
ಡಿಎಂಕೆ ಐಟಿ ವಿಭಾಗ ಹಂಚಿಕಂಡಿರುವ ಚಿತ್ರ.
ರೂಪಾಯಿ ಚಿಹ್ನೆ ಬದಲಾವಣೆ ಸಮರ್ಥಿಸಿದ ತಮಿಳುನಾಡು ಸರ್ಕಾರ; ಐತಿಹಾಸಿಕ ಬಳಕೆಯ ಪುರಾವೆ ಹಂಚಿಕೆ
"1935ರ ಪುಸ್ತಕದ ಪುರಾವೆ ಇಲ್ಲಿದೆ. ಆದರೆ ಟೀಕಾಕಾರರೆಲ್ಲ ಈಗ ಸ್ವಯಂ ಘೋಷಿತ ಭಾಷಾ ತಜ್ಞರಾಗಿದ್ದಾರೆ. ಹಾಗಾಗಿ ಏನೂ ಮಾಡಲು ಸಾಧ್ಯವಿಲ್ಲ" ಎಂದು ಡಿಎಂಕೆ ಐಟಿ ವಿಭಾಗವು ತಮ್ಮ ಪೋಸ್ಟ್‌ನಲ್ಲಿ ಲೇವಡಿ ಮಾಡಿದೆ.
ತಮಿಳುನಾಡು (Tamil Nadu) ರಾಜ್ಯದ ಬಜೆಟ್ (Budget) ಲಾಂಛನದಲ್ಲಿ ಅಧಿಕೃತ ರೂಪಾಯಿ ಚಿಹ್ನೆಯ ಬದಲಿಗೆ 'ರು' (ತಮಿಳು ಭಾಷೆಯಲ್ಲಿ ರುಬಾಯಿ) ಎಂಬ ತಮಿಳು ಅಕ್ಷರವನ್ನು ಬಳಸಿರುವುದು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಡಿಎಂಕೆ ಪಕ್ಷವು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಜೊತೆಗೆ, ಡಿಎಂಕೆಯ ಐಟಿ ವಿಭಾಗವು ಟೀಕಾಕಾರರಿಗೆ ತಿರುಗೇಟು ನೀಡಿ, ತಮಿಳು ಇತಿಹಾಸದ ಬಗ್ಗೆ ಅವರಿಗೆ ಸಾಕಷ್ಟು ತಿಳುವಳಿಕೆ ಇಲ್ಲ ಎಂದು ಹೇಳಿದೆ.
ರೂಪಾಯಿಯನ್ನು ತಮಿಳು ಲಿಪಿಯಲ್ಲಿ ಬರೆಯುವುದು ಹೊಸದೇನೂ ಅಲ್ಲ ಎಂದು ಡಿಎಂಕೆ ಐಟಿ ವಿಭಾಗವು ತಿಳಿಸಿದೆ. ಇದರ ಸಮರ್ಥನೆಯಾಗಿ, 1935ರ ತಮಿಳು ಪುಸ್ತಕದಲ್ಲಿ ರೂಪಾಯಿ ಎಂದು ಬರೆಯಲು ತಮಿಳು ಅಕ್ಷರವನ್ನು ಬಳಸಿರುವ ಚಿತ್ರವನ್ನು ಪಕ್ಷವು ಹಂಚಿಕೊಂಡಿದೆ. "ಇತಿಹಾಸವು ಅಜ್ಞಾನಕ್ಕೆ ದುಃಸ್ವಪ್ನದಂತೆ! ರೂಪಾಯಿ ಚಿಹ್ನೆಯ ಬದಲು ತಮಿಳು ಅಕ್ಷರವನ್ನು ಬಳಸಿದ್ದಕ್ಕೆ, ತಮಿಳುನಾಡಿನ ಮೇಲೆ ಸಂಘಿ ವ್ಯವಸ್ಥೆಯು ಮುಗಿಬೀಳುತ್ತಿದೆ. ಅಂದರೆ, ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ತಮಿಳು ಬಳಕೆ ತಪ್ಪೇ?" ಎಂದು ಪಕ್ಷವು ಪ್ರಶ್ನಿಸಿದೆ.
"1935ರ ಪುಸ್ತಕದ ಪುರಾವೆ ಇಲ್ಲಿದೆ. ಆದರೆ ಟೀಕಾಕಾರರೆಲ್ಲ ಈಗ ಸ್ವಯಂ ಘೋಷಿತ ಭಾಷಾ ತಜ್ಞರಾಗಿದ್ದಾರೆ. ಹಾಗಾಗಿ ಏನೂ ಮಾಡಲು ಸಾಧ್ಯವಿಲ್ಲ" ಎಂದು ಡಿಎಂಕೆ ಐಟಿ ವಿಭಾಗವು ತಮ್ಮ ಪೋಸ್ಟ್‌ನಲ್ಲಿ ಲೇವಡಿ ಮಾಡಿದೆ.
2010ರಲ್ಲಿ ರೂಪಾಯಿ ಚಿಹ್ನೆಯನ್ನು ಅಧಿಕೃತವಾಗಿ ಅಳವಡಿಸಿಕೊಳ್ಳುವ ಮೊದಲೇ ತಮಿಳು ಅಕ್ಷರವನ್ನು ರೂಪಾಯಿಗಳಿಗೆ ಬಳಸಲಾಗುತ್ತಿತ್ತು ಎಂದು ತೋರಿಸುವ ನಿಟ್ಟಿನಲ್ಲಿ ಡಿಎಂಕೆ ಐಟಿ ವಿಭಾಗವು ಈ ಪೋಸ್ಟ್ ಹಂಚಿಕೊಂಡಿದೆ. ಇದರ ಜೊತೆಗೆ, ತಮಿಳುನಾಡಿನ ನಾಗರಿಕರೊಬ್ಬರು 2022ರಲ್ಲಿ ಖರೀದಿಸಿದ್ದ ಬಸ್ ಟಿಕೆಟ್‌ಗಳ ಚಿತ್ರವನ್ನೂ ಪಕ್ಷವು ಹಂಚಿಕೊಂಡಿದೆ. ಅದರಲ್ಲಿ 'ರು' ಎಂಬ ತಮಿಳು ಅಕ್ಷರವೂ ಇದೆ. "ಬಸ್ ಟಿಕೆಟ್‌ಗಳಲ್ಲೂ ನಾವು ರೂಪಾಯಿ ಚಿಹ್ನೆಯ ಬದಲು ತಮಿಳು ಅಕ್ಷರದ 'ರು'ವನ್ನು ಬಳಸುತ್ತಿದ್ದೆವು" ಎಂದು ಪಕ್ಷವು ತಿಳಿಸಿದೆ.
ಬಿಜೆಪಿಯಿಂದ ಆಕ್ರೋಶ
ತಮಿಳುನಾಡು ಸರ್ಕಾರವು ರೂಪಾಯಿ ಚಿಹ್ನೆಯನ್ನು ಕೈಬಿಟ್ಟಿದ್ದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಎಂಕೆ ಸರ್ಕಾರವು ಭಾಷೆಯಲ್ಲೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
"ಎಂ.ಕೆ.ಸ್ಟಾಲಿನ್ ಅವರ ನಡೆಯುವ ಪ್ರಾದೇಶಿಕ ಹೆಮ್ಮೆಯ ನೆಪದಲ್ಲಿ ವಿಭಜನೆಯ ಭಾವನೆಯನ್ನು ಉತ್ತೇಜಿಸುತ್ತಿದೆ. ತಮಿಳುನಾಡು ಬಜೆಟ್‌ನಿಂದ ರೂಪಾಯಿ ಚಿಹ್ನೆಯನ್ನು ತೆಗೆದುಹಾಕುವ ಮೂಲಕ ಡಿಎಂಕೆಯು ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸಿದೆ" ಎಂದು ಸಚಿವೆ ನಿರ್ಮಲಾ ಆರೋಪಿಸಿದ್ದಾರೆ.
ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯಿಸಿ, "ಒಬ್ಬ ತಮಿಳಿಗ ವಿನ್ಯಾಸಗೊಳಿಸಿದ, ಇಡೀ ಭಾರತವೇ ಒಪ್ಪಿಕೊಂಡು, ನಮ್ಮ ಕರೆನ್ಸಿಯಲ್ಲಿ ಅಳವಡಿಸಿಕೊಂಡಿರುವ ರೂಪಾಯಿ ಚಿಹ್ನೆಯನ್ನು ಡಿಎಂಕೆ ಸರ್ಕಾರವು ಕಿತ್ತು ಹಾಕಿದೆ. ರೂಪಾಯಿಯ ಅಧಿಕೃತ ಚಿಹ್ನೆಯನ್ನು ವಿನ್ಯಾಸಗೊಳಿಸಿದವರೂ ಡಿಎಂಕೆಯ ಮಾಜಿ ಶಾಸಕನ ಪುತ್ರ ಥಿರು ಉದಯ್ ಕುಮಾರ್. ಸ್ಟಾಲಿನ್ ಅವರೇ, ನೀವೆಂಥಾ ಮೂರ್ಖರು!" ಎಂದು ಟ್ವೀಟ್ ಮಾಡಿದ್ದಾರೆ.

