
T20 ವಿಶ್ವ ಕಪ್ | ಸೆಮಿಫೈನಲ್ ತಲುಪಿದ ರಶೀದ್ ಖಾನ್ ನೇತೃತ್ವದ ಆಫ್ಘನ್ ತಂಡ
ಜೂನ್ 27 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನವು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.
ಮಳೆಯಿಂದ ಅಡಚಣೆಗೊಳಗಾದ ಸೂಪರ್ 8 ಮುಖಾಮುಖಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಎಂಟು ರನ್‌ಗಳಿಂದ ಜಯ ಗಳಿಸಿದ ಅಫ್ಘಾನಿಸ್ತಾನ, ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ. ಯುದ್ಧ, ರಾಜಕೀಯ ಸವಾಲುಗಳು ಮತ್ತು ತವರು ನೆಲೆಯ ಅನುಪಸ್ಥಿತಿಯಲ್ಲಿ ನಾಯಕ ರಶೀದ್ ಖಾನ್ ಅವರ ಈ ಸಾಧನೆಯು ಅವರ ಕ್ರಿಕೆಟ್ ಪಯಣದ ಐತಿಹಾಸಿಕ ಮೈಲಿಗಲ್ಲು ಆಗಿರಲಿದೆ.
ರಶೀದ್ ಅವರ ತಂಡ ತನ್ನ ಹಿಂದಿನ ಪಂದ್ಯದಲ್ಲಿ 2021 ರ ಚಾಂಪಿಯನ್ ಆಸ್ಟ್ರೇಲಿಯವನ್ನು ಸೋಲಿಸಿತ್ತು. ಜೂನ್ 27 ರಂದು ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ.
ʻಇದು ನಂಬಲಸಾಧ್ಯ. ನನ್ನ ಭಾವನೆಗಳನ್ನು ವಿವರಿಸಲು ಪದಗಳಿಲ್ಲ. ಸ್ವದೇಶದಲ್ಲಿ ಎಲ್ಲರೂ ಸಂತೋಷಪಟ್ಟಿದ್ದಾರೆ,ʼ ಎಂದು ರಶೀದ್ ಪಂದ್ಯದ ನಂತರ ಹೇಳಿದರು.
ಕಡಿಮೆ ಸ್ಕೋರಿನ ಪಂದ್ಯ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ 5 ವಿಕೆಟ್ ಗೆ 115 ರನ್ ಮಾಡಿತು. ಬಾಂಗ್ಲಾದೇಶ ಬೌಲರ್‌ಗಳು 66 ಡಾಟ್ ಬಾಲ್‌ಗಳನ್ನು ಬೌಲ್ ಮಾಡಿದರು.
ಲೆಗ್ ಸ್ಪಿನ್ನರ್ ರಿಶಾದ್ ಹೊಸೈನ್(3/26) ಬೌಲಿಂಗ್ ದಾಳಿಯ ನೇತೃತ್ವ ವಹಿಸಿದ್ದರು. ಅಫ್ಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ 55 ಎಸೆತಗಳಲ್ಲಿ 43 ರನ್ ಗಳಿಸಿದರು.
ಆಗಾಗ ಮಳೆಯಿಂದ ಪಂದ್ಯವನ್ನು ಅಂತಿಮವಾಗಿ 19 ಓವರ್‌ಗಳಿಗೆ ಮೊಟಕುಗೊಳಿಸಲಾಯಿತು. ಇದರಿಂದ ಬಾಂಗ್ಲಾದೇಶಕ್ಕೆ 114 ರ ಪರಿಷ್ಕೃತ ಗುರಿ ನೀಡಲಾಯಿತು.
ಸಮಗ್ರ ಬೌಲಿಂಗ್: ರಶೀದ್ (4/23) ಮತ್ತು ವೇಗಿ ನವೀನ್ ಉಲ್-ಹಕ್ (4/26) ಸಮಗ್ರ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ 2017 ರಲ್ಲಿ ಪೂರ್ಣಕಾಲಿಕ ಐಸಿಸಿ ಸದಸ್ಯರಾದ ನಂತರ ಅಫ್ಘಾನಿಸ್ತಾನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏಕೆ ಮತ್ತು ಹೇಗೆ ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂಬುದನ್ನು ತೋರಿಸಿಕೊಟ್ಟಿತು.
ಬಾಂಗ್ಲಾದೇಶ 17.5 ಓವರ್‌ಗಳಲ್ಲಿ 105 ರನ್‌ಗಳಿಗೆ ಆಲೌಟ್ ಆಯಿತು. ಲಿಟ್ಟನ್ ದಾಸ್ (ಔಟಾಗದೆ 54) ಹೋರಾಟದ ಮನೋಭಾವ ತೋರಿದ ಏಕೈಕ ಆಟಗಾರ. ಅವರು ಡಿಎಲ್‌ಎಸ್ ಸ್ಕೋರ್‌ನಲ್ಲಿ ಮುಂದಿರುವಾಗ, ಆಫ್ಘನ್ನರು ಕೆಲವು ಅನುಮಾನಾಸ್ಪದ ವಿಳಂಬ ತಂತ್ರಗಳನ್ನು ಅನುಸರಿಸಿದರು.
ಭಾರತ ಸೋಮವಾರ ರಾತ್ರಿ ಆಸ್ಟ್ರೇಲಿಯವನ್ನು 24 ರನ್‌ಗಳಿಂದ ಸೋಲಿಸಿದ್ದರಿಂದ, ಆಫ್ಘನ್ನರ ಕೆಲಸ ಸುಲಭವಾಯಿತು.
ವಿಶ್ವಾಸಾರ್ಹ ಆರಂಭಿಕ ಜೋಡಿ: ಅಫ್ಘಾನಿಸ್ತಾನ ತನ್ನ ವಿಜಯಕ್ಕೆ ಆರಂಭಿಕ ಜೋಡಿಯನ್ನು ಅವಲಂಬಿಸಿದೆ. ಮಂಗಳವಾರ ಈ ಕಾರ್ಯತಂತ್ರ ಭಿನ್ನವಾಗಿರಲಿಲ್ಲ. ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ 59 ರನ್‌ಗಳ ಜೊತೆಯಾಟ ಆಡಿದರೆ, ಫಜಲ್ಹಕ್ ಫಾರೂಕಿ ಮತ್ತು ನವೀನ್ ವಿಕೆಟ್‌ಗಳನ್ನು ಪಡೆದರು.
ಫಾರೂಕಿ ತಮ್ಮ ಎರಡನೇ ಓವರ್‌ನಲ್ಲಿ ತಾಂಝಿದ್ ಹಸನ್ (0) ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು.ಆನಂತರ ನವೀನ್ ಅವರು ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂಟೊ (5) ಮತ್ತು ಶಕೀಬ್ ಅಲ್-ಹಸನ್ (0) ಅವರನ್ನು ಔಟ್ ಮಾಡಿದರು. ಬಾಂಗ್ಲಾದೇಶದ ಸ್ಕೋರ್ 31/3 ಆಗಿದ್ದಾಗ, ಮಳೆ ಆರಂಭವಾಗಿ ಆಟ ನಿಂತಿತು. ಮಳೆ ನಿಂತ ಬಳಿಕ ಆಕ್ರಮಣಕಾರಿಯಾಗಿ ಆಟ ಆರಂಭಿಸಿ, ಆರು ಓವರ್‌ಗಳಲ್ಲಿ ಸ್ಕೋರ್ 46/3 ಆಗಿತ್ತು.
ರಶೀದ್ ಕೈಚಳಕ: ಆನಂತರ ಬೌಲಿಂಗಿಗೆ ಬಂದ ರಶೀದ್, ಸತತ ಓವರ್‌ಗಳಲ್ಲಿ ಎರಡು ವಿಕೆಟ್ ಪಡೆದರು. ಆದರೆ, ಬಾಂಗ್ಲಾದೇಶ ತನ್ನ ನಿರ್ಭೀತ ಆಟ ಮುಂದುವರಿಸಿ, ಡಿಎಲ್‌ಎಸ್ ಸ್ಕೋರಿನಲ್ಲಿ ಮುಂದೆ ಇತ್ತು. ಆದರೆ, ಅಫ್ಘಾನ್ ನಾಯಕ ಸತತ ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿದರು. ನ್ಯೂಜಿಲೆಂಡ್‌ನ ಟಿಮ್ ಸೌಥಿ ಅವರ 150 ಟಿ20 ವಿಕೆಟ್ ದಾಖಲೆಯನ್ನು ದಾಟಿದರು.
ಮಳೆ ಮತ್ತೆ ಸುರಿಯಲಾರಂಭಿಸಿದಾಗ, ಬಾಂಗ್ಲಾದೇಶ ಡಿಎಲ್‌ಎಸ್ ಸ್ಕೋರಿನಲ್ಲಿ ಹಿಂದುಳಿದಿತ್ತು.
ಆಫ್ಘನ್ ತರಬೇತುದಾರ ಜೊನಾಥನ್ ಟ್ರಾಟ್, ಆಟವನ್ನು ನಿಧಾನಗೊಳಿಸುವಂತೆ ಹೇಳುತ್ತಿದ್ದುದು ಕಂಡುಬಂತು. ಆಲ್‌ರೌಂಡರ್ ಗುಲ್ಬದಿನ್ ನೈಬ್ ಸ್ನಾಯು ಸೆಳೆತದ ದೂರು ನೀಡಿದರು. ಇದನ್ನು ವಿಳಂಬಗೊಳಿಸುವ ತಂತ್ರವೆಂದು ಪರಿಗಣಿಸಲಾಯಿತು. ದಾಸ್ ಅಫ್ಘಾನಿಸ್ತಾನದ ಪಾಲಿಗೆ ಕಂಟಕವಾಗಿ ಉಳಿದರು.ಚೆಂಡನ್ನು ಸ್ಕ್ವೇರ್ ಲೆಗ್ ಮೂಲಕ ಬಾರಿಸಿ, ಅರ್ಧ ಶತಕವನ್ನು ಪೂರೈಸಿದರು. ಆದರೆ, ಇನ್ನೊಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದವು. ನವೀನ್ ಬಾಂಗ್ಲಾದೇಶದ 9 ಮತ್ತು 10 ನೇ ವಿಕೆಟ್ ಉರುಳಿಸಿದಾಗಿ, ದಾಸ್ ಏಕಾಂಗಿಯಾಗಿ ಉಳಿದುಕೊಂಡರು.
ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ ಬ್ಯಾಟರ್‌ಗಳು, ಕಠಿಣ ಸವಾಲು ಎದುರಿಸಿದರು. ಗುರ್ಬಾಜ್ ಮತ್ತು ಝದ್ರಾನ್ ಜೋಡಿ ವಿಕೆಟ್ ಉಳಿಸಿಕೊಳ್ಳಲು ಆದ್ಯತೆ ನೀಡಿತು. ಆದರೆ, 11 ನೇ ಓವರ್‌ನಲ್ಲಿ ಝದ್ರಾನ್ (29 ಎಸೆತಗಳಲ್ಲಿ 18) ವಿಕೆಟ್ ಹೊಸೈನ್ ಪಾಲಾಯಿ ತು. ರಶೀದ್ ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್ ಹೊಡೆದು, 100 ರನ್ ಗಡಿ ದಾಟಿಸಿದರು.
ಸಂಭ್ರಮಾಚರಣೆ: ತಾಲಿಬಾನ್ ಹಿಡಿತ ಮತ್ತು ಮಹಿಳಾ ಹಕ್ಕುಗಳ ಕಳಪೆ ಸ್ಥಿತಿಯನ್ನು ಉಲ್ಲೇಖಿಸಿ, ಆಸ್ಟ್ರೇಲಿಯ ಆತಿಥ್ಯ ವಹಿಸಲು ನಿರಾಕರಿ ಸಿದ್ದರಿಂದ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಕಳೆದುಕೊಂಡ ಆಫ್ಗನ್ನರ ಪಾಲಿಗೆ ಈ ವಿಜಯ ಹೊಸ ಯುಗದ ಆರಂಭ ಎನ್ನಬಹುದು.
.