ಲಾಕ್ ಮಾಡಲಾಗುತ್ತಿದೆ. ಇದು ದ್ರಾವಿಡ ಮಾದರಿಯ ಸರ್ವಾಧಿಕಾರದ ನಿಜಬಣ್ಣ," ಎಂದು ಟೀಕಿಸಿದ್ದಾರೆ.
ಸುಮಾರು 7 ವರ್ಷಗಳ ಹಿಂದೆ, ಎಐಎಡಿಎಂಕೆ ಸರ್ಕಾರದ ಅವಧಿಯಲ್ಲಿಯೂ 'ಪುದಿಯ ತಲೈಮುರೈ' ವಾಹಿನಿಯನ್ನು ಇದೇ ರೀತಿ 'ಅರಸು ಕೇಬಲ್'ನಿಂದ ತಾತ್ಕಾಲಿಕವಾಗಿ ತೆಗೆದುಹಾಕಲಾಗಿತ್ತು. ಆಗಲೂ ಪತ್ರಕರ್ತ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಇದನ್ನು ಖಂಡಿಸಿದ್ದವು. ಈ ಬೆಳವಣಿಗೆಯು ರಾಜ್ಯದಲ್ಲಿ ಪತ್ರಿಕಾ ಸ್ವಾತಂತ್ರ್ಯ ಮತ್ತು ಸರ್ಕಾರದ ಹಸ್ತಕ್ಷೇಪದ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.