
ಕೊರೊನಿಲ್ ಕೋವಿಡ್ ಔಷಧ ಎಂಬ ಹೇಳಿಕೆ ತೆಗೆದುಹಾಕಿ: ದೆಹಲಿ ಹೈಕೋರ್ಟ್
ಬಾಬಾ ರಾಮದೇವ್ ವಿರುದ್ಧ ರಿಷಿಕೇಶ, ಪಾಟ್ನಾ ಮತ್ತು ಭುವನೇಶ್ವರದಲ್ಲಿರುವ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಗಳ ಮೂರು ವೈದ್ಯರ ಸಂಘಟನೆಗಳು 2021 ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.
ಬಾಬಾ ರಾಮದೇವ್ ಅವರಿಗೆ 'ಕೊರೊನಿಲ್' ಕೋವಿಡ್-19 ಗೆ ʻಚಿಕಿತ್ಸೆʼ ಎಂಬ ಸಾರ್ವಜನಿಕ ಹೇಳಿಕೆಯನ್ನು ಹಾಗೂ ಕೋವಿಡ್ ಗೆ ಅಲೋಪಥಿ ಪರಿಣಾಮಕಾರಿಯಲ್ಲ ಎಂಬ ಹೇಳಿಕೆಯನ್ನು ಮೂರು ದಿನಗಳಲ್ಲಿ ಹಿಂಪಡೆಯಬೇಕು ಎಂದು ದೆಹಲಿ ಹೈಕೋರ್ಟ್ ಸೋಮವಾರ (ಜುಲೈ 29) ನಿರ್ದೇಶಿಸಿದೆ.
ರಾಮದೇವ್, ಅವರ ಸಹಾಯಕ ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ಆಯುರ್ವೇದ ವಿರುದ್ಧ ವೈದ್ಯರ ಸಂಘಗಳು 2021 ರಲ್ಲಿ ದಾಖಲಿಸಿದ ಮೊಕದ್ದಮೆಗಳಿಂದ ಈ ನಿರ್ದೇಶನಗಳು ಬಂದಿವೆ.
ನ್ಯಾ. ಅನುಪ್ ಜೈರಾಮ್ ಭಂಭಾನಿ ಅವರು ಕಕ್ಷಿದಾರರನ್ನು ಆಲಿಸಿದ ನಂತರ ಮೇ 21 ರಂದು ಈ ಕುರಿತ ಆದೇಶವನ್ನು ಕಾಯ್ದಿರಿಸಿದ್ದರು. ರಾಮದೇವ್ ಅವರು 'ಕೊರೊನಿಲ್' ಕೋವಿಡ್ 19ಕ್ಕೆ ಚಿಕಿತ್ಸೆ ಎಂದು ಸಾಬೀತಾಗದ ಹೇಳಿಕೆ ನೀಡಿದ್ದಾರೆ. ಆ ಔಷಧಕ್ಕೆ ʻಇಮ್ಯುನೊ ಬೂಸ್ಟರ್ʼ ಎಂದು ಪರವಾನಗಿ ನೀಡಲಾಗಿತ್ತು.
ವೈದ್ಯರ ಪರ ವಾದ ಮಂಡಿಸಿದ ಹಿರಿಯ ವಕೀಲರು, ರಾಮದೇವ್ ಮತ್ತು ಇತರರು ಇಂಥ ಹೇಳಿಕೆಗಳನ್ನು ನೀಡದಂತೆ ತಡೆಯಲು ನಿರ್ದೇಶನ ನೀಡುವಂತೆ ಕೋರಿದ್ದರು. ರಿಷಿಕೇಶ, ಪಾಟ್ನಾ ಮತ್ತು ಭುವನೇಶ್ವರದಲ್ಲಿರುವ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಗಳ ಮೂರು ವೈದ್ಯರ ಸಂಘಟನೆಗಳು 2021 ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.
ಪ್ರಭಾವಿ ವ್ಯಕ್ತಿಯಾದ ರಾಮದೇವ್ ಅವರು ಅಲೋಪಥಿ ಚಿಕಿತ್ಸೆ ಮಾತ್ರವಲ್ಲದೆ ಕೋವಿಡ್-19 ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಸಾರ್ವಜನಿಕರ ಮನಸ್ಸಿನಲ್ಲಿ ಅನುಮಾನ ಬಿತ್ತುತ್ತಿದ್ದಾರೆ. ಕೊರೊನಿಲ್ ಸೇರಿದಂತೆ ಇನ್ನಿತರ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ತಪ್ಪು ಮಾಹಿತಿ ಪ್ರಚಾರ ಮತ್ತು ಮಾರುಕಟ್ಟೆ ತಂತ್ರ ಇದಾಗಿದೆ ಎಂದು ಆರೋಪಿಸಿದ್ದರು.
ಅಕ್ಟೋಬರ್ 27, 2021 ರಂದು ಹೈಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಆಡಳಿತವು ಜುಲೈ ಆರಂಭದಲ್ಲಿ ದಿವ್ಯ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ ಲಿ.ನ 14 ಆಯುರ್ವೇದ ಔಷಧಗಳ ಮಾರಾಟವನ್ನು ನಿಷೇಧಿಸಿತ್ತು.