T20 ವಿಶ್ವ ಕಪ್ ಸೆಮಿ ಫೈನಲ್| ಭಾರತ vs ಇಂಗ್ಲೆಂಡ್: ಭಾರತಕ್ಕೆ ನಾಕೌಟ್ ಹಂತದ ಆತಂಕ
ಭಾರತವು ಸೂಪರ್ 8 ಹಂತದಲ್ಲಿ ತಪ್ಪಿಲ್ಲದ ಆಟ ಆಡಿತು. ಆದರೆ ಸೆಮಿಫೈನಲ್‌ನಲ್ಲಿ ತೀವ್ರ ಒತ್ತಡದಿಂದ ತಪ್ಪುಗಳು ಆಗುವ ಸಾಧ್ಯತೆ ಇದೆ.
ಜಾರ್ಜ್‌ಟೌನ್ (ಗಯಾನಾ), ಜೂನ್ 26- ಟಿ 20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್‌ನೊಂದಿಗೆ ಭಾರತ ಗುರುವಾರ ಸೆಮಿಫೈನಲ್ ನಲ್ಲಿ ಸೆಣೆಸಲಿದೆ. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಒಂದು ದಶಕದಿಂದ ಪೀಡಿಸುತ್ತಿರುವ ನಾಕೌಟ್ ಹಂತದ ಆತಂಕವನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಸೆಮಿ ಫೈನಲ್ ಹಂತದಲ್ಲಿ ಈ ಎರಡು ತಂಡಗಳು 2022ರಲ್ಲಿ ಮುಖಾಮುಖಿಯಾದಾಗ, ಇಂಗ್ಲೆಂಡ್ ಜಯ ಸಾಧಿಸಿತ್ತು. ಆದರೆ, ಅಡಿಲೇಡ್‌ನಲ್ಲಿ ಅನುಭವಿಸಿದ 10 ವಿಕೆಟ್ ಸೋಲಿನಿಂದ ಭಾರತ ಹೊರಬಂದಿದ್ದು,ಈ ಪಂದ್ಯಾವಳಿಯಲ್ಲಿ ಯಾರನ್ನಾದರೂ ಎದುರಿಸಬಲ್ಲ ತಂಡವಾಗಿ ಹೊರಹೊಮ್ಮಿದೆ.
ರೋಹಿತ್ ಶರ್ಮಾ ಮತ್ತು ಅವರ ತಂಡ ಮೇಲ್ನೋಟಕ್ಕೆ ಪ್ರಬಲ ತಂಡದಂತೆ ಕಂಡುಬರುತ್ತದೆ ಮತ್ತು ಸೇಡು ತೀರಿಸಿಕೊಳ್ಳಲು ಸಿದ್ಧವಾಗಿರುವಂತೆ ಕಾಣುತ್ತದೆ.
ಆರಂಭದ ಪಂದ್ಯದಿಂದಲೂ ಸ್ಪಿನ್ನರ್‌ಗಳು ಇಲ್ಲಿ ಬೌಲಿಂಗ್ ನ್ನು ಆನಂದಿಸಿದ್ದಾರೆ. ಭಾರತದ ಕುಲ್‌ದೀಪ್ ಯಾದವ್ ಮತ್ತು ಇಂಗ್ಲೆಂಡ್‌ನ ಆದಿಲ್ ರಶೀದ್ ಅವರು ನಾಕ್ ಔಟ್ ಪಂದ್ಯದಲ್ಲಿ ತಮ್ಮ ಕೌಶಲ ಪ್ರದರ್ಶಿಸಲು ಕಾಯುತ್ತಿದ್ದಾರೆ.
ಸ್ಪಿನ್ನರ್‌ಗಳು ಮಾತ್ರವಲ್ಲ; ಅಫ್ಘಾನಿಸ್ತಾನದ ವೇಗಿ ಫಜಲ್ಹಕ್ ಫಾರೂಕಿ ಅವರು ನ್ಯೂಜಿಲೆಂಡ್ ವಿರುದ್ಧ ಪಂದ್ಯವನ್ನು ಗೆಲ್ಲಿಸುವಂಥ ಪ್ರದರ್ಶನ ನೀಡಿದ್ದರು.
ಜೂನ್ 8 ರಂದು ವೆಸ್ಟ್ ಇಂಡೀಸ್ ಒಂದು ದಿನದ ಪಂದ್ಯದಲ್ಲಿ ಉಗಾಂಡಾವನ್ನು ಹಿಮ್ಮೆಟ್ಟಿಸಿದ ನಂತರ ಇಲ್ಲಿ ಯಾವುದೇ ಪಂದ್ಯ ಆಯೋಜಿಸಿಲ್ಲ. ಇದರಿಂದ, ಸೂಕ್ತವಾದ ಪಿಚ್ ಸಿದ್ಧಪಡಿಸಲು ಕ್ಯುರೇಟರ್‌ಗಳಿಗೆ ಹೆಚ್ಚುವರಿ ಸಮಯ ಸಿಕ್ಕಿತು.
ಭಾರತವು ಸೂಪರ್ 8 ಹಂತದಲ್ಲಿ ತಪ್ಪಿಲ್ಲದ ಆಟ ಆಡಿತು. ಆದರೆ, ಸೆಮಿಫೈನಲ್‌ನ ತೀವ್ರ ಒತ್ತಡದಿಂದ ತಪ್ಪುಗಳು ಆಗಬಹುದು.
ಭಾರತವು ವಿರಾಟ್ ಕೊಹ್ಲಿ ಅವರಿಂದ ರನ್‌ಗಳನ್ನು ನಿರೀಕ್ಷಿಸುತ್ತಿದೆ. ಅವರ ಆರಂಭಿಕ ಪಾಲುದಾರ ಮತ್ತು ನಾಯಕ ರೋಹಿತ್ ನಿರ್ಭೀತ ಕ್ರಿಕೆಟ್ ಮೂಲಕ ಇತರ ಬ್ಯಾಟರ್‌ಗಳಿಗೆ ಮಾದರಿಯನ್ನು ಸೃಷ್ಟಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಅವರ 41 ಎಸೆತಗಳಲ್ಲಿ 92 ರನ್, ಸುಲಭವಾಗಿ ಮರೆಯಲಾಗದಂತಹ ಇನ್ನಿಂಗ್ಸ್ ಆಗಿದೆ. ರೋಹಿತ್ ಮತ್ತು ಕೊಹ್ಲಿ ಇಬ್ಬರಿಗೂ ಟಿ20 ವಿಶ್ವ ಪ್ರಶಸ್ತಿಯನ್ನು ಗೆಲ್ಲುವ ಕೊನೆಯ ಅವಕಾಶ ಇದಾಗಿದೆ. ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಕಾಳಜಿ ವಹಿಸದೆ, ಪವರ್‌ಪ್ಲೇಯಲ್ಲಿ ತೀವ್ರ ವೇಗವಾಗಿ ಆಟ ಆಡುವುದಾಗಿ ರೋಹಿತ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದು ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಸ್ಪಷ್ಟವಾಗಿತ್ತು.
ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಮಾಡಿಲ್ಲ. ಲೆಗ್ ಸ್ಪಿನ್ನರ್ ರಶೀದ್ ವಿರುದ್ಧ ಅವರು ಹೇಗೆ ಆಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್ ಮತ್ತು ಜಾನಿ ಬೈರ್‌ಸ್ಟೋವ್ ಸೇರಿದಂತೆ ಇಂಗ್ಲೆಂಡ್‌ನ ಬಲಗೈ ಆಟಗಾರರ ವಿರುದ್ಧ ಪರಿಣಾಮಕಾರಿ ಬೌಲಿಂಗ್ ಮಾಡಬಲ್ಲ ಯುಜುವೇಂದ್ರ ಚಾಹಲ್ ತಂಡದಲ್ಲಿದ್ದಾರೆ. ಚಾಹಲ್ ಇನ್ನೂ ಪಂದ್ಯವನ್ನುಗೆಲ್ಲಿಸಿಲ್ಲ. ಸೂಪರ್ 8 ಹಂತದಲ್ಲಿ ತಂಡದ ಟ್ರಂಪ್ ಕಾರ್ಡ್ ಆಗಿದ್ದ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಅವರನ್ನು ಮುಂದುವರಿಸುವ ನಿರೀಕ್ಷೆಯಿದೆ.
ಜಸ್ಪ್ರೀತ್ ಬೂಮ್ರಾ ವಿರುದ್ಧ ಇಂಗ್ಲೆಂಡ್ ಸ್ಕೋರ್ ಮಾಡಲು ವಿಶೇಷವಾದದ್ದನ್ನು ಮಾಡಬೇಕಾಗುತ್ತದೆ. ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಪ್ರದರ್ಶನ ಇಲ್ಲಿಯವರೆಗೆ ಭಾರತಕ್ಕೆ ಅಪಾರ ಸಹಾಯ ಮಾಡಿದೆ ಮತ್ತು ಅದು ಹಾಗೆಯೇ ಉಳಿಯುತ್ತದೆ ಎಂಬ ಆಶಯವಿದೆ.
ಮತ್ತೊಂದೆಡೆ, ಇಂಗ್ಲೆಂಡ್ ದಾರಿ ಸುಗಮವಾಗಿಲ್ಲ. ಸೂಪರ್ 8 ರಲ್ಲಿ ಎಡವಿದರು; ದಕ್ಷಿಣ ಆಫ್ರಿಕಕ್ಕೆ ಸೋತರು. ನಾಯಕ ಬಟ್ಲರ್, ಅಮೆರಿಕ ವಿರುದ್ಧ ರನ್ ಗಳಿಸಿದರು. ಅವರು ಪಂದ್ಯದ ದಿಕ್ಕು ಬದಲಿಸುವ ಆಟ ಆಡಬೇಕಿದೆ.
ಅವರ ಆರಂಭಿಕ ಪಾಲುದಾರ ಫಿಲ್ ಸಾಲ್ಟ್, ಪಂದ್ಯವನ್ನು ಎದುರಾಳಿಯಿಂದ ಕಿತ್ತುಕೊಳ್ಳಬಲ್ಲರು. ಭಾರತ ಪವರ್‌ಪ್ಲೇನಲ್ಲಿ ಅವರನ್ನು ಔಟ್ ಮಾಡಬೇಕಾಗುತ್ತದೆ. ಬೈರ್‌ಸ್ಟೋವ್ ಮತ್ತು ಮೊಯಿನ್ ಅಲಿ ಅವರಿಂದ ಹೆಚ್ಚಿನ ರನ್ ನಿರೀಕ್ಷಿಸಲಾಗಿದೆ. ಅವರ ಆಫ್ ಸ್ಪಿನ್ ಭಾರತದ ಎಡಗೈ ಆಟಗಾರರ ವಿರುದ್ಧ ಉಪಯುಕ್ತವಾಗಬಹುದು. ಲಿಯಾಮ್ ಲಿವಿಂಗ್ಸ್ಟೋನ್ ಅವರು ಲೆಗ್ ಮತ್ತು ಆಫ್ ಸ್ಪಿನ್ ಎರಡನ್ನೂ ಬೌಲ್ ಮಾಡುತ್ತಾರೆ. ಅವರು ಅಮೆರಿಕ ವಿರುದ್ಧ ಮಾಡಿದಂತೆ, ಅವರ ಸಂಪೂರ್ಣ ಕೋಟಾ ಓವರ್ ಬೌಲ್ ಮಾಡಬಹುದು.
ರಶೀದ್ ಅವರ ನಾಲ್ಕು ಓವರ್‌ಗಳು ನಿರ್ಣಾಯಕವಾಗಬಹುದು. ವೇಗಿ ಜೋಫ್ರಾ ಆರ್ಚರ್ ಇದುವರೆಗಿನ ಏಳು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೊಸ ಚೆಂಡಿನೊಂದಿಗೆ ರೋಹಿತ್ ಮತ್ತು ಕೊಹ್ಲಿಗೆ ತೊಂದರೆ ನೀಡುವ ಸಾಧ್ಯತೆಯಿದೆ. ಕ್ರಿಸ್ ಜೋರ್ಡಾನ್, ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.
ಪಂದ್ಯದ ದಿನದಂದು ತುಂತುರು ಮಳೆಯ ಸಾಧ್ಯತೆಯಿದ್ದು, ಆಟದ ಮೇಲೆ ಮಳೆ ಪರಿಣಾಮ ಬೀರಬಹುದು.
ತಂಡಗಳು:
ಭಾರತ: ರೋಹಿತ್ ಶರ್ಮಾ (ಸಿ), ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್: ಜೋಸ್ ಬಟ್ಲರ್ (ಸಿ), ಮೊಯಿನ್ ಅಲಿ, ಜೋಫ್ರಾ ಆರ್ಚರ್, ಜೊನಾಥನ್ ಬೈರ್‌ಸ್ಟೋಮ್, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜಾಕ್ಸ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಮಾರ್ಕ್ ವುಡ್.
ಪಂದ್ಯ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ) ಪ್ರಾರಂಭವಾಗುತ್ತದೆ.