
ಟಿ.ಎಂ. ಕೃಷ್ಣ ಅವರಿಗೆ ತಮಿಳುನಾಡು ಸಿಎಂ ಬೆಂಬಲ
ಮಾ.23-ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಖ್ಯಾತ ಕರ್ನಾಟಕ ಸಂಗೀತಗಾರ ಟಿ.ಎಂ. ಕೃಷ್ಣ ಅವರಿಗೆ ಶನಿವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಿಎಂ, ʻಗಾಯಕ ತಮ್ಮ ಪ್ರಗತಿಪರ ಸಿದ್ಧಾಂತದಿಂದಾಗಿ ಕೆಲವು ವಲಯಗಳಿಂದ ಟೀಕೆ ಎದುರಿಸುತ್ತಿದ್ದಾರೆ. ಜನಸಾಮಾನ್ಯರ ಬಗ್ಗೆ ನಿರಂತರವಾಗಿ ಮಾತನಾಡುತ್ತಿರುವ ಅವರ ಪ್ರಗತಿಪರ ರಾಜಕಾರಣದ ಹಿನ್ನೆಲೆಯಲ್ಲಿ ಒಂದು ವರ್ಗದ ಜನರು ದ್ವೇಷ ಮತ್ತು ದುರುದ್ದೇಶದಿಂದ ಟೀಕಿಸುತ್ತಿರುವುದು ವಿಷಾದಕರʼ ಎಂದು ಹೇಳಿದ್ದಾರೆ.
ಕೃಷ್ಣ ಅವರಿಗೆ ದಿ ಮ್ಯೂಸಿಕ್ ಅಕಾಡೆಮಿ ಕೆಲವು ದಿನಗಳ ಹಿಂದೆ 'ಸಂಗೀತ ಕಲಾನಿಧಿ' ಪ್ರಶಸ್ತಿ ಘೋಷಿಸಿರುವುದನ್ನು ಕೆಲವು ಸಂಗೀತಗಾರರು ವಿರೋಧಿಸಿದ್ದರು. ಇಂತಹ ಸಂಗೀತಗಾರರು ಪೆರಿಯಾರ್ ಇ.ವಿ.ರಾಮಸ್ವಾಮಿ ಅವರನ್ನು ಟೀಕಿಸಿದ್ದರು. ʻವಿವಾದಕ್ಕೆ ಪೆರಿಯಾರ್ ಅವರನ್ನುಎಳೆದು, ಸುಧಾರಣಾವಾದಿ ನಾಯಕನ ಜಾತಿ ನಿಂದನೆ ಮಾಡುವುದು ಸರಿಯಲ್ಲʼ ಎಂದು ಸ್ಟಾಲಿನ್ ಹೇಳಿದರು. ಧಾರ್ಮಿಕ ನಂಬಿಕೆ ಮತ್ತು ರಾಜಕೀಯ: ಕೃಷ್ಣ ಅವರನ್ನು ಗುರುತಿಸಿದ್ದಕ್ಕಾಗಿ ಸಂಗೀತ ಅಕಾಡೆಮಿಯ ಪದಾಧಿಕಾರಿಗಳನ್ನು ಶ್ಲಾಘಿಸಿದ ಸಿಎಂ, ಕೃಷ್ಣ ಅವರಿಗೆ ಶುಭಾಶಯ ಹೇಳಿದರು.
ʻಕೃಷ್ಣ ಅವರ ಪ್ರತಿಭೆ ಕುರಿತು ಯಾರಿಗೂ ಅಪನಂಬಿಕೆಯಿಲ್ಲ. ರಾಜಕೀಯದೊಂದಿಗೆ ಧಾರ್ಮಿಕ ನಂಬಿಕೆಯನ್ನು ಬೆರೆಸಿದಂತೆ, ʻಸಂಕುಚಿತ ಮನಸ್ಸಿನ ರಾಜಕೀಯ'ವನ್ನು ಸಂಗೀತದೊಂದಿಗೆʼ ಬೆರೆಸಬಾರದು ಎಂದು ಮನವಿ ಮಾಡಿದರು.