ಚುನಾವಣೆಗೂ ಮುನ್ನ ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಧಾನಿಯವರ ವ್ಯವಸ್ಥಿತ ಪ್ರಯತ್ನ: ಕಾಂಗ್ರೆಸ್ ಆರೋಪ
ಚುನಾವಣೆಗೂ ಮುನ್ನ ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಧಾನಿಯವರ ವ್ಯವಸ್ಥಿತ ಪ್ರಯತ್ನ: ಕಾಂಗ್ರೆಸ್ ಆರೋಪ
ಸಾರ್ವಜನಿಕರು ಪಕ್ಷಕ್ಕೆ ನೀಡಿದ ದೇಣಿಗೆಯನ್ನು ತನ್ನ ಖಾತೆಗಳನ್ನು ಸ್ಥಗಿತಗೊಳಿಸಿರುವ ಆಡಳಿತರೂಢ ಬಿಜೆಪಿ ಸರ್ಕಾರ 115.32 ಕೋಟಿ ರೂ.ಗಳನ್ನು ತನ್ನ ಅಧಿಕಾರ ಬಲದಿಂದ ಹಿಂಪಡೆದು ಪ್ರಜಾತಂತ್ರಕ್ಕೆ ಅಪಚಾರ ಮಾಡುತ್ತಿದೆ ಎಂದು ಇಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಜಾತಂತ್ರ ವ್ಯವಸ್ಥೆಯನ್ನು ನಾಶ ಮಾಡಲು, ಸದ್ಯ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಶತಮಾನದ ಇತಿಹಾಸವಿರುವ ವಿರೋಧ ಪಕ್ಷವೊಂದನ್ನು ದುರ್ಬಲಗೊಳಿಸಲು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಆಡಳಿತ ಪಕ್ಷದ ವಿರುದ್ಧ ಟೀಕೆಗಳ ಸುರಿಮಳೆಯನ್ನು ಸುರಿಸಿದೆ.
ಬಹಳ ದಿನಗಳ ನಂತರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಅವರು ಇಂದು ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲ್ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆಗೆ ಬಂದಿರುವ ಸ್ಥಿತಿಯನ್ನು ವಿವರವಾಗಿ ಮಂಡಿಸಿದರಲ್ಲದೆ, ದೇಶದ ಜನ ಇದಕ್ಕೆ ಕನಿಷ್ಠ ಪ್ರತಿಕ್ರಿಯಿಸುವ ಉದಾರತೆಯನ್ನು ತೋರಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಯ ವಿರೋಧ ಪಕ್ಷಗಳ ದಮನಕಾರಿ ನೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾದ ಅಜಯ್ ಮಾಕನ್ ಮುಂತಾದವರು, ಬಿಜೆಪಿಯ ಈ ಪ್ರಕ್ರಿಯೆ ಪ್ರಜಾತಂತ್ರದ ಕತ್ತು ಹಿಸುಕುವ ಯತ್ನ ಎಂದರು. ಪತ್ರಿಕಾಗೋಷ್ಠಿಯ ನಂತರ ಮಾತನಾಡಿದ ರಾಹುಲ್ ಗಾಂಧಿ ʼಅಸುರೀ ಶಕ್ತಿʼ ಗಳ ವಿರುದ್ಧದ ಪ್ರಜಾತಂತ್ರ ಮೌಲ್ಯಗಳ ಹೋರಾಟ ನಿಲ್ಲದು ಎಂದು ಸ್ಪಷ್ಟಪಡಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಖಜಾಂಚಿ ಅಜಯ್ ಮಾಕನ್ ಅವರು ಮಾತನಾಡಿ, ಮೂವತ್ತು ವರ್ಷಗಳ ಹಿಂದಿನ ಪ್ರಕರಣವನ್ನು ಕೆದಕಿರುವ ಕೇಂದ್ರ ಸರ್ಕಾರ ಕಾನೂನಿನ ಕ್ರಮಗಳನ್ನು ಉಲ್ಲಂಘಿಸಿ ಕಾಂಗ್ರೆಸ್‌ನಿಂದ ಇನ್ನೂರ ಹತ್ತು ಕೋಟಿ ಹದಿನಾಲ್ಕು ಲಕ್ಷ ರೂಪಾಯಿ ದಂಡ ವಿಧಿಸಿದೆ. ಇದು ಒಟ್ಟು ಐಟಿ ಮೌಲ್ಯಮಾಪನದ ಶೇ.0.07 ಮಾತ್ರ ಎಂದು ವಿಷಾದಿಸಿದ್ದಾರೆ
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, “ಎಲ್ಲಾ ಖಾತೆಗಳು ಚುನಾವಣೆಗೆ ಒಂದು ತಿಂಗಳ ಮುಂಚೆಯೇ ಕಾಂಗ್ರೆಸ್ ಸ್ತಗಿತಗೊಂಡಿವೆ. ನಾವು ಚುನಾವಣೆ ನಡೆಸಲು ಒಂದು ಪೈಸೆಯನ್ನು ಕೂಡ ಬ್ಯಾಂಕ್ ಗಳಿಂದ ತೆಗೆಯಲು ಸಾಧ್ಯವಾಗುತ್ತಿಲ್ಲ. ನಾಯಕರು ಪ್ರಚಾರಕ್ಕಾಗಿ ವಿಮಾನದಲ್ಲಿರಲಿ, ರೈಲಿನಲ್ಲಿ ಪ್ರಯಾಣಿಸಲು ಕೂಡ ಸಾಧ್ಯವಾಗುತ್ತಿಲ್ಲ. ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಕೊಡಲು ಸಾಧ್ಯವಾಗುತ್ತಿಲ್ಲ.ಇಂಥ ಸ್ಥಿತಿಗೆ ವಿರೋಧ ಪಕ್ಷಗಳನ್ನು ತಂದು ನಿಲ್ಲಿಸಿರುವುದು ಆಡಳಿತಾರೂಢ ಬಿಜೆಪಿ ಸರ್ಕಾರ ಎಂದು ಕಟುವಾಗಿ ಟೀಕಿಸಿದರು.
ಇಷ್ಟೆಲ್ಲ ಆದರೂ, ದೇಶದ ಪ್ರಜಾಸತ್ತೆಯನ್ನು ಕಾಪಾಡಬೇಕಿರುವ ಪ್ರಜಾತಂತ್ರ ವ್ಯವಸ್ಥೆಯ ಸ್ತಂಬಗಳಾದ ನ್ಯಾಯಾಂಗ, ಚುನಾವಣೆ ಆಯೋಗ ಮೌನವಾಗಿರುವ ಬಗ್ಗೆ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದರು. ಅಂತಿಮವಾಗಿ ಅವರು ಹೇಳಿದ ಮಾತು; ವಿಶ್ವದಾದ್ಯಂತ ಪ್ರಜಾತಂತ್ರ ವ್ಯವಸ್ಥೆ ಇರುವ ಅತಿ ದೊಡ್ಡ ದೇಶ ಭಾರತ ಎಂಬ ಕಲ್ಪನೆಯೇ ಇಂದು ಸುಳ್ಳಾಗಿದೆ ಎಂದು ನೊಂದು ನುಡಿದರು.
ಪ್ರಜಾಪ್ರಭುತ್ವದ ಮೇಲೆ ಪರಿಣಾಮ: “ಕಾಂಗ್ರೆಸ್ ಪಕ್ಷ ಇಂದು ಕೈಗೆತ್ತಿಕೊಳ್ಳುತ್ತಿರುವ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಈ ಸಮಸ್ಯೆಯು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಾತ್ರವಲ್ಲ, ಮೂಲಭೂತವಾಗಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ”ಎಂದು ಸೋನಿಯಾ ಗಾಂಧಿ ಹೇಳಿದರು.
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳಿಂದ ಹಣವನ್ನು ಪಡೆದುಕೊಳ್ಳದಂತೆ ಹೇರಿರುವ ನಿರ್ಬಂಧಗಳು ಕಾಂಗ್ರೆಸ್ ವಿರುದ್ಧದ ʼಕ್ರಿಮಿನಲ್ʼ ಕ್ರಮವಾಗಿದೆ. ಇದು ಪ್ರಧಾನಿ ಮತ್ತು ಗೃಹ ಸಚಿವ [ಅಮಿತ್ ಶಾ] ಮಾಡಿದ ಆರ್ಥಿಕ ಕುತಂತ್ರದ ಕ್ರಿಮಿನಲ್ ಕ್ರಮ ಎಂಬುದು ಸ್ಪಷ್ಟವಾಗಿದೆ. ಇಂದಿನ ಭಾರತದಲ್ಲಿ ಬಿಜೆಪಿಯವರಿಂದ ಅಲ್ಲದೆ, ಬೇರಾರಿಂದಲೂ ಇಂಥ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಸತ್ಯಗಳನ್ನು ತಿರುಚುವಲ್ಲಿ ಅವರು ನಿಷ್ಣಾತರು. ಕಾಂಗ್ರೆಸ್ ಅಸುರೀ ಶಕ್ತಿಗಳ ನಾಶಕ್ಕೆ ಪಣತೊಟ್ಟಿದೆ ಎಂದು ಹೇಳಿದರೆ, ಅದನ್ನು ಯಶಸ್ವಿಯಾಗಿ ತಿರುಚಿ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ʼಶಕ್ತಿʼ ಶಬ್ದವನ್ನು ಮಾತ್ರ ಬಳಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಣಿಯಹೊರಟಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಪ್ರೆಸ್‌ಗಾಗಿ ಬಿಡುಗಡೆ ಮಾಡಿದ ಮಾಕನ್ ಅವರ ಹೇಳಿಕೆಯಲ್ಲಿ, ಜನಸಾಮಾನ್ಯರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ ದೇಣಿಗೆಯನ್ನು ಬಿಜೆಪಿ ಲೂಟಿ ಮಾಡಿದೆ ಎಂದು ಆರೋಪಿಸಿದರು. ನಮ್ಮ ಖಾತೆಗಳನ್ನು ಸ್ಥಗಿತಗೊಳಿಸುವುದು ಮತ್ತು ಅವರಿಂದ 115.32 ಕೋಟಿಗಳನ್ನು ಬಲವಂತವಾಗಿ ಹಿಂಪಡೆಯುವುದು. ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಆದಾಯ ತೆರಿಗೆ ಪಾವತಿಸುವುದಿಲ್ಲ. ಏಕೆಂದರೆ ಅದು ಬಾಂಡ್ ಮೂಲಕ ಸಂಗ್ರಹಗೊಂಡ ಹಣಕ್ಕೆ ರಾಜಕೀಯ ಪಕ್ಷಗಳು ತೆರಿಗೆ ನೀಡಬೇಕಿಲ್ಲ. ಅವು ತೆರಿಗೆ ಭಾರದಿಂದ ಮುಕ್ತವಾಗಿವೆ. ಆದರೆ, ಕಾಂಗ್ರೆಸ್‌ನ 11 ಬ್ಯಾಂಕ್ ಖಾತೆಗಳನ್ನು ಲೋಕಸಭೆ ಚುನಾವಣೆಗೂ ಮುನ್ನ ಸ್ಥಗಿತಗೊಳಿಸಲಾಗಿದೆ.
ಪತ್ರಿಕಾಗೋಷ್ಠಿಯ ನಂತರ ಮಾತನಾಡಿದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್, “ನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಯತ್ನಿಸುತ್ತಿರುವ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ವಿರೋಧಿಸಿ, ನಾವು ನೇರವಾಗಿ ಜನಗಳ ಬಳಿಗೇ ಹೋಗುತ್ತೇವೆ. ಪ್ರಜಾಪ್ರಭುತ್ವ ಉಳಿಸಿ ಎಂದು ನಾವು ಜನರಲ್ಲಿ ಮನವಿ ಮಾಡುತ್ತೇವೆ. ಆಡಳಿತರೂಢ ಬಿಜೆಪಿ ಸರ್ಕಾರ ಎಂಥ ಅಡೆತಡೆಗಳನ್ನೊಡ್ಡಿದರೂ, ನಾವು ಅದನ್ನು ಸಮರ್ಥವಾಗಿ ಎದುರಿಸುತ್ತೇವೆ” ಎಂದು ತಿಳಿಸಿದರು.